ಉಡುಪಿ: ಉಡುಪಿ ದೊಡ್ಡಣಗುಡ್ಡೆ ರೈತ ಸೇವಾ ಕೇಂದ್ರದ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ-2026 ರ 2 ನೇ ದಿನವಾದ ಇಂದು ಉಡುಪಿ ಜಿಲ್ಲೆಯ ಭೌಗೋಳಿಕ ಗುರುತಿಸುವಿಕೆ ಬೆಳೆಗಳಾದ ಉಡುಪಿ ಮಲ್ಲಿಗೆ ಹಾಗೂ ಮಟ್ಟುಗುಳ್ಳ ಬದನೆ ಬೆಳೆಗಳಿಗೆ ಇರುವ ರಫ್ತು ಅವಕಾಶಗಳ ಬಗ್ಗೆ ಕಾರ್ಯಾಗಾರವನ್ನು ಅಪೇಡಾ ಸಂಸ್ಥೆಯ ಸಹೋಗದಲ್ಲಿ ಆಯೋಜಿಸಲಾಯಿತು.

ಕಾರ್ಯಾಗಾರದ ಬಗ್ಗೆ ಪ್ರಾಸ್ತಾವಿಕವಾಗಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಮಾತನಾಡಿ, ಜಿಲ್ಲೆಯ ಉಡುಪಿ ಮಲ್ಲಿಗೆ ಮತ್ತು ಮಟ್ಟು ಗುಳ್ಳ ಬದನೆ ಬೆಳೆಗಳು ಜಿ.ಐ. ಮಾನ್ಯತೆ ಹೊಂದಿದ್ದು, ಸದರಿ ಬೆಳೆಗಳಡಿ ರೈತ ಉತ್ಪಾದಕರ ಸಂಸ್ಥೆಗಳು ಕಾರ್ಯನಿರ್ವಹಿಸಿದ್ದು, ಸಂಸ್ಥೆಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಬೆಳೆಗಾರರು ಬೆಳೆದ ಉತ್ಪನ್ನಗಳನ್ನು ರಫ್ತು ಮಾಡುವ ಬಗ್ಗೆ ಆಯೋಜಿಸಿರುವ ಕಾರ್ಯಾಗಾರದ ಪ್ರಯೋಜನೆ ಪಡೆಯುವಂತೆ ಕೋರಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಪೇಡಾ, ಬೆಂಗಳೂರಿನ ವ್ಯವಸ್ಥಾಪಕಾರದ ಮಧುಮತಿ ಹಾಗೂ ಕಾರಂತರವರು ಉಡುಪಿ ಮಲ್ಲಿಗೆ ಹಾಗೂ ಮಟ್ಟುಗುಳ್ಳ ಬದನೆ ಬೆಳೆಗಳನ್ನು ರಫ್ತು ಮಾಡಲು ಇರುವ ಅವಕಾಶಗಳು ಹಾಗೂ ರಫ್ತು ಮಾಡಲು ಅಪೇಡಾ ಸಂಸ್ಥೆಯಿಂದ ಸಿಗುವ ಸೌಲತ್ತುಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಸಕ್ತ ಜಿಲ್ಲೆಯಿಂದ ರಫ್ತಾಗುವ ಉತ್ಪನ್ನಗಳಲ್ಲಿ ಜಲೋತ್ಪನ್ನವು ಪ್ರಮುಖವಾಗಿದ್ದು, ರಪ್ತು ಗುಣಮಟ್ಟದ ಮಟ್ಟುಗುಳ್ಳ ಮತ್ತು ಉಡುಪಿ ಮಲ್ಲಿಗೆ ಬೆಳೆಗಳನ್ನು ಉತ್ಪಾದನೆ ಮಾಡಿ ಅವಕಾಶದ ಸದುಪಯೋಗ ಪಡೆಯುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪಕುಲಪತಿಗಳಾದ ಎಂ. ಕೆ. ನಾಯಕ್, ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಬಂಗೇರಾ ಹಾಗೂ ಬೆಳೆಗಾರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹೇಮಂತಕುಮಾರ್ ಎಲ್ ನಿರೂಪಿಸಿ, ಗುರುಪ್ರಸಾದ್ ವಂದಿಸಿದರು.
