ಮನಸ್ಸನ್ನು ಓದುವ ಕಲೆ: ಬಾಂಧವ್ಯದ ಅತಿ ದೊಡ್ಡ ಶಕ್ತಿ,,ಪ್ರೀತಿಯ ಪರಿಭಾಷೆ- Article by Naveen Habib

ನವೀನ್ ಹಬೀಬ್
ಅತಿಥಿ ಉಪನ್ಯಾಸಕರು

ಬೆಳಿಗ್ಗೆ ಶಾಲೆಗೆ ಬಂದ ಕರ್ಣ ನೇರವಾಗಿ ತನ್ನ ತರಗತಿಗೆ ಹೋಗಿ ಪಾಠ ಮುಗಿಸಿ ಹೊರಬರುತ್ತಿದ್ದಂತೆ, ಅಲ್ಲೇ ಬಂದ ಅಟೆಂಡರ್, “ಮಾಸ್ಟರ್, ನಿಮ್ಮನ್ನು ಮೀಟ್ ಮಾಡೋಕೆ ಪೇರೆಂಟ್ಸ್ ಬಂದಿದಾರೆ” ಎಂದರು.

ಅದನ್ನು ಕೇಳಿ ಅಚ್ಚರಿಗೊಂಡ ಕರ್ಣ, “ಸರಿ, ಬರ್ತೀನಿ” ಎಂದು ಅವರ ಬಳಿಗೆ ಹೋದನು. ಅಲ್ಲಿ ನಿಂತಿದ್ದ ಶ್ರುತಿಗೆ ನಮಸ್ತೆ ಮಾಡಿ, “ಬನ್ನಿ ಮೇಡಂ” ಎಂದು ಮಾತನಾಡಿಸುತ್ತಲೇ ಶಾಲೆಯ ಆಡಿಟೋರಿಯಂ ಕಡೆಗೆ ಕರೆದುಕೊಂಡು ಹೋದನು. ಅಲ್ಲಿಗೆ ತಲುಪಿದ ಮೇಲೆ, “ಹೇಳಿ ಮೇಡಂ, ಏನೋ ಇಂಪಾರ್ಟೆಂಟ್ ಮಾತಾಡ್ಬೇಕು ಅಂದಿದ್ರಿ, ಏನಾಯ್ತು?” ಎಂದು ಕುತೂಹಲದಿಂದ ಪ್ರಶ್ನಿಸಿದನು.

ಆಗ ಶ್ರುತಿ ಗಂಭೀರವಾಗಿ, “ಮಾಸ್ಟರ್, ನೀವು ಒಬ್ಬ ಒಳ್ಳೇ ಟೀಚರ್. ನಿಮ್ಮ ಆಲೋಚನೆಗಳು ತುಂಬಾ ಭಿನ್ನ ಹಾಗೂ ಸತ್ಯತೆಯಿಂದ ತುಂಬಿರುತ್ತೆ. ನೀವು ಯೋಚಿಸೋ ರೀತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಶೈಲಿ ನಿಜಕ್ಕೂ ಬೇರೆ. ಅದಕ್ಕೆ ನನಗೂ ಒಂದು ವಿಷಯದ ಕುರಿತಾಗಿ ಸ್ಪಷ್ಟತೆ ಬೇಕಿತ್ತು, ಅದಕ್ಕೇ ನಿಮ್ಮನ್ನ ಮಾತಾಡೋಣ ಅಂತ ಅಷ್ಟೇ,” ಎಂದಳು.

ಅದನ್ನು ಕೇಳಿ ನಿರಾಳನಾದ ಕರ್ಣ ಮುಗುಳ್ನಕ್ಕು, “ಹೌದಾ ಮೇಡಂ, ಏನ್ ಹೇಳಿ? ಭಗವಂತ ನನಗೆ ಕೊಟ್ಟಿರೋ ಬುದ್ಧಿಯಲ್ಲಿ ಎಷ್ಟು ಗೊತ್ತಿದೆಯೋ ಅಷ್ಟು ಪ್ರಾಮಾಣಿಕವಾಗಿ ನಿಮಗೆ ಒಳ್ಳೆಯ ಸಲಹೆ ಕೊಡೋ ಪ್ರಯತ್ನ ಮಾಡ್ತೀನಿ,” ಎಂದನು.

