“ಸ್ವಯಂ ನಂಬಿಕೆಯೇ ಯಶಸ್ಸಿನ ಮೊದಲ ಹೆಜ್ಜೆ: ಜನರ ಮಾತಿಗೆ ಹೆದರದೆ ಗುರಿ ಮುಟ್ಟುವುದು ಹೇಗೆ?” – Article by Naveen Habib

ತರಗತಿಯೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಯೊಬ್ಬನನ್ನು ಎದ್ದು ನಿಲ್ಲಿಸಿ, ಪಠ್ಯದ ಒಂದು ಭಾಗವನ್ನು (ಪ್ಯಾರಾವನ್ನು) ಓದುವಂತೆ ಹೇಳಿದರು. ಆ ವಿದ್ಯಾರ್ಥಿ ಎದ್ದು ನಿಂತು ಓದಲು ಶುರು ಮಾಡಿದನು. ಆತ ಕೇವಲ ಎರಡೇ ಮೂರು ಸಾಲುಗಳನ್ನು ಓದಿದ್ದಷ್ಟೇ, ತಕ್ಷಣ ಶಿಕ್ಷಕರು “ಸೀಟ್ ಡೌನ್” (ಕುಳಿತುಕೋ) ಎಂದರು.

ಆ ಹುಡುಗ ಒಮ್ಮೆ ಆಕಡೆ ಈಕಡೆ  ಗೊಂದಲದಿಂದ ನೋಡಿ, ಮತ್ತೆ ಓದು ಮುಂದುವರಿಸಲು ಪ್ರಯತ್ನಿಸಿದನು. ಆಗ ಶಿಕ್ಷಕರು ಮತ್ತೊಮ್ಮೆ “ಸೀಟ್ ಡೌನ್” ಎಂದರು. ಈಗ ಆ ಹುಡುಗನಿಗೆ ತಾನು ತಪ್ಪಾಗಿ ಓದುತ್ತಿರಬಹುದು ಎಂಬ ಭಯವಾಯಿತು. ಹಾಗಾಗಿ ತಾನು ತಪ್ಪು ಮಾಡುತ್ತಿದ್ದೇನೆ ಎಂದುಕೊಂಡು ಹೆದರಿ ಹೋಗಿ ಹಾಗೇ ಮೌನವಾಗಿ ಕುಳಿತುಕೊಂಡನು.

ನಂತರ ಶಿಕ್ಷಕರು ಅದೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿಯನ್ನು ಎದ್ದು ನಿಂತು ಅದೇ ಪ್ಯಾರಾವನ್ನು ಓದುವಂತೆ ಸೂಚಿಸಿದರು. ಆ ಎರಡನೇ ವಿದ್ಯಾರ್ಥಿ ಕೂಡ ಎರಡು ಮೂರು ಸಾಲುಗಳನ್ನು ಓದುತ್ತಿದ್ದಂತೆ, ಶಿಕ್ಷಕರು ಮೊದಲಿನಂತೆಯೇ “ಸೀಟ್ ಡೌನ್” ಎಂದರು. ಆದರೆ ಈ ಹುಡುಗ ಶಿಕ್ಷಕರ ಮಾತಿಗೆ ನಿಲ್ಲದೆ, ತನ್ನ ಓದುವುದನ್ನು ಮುಂದುವರಿಸಿದನು. ಶಿಕ್ಷಕರು ಮತ್ತೆ “ಸೀಟ್ ಡೌನ್” ಎಂದು ಹೇಳಿದರೂ ಆ ಹುಡುಗ ಸ್ವಲ್ಪವೂ ವಿಚಲಿತನಾಗದೆ, ಧೈರ್ಯವಾಗಿ ಇಡೀ ಪ್ಯಾರಾವನ್ನು ಪೂರ್ಣಗೊಳಿಸಿದನು!

ಅವನು ಓದಿ ಮುಗಿಸುತ್ತಿದ್ದಂತೆ, ಶಿಕ್ಷಕರು ಮುಗುಳ್ನಕ್ಕು ಆ ಹುಡುಗನಿಗೆ ಚಪ್ಪಾಳೆ ತಟ್ಟಲು ಶುರು ಮಾಡಿದರು ಮತ್ತು ಇಡೀ ತರಗತಿಯ ಮಕ್ಕಳಿಗೂ “ಎಲ್ಲರೂ ಇವನಿಗೆ ಚಪ್ಪಾಳೆ ತಟ್ಟಿ” ಎಂದು ಪ್ರೋತ್ಸಾಹಿಸಿದರು.

ಇದನ್ನು ನೋಡಿ ಆಶ್ಚರ್ಯಗೊಂಡ ಮೊದಲನೆಯ ವಿದ್ಯಾರ್ಥಿ, ಶಿಕ್ಷಕರ ಬಳಿ ಬಂದು ನೇರವಾಗಿ ಪ್ರಶ್ನಿಸಿದನು:

“ಸರ್, ನಾನು ಓದುವಾಗ ನೀವು ನನಗೆ ‘ಸೀಟ್ ಡೌನ್’ ಎಂದಾಗ ನಾನು ತಕ್ಷಣ ಕುಳಿತುಕೊಂಡೆ. ಆದರೆ ಈಗ ಈತನಿಗೆ ಮಾತ್ರ ನೀವು ಚಪ್ಪಾಳೆ ತಟ್ಟುತ್ತಿದ್ದೀರಿ, ಇದು ಯಾಕೆ ಸರ್?”ಎಂದ 

ಅದಕ್ಕೆ ಆ ಶಿಕ್ಷಕರು ಪ್ರೀತಿಯಿಂದ ಮಂದಹಾಸ ಬೀರುತ್ತಾ ಹೀಗೆ ಉತ್ತರಿಸಿದರು:

“ಕಂದಾ, ಇದನ್ನೇ ನಾನು ನಿಮಗೆಲ್ಲರಿಗೂ ತಿಳಿಸಿಕೊಡಲು ಬಯಸಿದ್ದು. ಮಕ್ಕಳೇ, ನಿಮಗೆ ನಿಮ್ಮ ಮೇಲೆ ಪೂರ್ಣ ನಂಬಿಕೆ ಮತ್ತು ಆತ್ಮವಿಶ್ವಾಸ ಇದ್ದು, ನೀವು ಮಾಡುತ್ತಿರುವ ಕೆಲಸ ನಿಮ್ಮ ಅರಿವಿಗೆ ಸರಿಯಾಗಿದೆ ಅನಿಸಿದರೆ, ಬೇರೆ ಯಾರೇ ನಿಮ್ಮನ್ನು ತಡೆಯಲು ಅಥವಾ ನಿಲ್ಲಿಸಲು ಪ್ರಯತ್ನಿಸಿದರೂ ನೀವು ಎಂದಿಗೂ ನಿಲ್ಲಬಾರದು. ಈ ಗಟ್ಟಿಯಾದ ವಿಶ್ವಾಸ ನಿಮ್ಮ ಒಳಗೆ ಸದಾ ಇರಬೇಕು.”

“ಯಾರು ಇತರರ ಮಾತುಗಳನ್ನು ಕೇಳಿ ಅರ್ಧದಲ್ಲೇ ನಿಂತುಬಿಡುತ್ತಾರೋ, ಅಥವಾ ‘ನಾವು ಮಾಡುತ್ತಿರುವುದು ಇತರರ ದೃಷ್ಟಿಯಲ್ಲಿ ತಪ್ಪಿರಬಹುದು’ ಎಂದು ಸಂಶಯಪಡುತ್ತಾರೋ, ಅಂತಹವರು ಜೀವನದಲ್ಲಿ ಯಾವಾಗಲೂ ಹಿಂದೆಳಿದುಬಿಡುತ್ತಾರೆ. ಆದರೆ ನೆನಪಿಡಿ, ಜೀವನದಲ್ಲಿ ನಾವು ಯಾವುದೇ ಕೆಲಸದ ಬಗ್ಗೆ ಸಂಪೂರ್ಣ ಆತ್ಮವಿಶ್ವಾಸ ಹೊಂದಿದ್ದರೆ, ಜನರ ಮಾತಿಗೆ ಹೆದರಿ ನಮ್ಮ ಪ್ರಯತ್ನವನ್ನು ಎಂದಿಗೂ ನಿಲ್ಲಿಸಬಾರದು ಮತ್ತು ಆ ಕೆಲಸವನ್ನು ಮಾಡಲು ಎಂದಿಗೂ ಭಯಪಡಬಾರದು.”