ಅದಕ್ಕೆ ಶ್ರುತಿ, “ಆಯ್ತು, ಹೇಳ್ತಿನಿ ಕೇಳಿ,” ಎಂದು ತಾನು ಮಾತನಾಡಬೇಕಿದ್ದ ವಿಷಯವನ್ನು ಆರಂಭಿಸಲು ಸಿದ್ಧಳಾದಳು.

ಆಗ ಶ್ರುತಿ ತನ್ನ ಮೊದಲ ಪ್ರಶ್ನೆಯನ್ನು ಮುಂದಿಟ್ಟು, “ಮೊದಲನೇದಾಗಿ ಮಾಸ್ಟರ್, ಅಸಲಿಗೆ ಪ್ರೀತಿ ಅಂದ್ರೆ ಏನು?” ಎಂದು ಕೇಳಿದಳು.

ಅದಕ್ಕೆ ಕರ್ಣ ಸ್ವಲ್ಪ ಸಮಯ ಮೌನವಾಗಿ ನಿಂತು, ಆಳವಾದ ಧ್ವನಿಯಲ್ಲಿ ಬಹಳ ಸುಂದರವಾಗಿ ಉತ್ತರಿಸಲು ಆರಂಭಿಸಿದನು.

“ಮೇಡಂ, ಪ್ರೀತಿ ಅನ್ನೋದು ಕೇವಲ ಎರಡು ಮನಸ್ಸುಗಳ ಆಕರ್ಷಣೆಯಲ್ಲ, ಅದೊಂದು ಅಲೌಕಿಕ ಅನುಭವ. ಹೇಗಪ್ಪಾ ಅಂದ್ರೆ—ಈ ಗಾಳಿಯನ್ನು ನಾವು ಕಣ್ಣಿನಿಂದ ನೋಡೋಕಾಗಲ್ಲ, ಮುಟ್ಟಿ ಹಿಡಿದುಕೊಳ್ಳೋಕಾಗೂ ಆಗಲ್ಲ; ಆದರೆ ಗಾಳಿ ಬೀಸಿದಾಗ ಅದರ ತಂಪನ್ನು, ಅದರ ಅಸ್ತಿತ್ವವನ್ನು ನಮ್ಮ ಇಡೀ ಮೈಮನದಿಂದ ಅನುಭವಿಸಬಹುದಲ್ಲವೇ? ಪ್ರೀತಿಯೂ ಅಷ್ಟೇ! ಅದನ್ನು ಬೆರಳುಗಳಿಂದ ಸ್ಪರ್ಶಿಸಲು ಸಾಧ್ಯವಿಲ್ಲ, ಆದರೆ ಪ್ರತಿಯೊಬ್ಬರ ಹೃದಯದ ಸ್ಪಂದನೆಯಲ್ಲಿ ಅದನ್ನು ಅನುಭವಿಸಬಹುದು.

ಹಾಗೆಯೇ, ಪ್ರೀತಿ ಅನ್ನೋದು ಒಂದು ರುಚಿ ಇದ್ದ ಹಾಗೆ,, ಬದುಕಿಗೆ ಪ್ರೀತಿ ಆ ರುಚಿಯನ್ನು ನೀಡುತ್ತದೆ. ಆ ರುಚಿಯನ್ನು ಸವಿದು ಆನಂದಿಸಬಹುದೇ ಹೊರತು, ಅದನ್ನು ಹಿಡಿದು ಕೂತಿರಲು ಸಾಧ್ಯವಿಲ್ಲ.