“ಕಂದಾ, ಇದನ್ನೇ ನಾನು ನಿಮಗೆಲ್ಲರಿಗೂ ತಿಳಿಸಿಕೊಡಲು ಬಯಸಿದ್ದು. ನಮ್ಮ ದೇಶದ ಹೆಮ್ಮೆಯ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ (M.S. Dhoni) ಅವರ ಜೀವನವೇ ಇದಕ್ಕೆ ಅತ್ಯುತ್ತಮ ಉದಾಹರಣೆ.”

“ಧೋನಿಗೆ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ (TTE) ಕೆಲಸ ಸಿಕ್ಕಾಗ, ಆ ಉದ್ಯೋಗದಲ್ಲಿ ಅವರಿಗೆ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ಅವರ ಏಕೈಕ ಕನಸು ಮತ್ತು ಪ್ಯಾಶನ್ ಕ್ರಿಕೆಟ್ ಮಾತ್ರ ಆಗಿತ್ತು; ಕ್ರಿಕೆಟ್‌ನಲ್ಲೇ ಏನಾದರೂ ಸಾಧಿಸಬೇಕು ಎಂಬುದು ಅವರ ಛಲವಾಗಿತ್ತು. ಆದರೆ ಆ ಸಮಯದಲ್ಲಿ ಅವರ ಕುಟುಂಬದವರು, ಸ್ನೇಹಿತರು ಮತ್ತು ಸಮಾಜದ ಜನರು, ‘ಸಿಕ್ಕಿರುವ ಕೇಂದ್ರ ಸರ್ಕಾರದ ಉದ್ಯೋಗ ಬಿಡಬೇಡ, ಇಂತಹ ಅವಕಾಶ ಯಾರಿಗೂ ಸಿಗುವುದಿಲ್ಲ, ನಿನ್ನ ಲೈಫ್ ಸೆಟಲ್ ಆಗುತ್ತದೆ. ಸುಮ್ಮನೆ ಜಾಬ್ ಬಿಟ್ಟು ಕ್ರಿಕೆಟ್ ಅಂತ ಹೋದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ’ ಎಂದು ನಾನಾ ರೀತಿಯಲ್ಲಿ ಹೆದರಿಸಿದರು, ರೈಲ್ವೆ ಜಾಬ್ ಬಿಡಬೇಡ ಎಂದೇ ಒತ್ತಾಯಿಸಿದರು.”

“ಆದರೆ ಧೋನಿ ಯಾರ ಮಾತುಗಳಿಗೂ ಕಿವಿಗೊಡಲಿಲ್ಲ, ಯಾರ ಮಾತನ್ನೂ ಕೇಳಲಿಲ್ಲ! ಯಾಕೆಂದರೆ ಅವರಿಗೆ ತನ್ನ ಕನಸಿನ ಮೇಲೆ, ತನ್ನ ಗುರಿಯ ಮೇಲೆ ಮತ್ತು ತನ್ನ ಆತ್ಮವಿಶ್ವಾಸದ ಮೇಲೆ ಪೂರ್ಣ ನಂಬಿಕೆ ಇತ್ತು. ತಾನು ನಂಬಿದ ಕ್ರಿಕೆಟ್ ಮೇಲಿನ ಅಚಲ ವಿಶ್ವಾಸದಿಂದಾಗಿ ಅವರು ಆ ಸರ್ಕಾರಿ ಉದ್ಯೋಗವನ್ನು ತೊರೆದು ಸಂಪೂರ್ಣವಾಗಿ ಕ್ರಿಕೆಟ್‌ನತ್ತ ಗಮನಹರಿಸಿದರು.