ಅದಕ್ಕಿಂತ ಮುಖ್ಯವಾಗಿ, ಪ್ರೀತಿ ಎಂದರೆ ಕೇವಲ ಒಡನಾಟವಲ್ಲ; ಅದರಲ್ಲಿ ಎದುರಿನವರ ವ್ಯಕ್ತಿತ್ವಕ್ಕೆ ನೀಡುವ ಅಪಾರ ‘ಗೌರವ’, ಅವರ ಕಷ್ಟ-ಸುಖಗಳಲ್ಲಿ ಜೊತೆಯಾಗಿ ನಿಲ್ಲುವ ಅಚಲವಾದ ‘ಕಾಳಜಿ’, ಮತ್ತು ಯಾವುದೇ ಸ್ವಾರ್ಥವಿಲ್ಲದೆ ಅವರ ಖುಷಿಯನ್ನೇ ತನ್ನ ಖುಷಿ ಎಂದು ಭಾವಿಸುವ ದೊಡ್ಡ ಮನಸ್ಸು ಇರುತ್ತದೆ. ಪ್ರೀತಿ ಎಂದರೇನೇ ಒಂದು ಪರಿಶುದ್ಧ ಸಮರ್ಪಣೆ ಮೇಡಂ,” ಎಂದನು.

“ಪ್ರೀತಿ ಎಂದಾಗ ಅಲ್ಲಿ ವ್ಯಕ್ತಿಗಳ ಅಸ್ತಿತ್ವ ಗೌಣವಾಗುತ್ತದೆ; ಎರಡು ಮುಗ್ಧ ಹೃದಯಗಳು ತಮ್ಮ ಎಲ್ಲವನ್ನೂ ಪರಸ್ಪರರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡು, ಆತ್ಮದ ಮಟ್ಟದಲ್ಲಿ ನಡೆಸುವ ಮೌನ ಸಂಭಾಷಣೆಯೇ ನಿಜವಾದ ಪ್ರೀತಿ.”

ಪ್ರೀತಿಯ ವಿಶಾಲವಾದ ಲೋಕದಲ್ಲಿ ಬಣ್ಣದ ಗಡಿಗಳಿಲ್ಲ, ರೂಪದ ಮಿತಿಗಳಿಲ್ಲ, ಅರ್ಹತೆಯ ಲೆಕ್ಕಾಚಾರಗಳಿಲ್ಲ ಮತ್ತು ಅಂತರಸ್ತಿನ ಗರ್ವಕ್ಕಾಗಲಿ ಜಾಗವಿಲ್ಲ.”

“ಅಲ್ಲಿ ಮುಖ್ಯವಾಗುವುದು ಕೇವಲ ಒಂದೇ ಒಂದು ಸಂಗತಿ—ಅದೂ ಎದುರಿನವರ ಒಡನಾಟದಲ್ಲಿ ಸಿಗುವ ನೆಮ್ಮದಿ ಮತ್ತು ಪರಸ್ಪರರ ಮೇಲೆ ಇರುವ ಅಚಲ ನಂಬಿಕೆ. ಬಾಹ್ಯ ಲೌಕಿಕ ಅಳತೆಗೋಲುಗಳು ಯಾವುದೂ ಇಲ್ಲದ ಜಾಗವೇ ಪರಿಶುದ್ಧ ಪ್ರೀತಿಯ ನೆಲೆವೀಡು!”

ಕರ್ಣನ ಬಾಯಿಯಿಂದ ಬಂದ ಈ ಅದ್ಭುತ ಮತ್ತು ಅರ್ಥಪೂರ್ಣವಾದ ಉತ್ತರವನ್ನು ಕೇಳಿದ ಶ್ರುತಿ, ಒಂದು ಕ್ಷಣ ಮೂಕಳಾಗಿ ನಿಂತುಬಿಟ್ಟಳು. ಆ ಮಾತುಗಳು ಅವಳ ಮನಸ್ಸನ್ನು ಆಳವಾಗಿ ಸ್ಪರ್ಶಿಸಿದವು.

“ಮಾಸ್ಟರ್ , ಜೀವನ ಅಂದಮೇಲೆ ಪ್ರೀತಿ, ಮದುವೆ ಹಾಗೂ ಒಬ್ಬ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳೋದು ಅನಿವಾರ್ಯ. ಹಾಗಿರುವಾಗ, ಅಂಥ ಸಂದರ್ಭ ಬಂದಾಗ ನಮ್ಮ ಆಯ್ಕೆ ಹೇಗಿರಬೇಕು..?”ಅಂತಾ ಶ್ರುತಿ ಕೇಳ್ತಾಳೆ…

“ಮೇಡಂ, ನೀವು ಕೇಳಿದ ಈ ಪ್ರಶ್ನೆ ಪ್ರತಿಯೊಬ್ಬರ ಜೀವನದ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ಸಂಬಂಧಿಸಿದ್ದು. ಜೀವನ ಅಂದಮೇಲೆ ಸಂಗಾತಿಯ ಆಯ್ಕೆ ಅನಿವಾರ್ಯ, ಹೌದು. ಆದರೆ ಆ ಆಯ್ಕೆ ಹೇಗಿರಬೇಕು ಅಂದ್ರೆ, ಅದು ಕೇವಲ ಒಂದು ಲೌಕಿಕ ಒಪ್ಪಂದವಾಗಬಾರದು; ಬದಲಿಗೆ ಇಡೀ ಜೀವನದ ಪಯಣವನ್ನು ಸುಂದರವಾಗಿಸುವ ಒಡನಾಟವಾಗಬೇಕು.

ನನ್ನ ದೃಷ್ಟಿಯಲ್ಲಿ, ಪ್ರತಿಯೊಂದು ಹೆಣ್ಣು ಹೆಮ್ಮೆಯಿಂದ ತಲೆಎತ್ತಿ ಒಪ್ಪಿಕೊಳ್ಳುವ ಹಾಗೂ ನಮ್ಮ ಹಿರಿಯರು ಕಣ್ಣು ಮುಚ್ಚಿ ನಂಬಿ ಹರಸುವಂತಹ ಸಂಗಾತಿಯ ಆಯ್ಕೆ ಹೀಗಿರಬೇಕು:”

“ಅಂತಸ್ತು, ಆಸ್ತಿ, ಅಥವಾ ಬಾಹ್ಯ ರೂಪಕ್ಕಿಂತ ಹೆಚ್ಚಾಗಿ ಎದುರಿನವರ ಮನಸ್ಸು ಹೇಗಿದೆ ಎಂಬುದು ಮುಖ್ಯ. ನಮ್ಮ ಆಲೋಚನೆಗಳನ್ನು ಗೌರವಿಸುವ, ನಮ್ಮನ್ನು ಇದ್ದ ಹಾಗೆ ಸ್ವೀಕರಿಸುವ ಮತ್ತು ನಮ್ಮ ಸ್ವಾಭಿಮಾನಕ್ಕೆ ಎಂದಿಗೂ ಧಕ್ಕೆ ತರದ ವ್ಯಕ್ತಿತ್ವ ಅಲ್ಲಿರಬೇಕು. ಪ್ರತಿಯೊಬ್ಬ ಹೆಣ್ಣು ಬಯಸುವುದು ತನ್ನ ಅಭಿಪ್ರಾಯಗಳಿಗೆ ಬೆಲೆ ಕೊಡುವ ಜೊತೆಗಾರನನ್ನು.”

“ಮದುವೆ ಎನ್ನುವುದು ಕೇವಲ ಸುಂದರ ದಿನಗಳ ಸಂಭ್ರಮವಲ್ಲ; ಬದುಕಿನ ಏಳು-ಬೀಳುಗಳಲ್ಲಿ, ಬಿರುಗಾಳಿ ಬಂದಾಗ ಕೈ ಬಿಡದೆ ಜೊತೆಯಾಗಿ ನಿಲ್ಲುವ ಧೈರ್ಯ. ಕಷ್ಟದ ಕಾಲದಲ್ಲಿ ಬೆನ್ನೆಲುಬಾಗಿ ನಿಲ್ಲಬಲ್ಲ ದೃಢ ಮನಸ್ಸು ಆ ಆಯ್ಕೆಯಲ್ಲಿರಬೇಕು. ಇದನ್ನು ಹಿರಿಯರು ಅನುಭವದ ಮಾತಿನಲ್ಲಿ ಮೊದಲು ನೋಡುವುದು ಇದನ್ನೇ.”