ಮುಂದೆ ಕೂಡ ಬಂದ ನಾನಾ ತರಹದ ಮಾನಸಿಕ ಮತ್ತು ದೈಹಿಕ ಎಲ್ಲಾ ಸಮಸ್ಯೆಗಳನ್ನು ಎದುರಿಸಿದ 

 ಪರಿಣಾಮ? ಭಾರತಕ್ಕೆ ವಿಶ್ವಕಪ್ (World Cup) ತಂದುಕೊಟ್ಟರು. ಇವತ್ತು ಧೋನಿ ಯಾರು, ಅವರ ಸಾಧನೆ ಏನು ಎಂಬುದು ಇಡೀ ದೇಶಕ್ಕಷ್ಟೇ ಅಲ್ಲ, ಜಗತ್ತಿಗೆ ಗೊತ್ತು!”

“ಒಂದ್ವೇಳೆ ಅಂದು ಧೋನಿ ಜನರ ಮಾತುಗಳನ್ನು ಕೇಳಿ ರೈಲ್ವೆ ಜಾಬ್‌ನಲ್ಲೇ ಉಳಿದುಕೊಂಡಿದ್ದರೆ, ಇವತ್ತು ಅವರನ್ನು ಇಡೀ ಜಗತ್ತು ಗುರುತಿಸುತ್ತಿರಲಿಲ್ಲ. ಬದಲಾಗಿ, ದೇಶದ ಯಾವುದೋ ಒಂದು ರೈಲಿನಲ್ಲಿ ಟಿಕೆಟ್ ಚೆಕ್ ಮಾಡಿಕೊಂಡೋ ಅಥವಾ ಸಾಮಾನ್ಯ ಜೀವನದಲ್ಲೋ ಕಳೆದುಹೋಗುತ್ತಿದ್ದರು!”

ಮಾತನ್ನು ಮುಂದುವರಿಸುತ್ತಾ ಶಿಕ್ಷಕರು ತರಗತಿಯ ಎಲ್ಲ ಮಕ್ಕಳಿಗೂ ಹೇಳಿದರು:

ಇದೆ ರೀತಿಯಲ್ಲಿ..

ನಾರಾಯಣ ಮೂರ್ತಿ (N. R. Narayana Murthy) ಮತ್ತು ಸುಧಾ ಮೂರ್ತಿ

ಹಿನ್ನೆಲೆ ಮತ್ತು ಕನಸು: ಇನ್ಫೋಸಿಸ್ (Infosys) ಸಂಸ್ಥೆಯನ್ನು ಸ್ಥಾಪಿಸಲು ಮುಂದಾದಾಗ ನಾರಾಯಣ ಮೂರ್ತಿ ಅವರ ಬಳಿ ದೊಡ್ಡ ಮಟ್ಟದ ಬಂಡವಾಳವಿರಲಿಲ್ಲ. ಸಾಫ್ಟ್‌ವೇರ್ ಕಂಪನಿ ಆರಂಭಿಸುವುದು ಆ ಕಾಲಕ್ಕೆ ಭಾರತದಲ್ಲಿ ದೊಡ್ಡ ಸಾಹಸವಾಗಿತ್ತು. ಬಂಧು-ಬಳಗದವರು ಮತ್ತು ಹಿತೈಷಿಗಳು “ಸುರಕ್ಷಿತವಾದ ಒಳ್ಳೆಯ ಉದ್ಯೋಗ ಮಾಡಿಕೊಂಡು ಇರು, ಈ ಹುಚ್ಚು ಸಾಹಸಕ್ಕೆ ಕೈಹಾಕಿ ಕೈಸುಟ್ಟುಕೊಳ್ಳಬೇಡ” ಎಂದು ಎಚ್ಚರಿಸಿದ್ದರು.

ಆದರೆ,,,

ಗೆಲುವು: ಆದರೆ ತಮ್ಮ ಕನಸಿನ ಮೇಲೆ ಪೂರ್ಣ ನಂಬಿಕೆ ಇಟ್ಟಿದ್ದ ಅವರು, ತಮ್ಮ ಪತ್ನಿ ಸುಧಾ ಮೂರ್ತಿಯವರ ಒಡವೆಗಳನ್ನು ಮಾರಿ ಕಂಪನಿ ಆರಂಭಿಸಿದರು. ಇಂದು ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಬೃಹತ್ ಐಟಿ ಸಾಮ್ರಾಜ್ಯವನ್ನು ಕಟ್ಟಿ, ಭಾರತದ ಐಟಿ ಕ್ಷೇತ್ರದ ಪಿತಾಮಹರಾದರು.