“ಕೇವಲ ಆಧುನಿಕತೆಯ ಮುಖವಾಡಕ್ಕಿಂತ, ಹಿರಿಯರನ್ನು ಗೌರವಿಸುವ, ಸಂಸಾರದ ಮೌಲ್ಯಗಳನ್ನು ಉಳಿಸಿಕೊಂಡು ಹೋಗುವ ಮತ್ತು ಮಾನವೀಯತೆಯನ್ನು ಮೆರೆಯುವ ಗುಣವಿರುವ ವ್ಯಕ್ತಿಯನ್ನು ನಮ್ಮ ಹಿರಿಯರು ಎಂದೆಂದಿಗೂ ಕಣ್ಣಿಗೆ ಮುಚ್ಚಿಕೊಂಡು ಸ್ವಾಗತಿಸುತ್ತಾರೆ. ಸಂಸ್ಕಾರವೇ ಒಂದು ಕುಟುಂಬದ ಅಡಿಪಾಯ.”

“ಸಂಗಾತಿಯ ಆಯ್ಕೆಯಲ್ಲಿ ಸುಳ್ಳಿನ ಅಡಿಪಾಯ ಇರಬಾರದು. ಆರಂಭದಿಂದ ಕೊನೆಯವರೆಗೆ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವ, ಯಾವುದೇ ಮುಖವಾಡವಿಲ್ಲದೆ ಮುಗ್ಧವಾಗಿ ಮತ್ತು ಪಾರದರ್ಶಕವಾಗಿ ಇರುವ ಸ್ವಭಾವವೇ ನಿಜವಾದ ಆಯ್ಕೆಯ ಮಾನದಂಡವಾಗಬೇಕು.”

“ಪುಸ್ತಕಗಳಿಂದ ಗಳಿಸುವ ವಿದ್ಯಾಭ್ಯಾಸ ಮನುಷ್ಯನಿಗೆ ಬದುಕಿನ ದಾರಿ ತೋರಬಹುದು, ಆದರೆ ಮನೆಯಿಂದ ಬರುವ ಸಂಸ್ಕಾರ ಮಾತ್ರ ಮನುಷ್ಯನ ವ್ಯಕ್ತಿತ್ವವನ್ನು ನಿರ್ಮಿಸುತ್ತದೆ. ಅಕ್ಷರಜ್ಞಾನ ಕಡಿಮೆಯಿದ್ದರೂ ಪರವಾಗಿಲ್ಲ, ಹಿರಿಯರನ್ನು ಗೌರವಿಸುವ, ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮತ್ತು ಮೌಲ್ಯಯುತವಾಗಿ ಬದುಕುವ ಗುಣಗಳೇ ಮನುಷ್ಯನ ಅತಿ ದೊಡ್ಡ ಆಸ್ತಿ.”

“ಸಂಕ್ಷಿಪ್ತವಾಗಿ ಹೇಳುವುದಾದರೆ ಮೇಡಂ—ಯಾವ ವ್ಯಕ್ತಿಯ ಸಾನ್ನಿಧ್ಯದಲ್ಲಿ ನಮಗೆ ಅಸುರಕ್ಷತೆಯ ಭಯವಿರುವುದಿಲ್ಲವೋ, ಬದಲಿಗೆ ಅಪಾರ ನೆಮ್ಮದಿ ಮತ್ತು ಧೈರ್ಯ ಸಿಗುತ್ತದೆಯೋ, ಅಂಥವರೇ ನಮ್ಮ ಬದುಕಿನ ಅತ್ಯಂತ ಸರಿಯಾದ ಮತ್ತು ಪರಿಪೂರ್ಣ ಸಂಗಾತಿ! ಅಂಥ ಆಯ್ಕೆಗೆ ಯಾವ ಹೆಣ್ಣೂ ಇಲ್ಲ ಅನ್ನಲಾರಳು, ಯಾವ ಹಿರಿಯರೂ ಬೇಡ ಅನ್ನಲಾರರು.”