ಧೀರೂಭಾಯಿ ಅಂಬಾನಿ (Dhirubhai Ambani)

ಹಿನ್ನೆಲೆ ಮತ್ತು ಕನಸು: ಗುಜರಾತ್‌ನ ಸಾಮಾನ್ಯ ಶಾಲಾ ಶಿಕ್ಷಕರ ಮಗನಾದ ಧೀರೂಭಾಯಿ ಅಂಬಾನಿ ಯೆಮೆನ್ ದೇಶದ ಗ್ಯಾಸೋಲಿನ್ ಸ್ಟೇಷನ್‌ನಲ್ಲಿ ಪೆಟ್ರೋಲ್ ಹಾಕುವ ಸಣ್ಣ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಮುಂಬೈಗೆ ಬಂದು ಬಟ್ಟೆ ವ್ಯಾಪಾರ ಆರಂಭಿಸಿದಾಗ, ಬಂಡವಾಳವಿಲ್ಲದೆ ದೊಡ್ಡ ವ್ಯವಹಾರ ಮಾಡಲು ಹೊರಟ ಅವರನ್ನು ಎಲ್ಲರೂ ಹುಚ್ಚ ಎಂದರು. “ಸಣ್ಣದಾಗಿ ಯಾವುದಾದರೂ ನೌಕರಿ ಮಾಡಿಕೊಂಡು ಬದುಕು, ದೊಡ್ಡ ಬ್ಯುಸಿನೆಸ್ ನಿನ್ನ ಕೈಯಲ್ಲಿ ಆಗಲ್ಲ” ಎಂದು ಹಿತೈಷಿಗಳೇ ಸಲಹೆ ನೀಡಿದ್ದರು.

ಗೆಲುವು: ಆದರೆ ಯಾರ ಮಾತನ್ನೂ ಲೆಕ್ಕಿಸದೆ ತಮ್ಮದೇ ಆದ ದೂರದೃಷ್ಟಿ ಮತ್ತು ಆತ್ಮವಿಶ್ವಾಸದಿಂದ ‘ರಿಲಯನ್ಸ್’ (Reliance) ಸಾಮ್ರಾಜ್ಯದ ಬೀಜ ಹಾಕಿದರು. ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಅತಿ ದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ, ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದರು.

ಮೇರಿ ಕೋಮ್ (Mary Kom)

ಹಿನ್ನೆಲೆ ಮತ್ತು ಕನಸು: ಈಶಾನ್ಯ ಭಾರತದ ಮಣಿಪುರದ ಬಡ ಕೃಷಿಕ ಕುಟುಂಬದಿಂದ ಬಂದ ಮೇರಿ ಕೋಮ್ ಬಾಕ್ಸಿಂಗ್ ಕ್ರೀಡೆಗೆ ಕಾಲಿಟ್ಟಾಗ ಸಮಾಜದಿಂದ ಭಾರೀ ವಿರೋಧವಿತ್ತು. “ಬಾಕ್ಸಿಂಗ್ ಎನ್ನುವುದು ಹೆಣ್ಣುಮಕ್ಕಳ ಆಟವಲ್ಲ, ಮುಖಕ್ಕೆ ಪೆಟ್ಟು ಬಿದ್ದರೆ ಮದುವೆ ಹೇಗೆ ಆಗುತ್ತದೆ, ಹೆಣ್ಣು ಮಕ್ಕಳು ಅಡುಗೆ ಮನೆಗೆ ಸೀಮಿತ” ಎಂದು ಕುಟುಂಬದವರೇ ಮತ್ತು ಸಮಾಜದವರು ಹೀಯಾಳಿಸಿದ್ದರು.

ಗೆಲುವು: ಜನರ ಈ ಎಲ್ಲ ಮೂದಲಿಕೆಗಳನ್ನು ಮೆಟ್ಟಿ ನಿಂತು, ಮದುವೆ ಮತ್ತು ಮಕ್ಕಳಾದ ನಂತರವೂ ಕ್ರೀಡೆಯನ್ನು ಬಿಡದೆ ಕಠಿಣ ಪರಿಶ್ರಮ ಪಟ್ಟರು. ಒಲಿಂಪಿಕ್ಸ್ ಪದಕ ಸೇರಿದಂತೆ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ 6 ಬಾರಿ ಚಿನ್ನದ ಪದಕ ಗೆದ್ದು, ಇಡೀ ಜಗತ್ತಿಗೆ ಭಾರತದ ಹೆಮ್ಮೆಯ ತಾಯಿಯಾಗಿ ನಿಂತರು.

{ಉಪಸಂಹಾರ} 

ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಕೇವಲ ಪ್ರತಿಭೆ ಅಥವಾ ಅವಕಾಶವಿದ್ದರೆ ಸಾಲದು; ತೂಕದ ಮಾತುಗಳನ್ನು ಆಡುವ ಸಮಾಜದ ನಡುವೆ ನಮ್ಮ ಕನಸಿನ ಮೇಲೆ ನಮಗಿರುವ ಅಚಲವಾದ ಆತ್ಮವಿಶ್ವಾಸವೇ ಅತಿ ದೊಡ್ಡ ಶಕ್ತಿ. ತರಗತಿಯಲ್ಲಿ ಶಿಕ್ಷಕರ ಮಾತು ಕೇಳಿ ಕುಳಿತ ವಿದ್ಯಾರ್ಥಿ ಮತ್ತು ಶಿಕ್ಷಕರ ನಿರಾಕರಣೆಯನ್ನೂ ಮೀರಿ ಪ್ಯಾರಾ ಓದಿ ಮುಗಿಸಿದ ವಿದ್ಯಾರ್ಥಿಯ ಉದಾಹರಣೆಯಾಗಲಿ, ಅಥವಾ ರೈಲ್ವೆ ಉದ್ಯೋಗವನ್ನು ತೊರೆದು ಕ್ರಿಕೆಟ್ ಜಗತ್ತನ್ನು ಗೆದ್ದ ಮಹೇಂದ್ರ ಸಿಂಗ್ ಧೋನಿ ಹಾಗೂ, ಮೇರಿ ಕೋಮ್ ಅವರಂತಹ ದಿಗ್ಗಂತರ ಬದುಕಾಗಲಿ ನಮಗೆ ಒಂದೇ ಒಂದು ಸತ್ಯವನ್ನು ಸ್ಪಷ್ಟವಾಗಿ ಸಾರುತ್ತವೆ.

ಜನರು ಯಾವಾಗಲೂ ನಮ್ಮ ಸಾಮರ್ಥ್ಯವನ್ನು ಪ್ರಶ್ನಿಸುತ್ತಾರೆ, ನಮ್ಮ ಹಾದಿಗೆ ಅಡೆತಡೆಗಳನ್ನು ಒಡ್ಡುತ್ತಾರೆ. ಆದರೆ, ಇತರರ ಟೀಕೆಗಳಿಗೆ ಅಥವಾ ‘ಜನರು ಏನಪ್ಪಾ ಅಂದುಕೊಳ್ಳುತ್ತಾರೆ’ ಎಂಬ ಭಯಕ್ಕೆ ಮಣಿದು ನಮ್ಮ ಗುರಿಯನ್ನು ಅರ್ಧದಲ್ಲೇ ಬಿಟ್ಟುಬಿಟ್ಟರೆ, ನಾವು ಎಂದಿಗೂ ಸಾಮಾನ್ಯರಾಗಿಯೇ ಉಳಿದುಬಿಡುತ್ತೇವೆ. ಬದಲಾಗಿ, ನಮ್ಮ ನಂಬಿಕೆಯ ಮೇಲೆ ಪೂರ್ಣ ವಿಶ್ವಾಸವಿರಬೇಕು. ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ, ಲೋಕದ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ಮುನ್ನಡೆದರೆ, ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ನೆನಪಿಡಿ, ಸ್ವಯಂ ನಂಬಿಕೆಯೇ ಪ್ರತಿಯೊಬ್ಬ ವ್ಯಕ್ತಿಯ ಜೀವದ ಅತ್ಯಂತ ಶ್ರೇಷ್ಠ ಬಂಡವಾಳ.

Leave a Reply

Your email address will not be published. Required fields are marked *