“ಮಾಸ್ಟರ್, ನನಗೆ ಇವಾಗ ಮದುವೆಯಲ್ಲಿ ಇಷ್ಟವಿಲ್ಲ; ನಾನು ಇನ್ನೂ ಓದಬೇಕು, ಜಾಬ್ ತಗೋಬೇಕು. ಆದರೆ ನನಗೆ ನಮ್ಮ ಅತ್ತೆ ಮತ್ತು ಅತ್ತೆ ಮಗನ ಕಾಟ ಜಾಸ್ತಿಯಾಗಿದೆ. ಮನೆಯಲ್ಲೂ ಕೂಡ ಅಪ್ಪ-ಅಮ್ಮ ಅವನನ್ನೇ ಮದುವೆಯಾಗು ಅಂತಿದ್ದಾರೆ. ನನಗೆ ಅವನು ಇಷ್ಟವಿಲ್ಲ. ಅವನಿಗೆ ಜಾಸ್ತಿ ಓದು ಇಲ್ಲ, ಬಟ್ ಒಳ್ಳೆ ವ್ಯಾಪಾರಿ. ಅವನು ನನ್ನ ತುಂಬಾ ಪ್ರೀತಿ ಮಾಡ್ತೀನಿ ಅಂತಾನೇ ನನ್ನೇ ತನ್ನ ಹೆಂಡತಿ ಅಂತಾನೂ ತಿಳ್ಕೊಂಡುಬಿಟ್ಟಿದ್ದಾನೆ. ಏನ್ ಮಾಡಬೇಕು ಅಂತ ಗೊತ್ತಿಲ್ಲ, ಅವನಿಂದ ತಪ್ಪಿಸಿಕೊಳ್ಳೋಕೆ ಏನಾದ್ರೂ ಸಲಹೆ ಕೊಡ್ತೀರಾ…?” ಅಂತಾ ಕೇಳುತ್ತಾಳೆ ಶ್ರುತಿ.

ಅದಕ್ಕೆ ಕರ್ಣ ಬಹಳ ಸಂಯಮದಿಂದ, ಗಂಭೀರವಾಗಿ ಉತ್ತರಿಸುತ್ತಾನೆ:

“ಕ್ಷಮಿಸಿ ಮೇಡಂ, ಈ ವಿಚಾರದಲ್ಲಿ ನಾನು ನಿಮಗೆ ಯಾವುದೇ ನೇರವಾದ ಸಹಾಯವನ್ನಾಗಲಿ ಅಥವಾ ತಪ್ಪಿಸಿಕೊಳ್ಳುವ ಸಲಹೆಯನ್ನಾಗಲಿ ನೀಡಲಾರೆ. ನೀವು ಪ್ರೀತಿ ಬಗ್ಗೆ ಕೇಳಿದ್ರಿ, ನನ್ನ ತಿಳಿದ ಮಟ್ಟಕ್ಕೆ ಹೇಳಿದೆ; ಒಳ್ಳೆ ಸಂಗಾತಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಅಂತ ಕೇಳಿದ್ರಿ, ಅದಕ್ಕೂ ನನ್ನ ಆಲೋಚನೆಗಳನ್ನು ಹಂಚಿಕೊಂಡೆ. ಆದರೆ ಇದು ವೈಯಕ್ತಿಕ ಮತ್ತು ಭವಿಷ್ಯದ ದೊಡ್ಡ ನಿರ್ಧಾರ, ಇದರಲ್ಲಿ ನಾನು ಮಧ್ಯಪ್ರವೇಶಿಸಲಾರೆ. ನಾನು ಭಗವಂತನ ಪ್ಲಾನ್‌ನಲ್ಲಿ ಅಡ್ಡ ಹೋಗುವುದಿಲ್ಲ, ದಯವಿಟ್ಟು ಕ್ಷಮಿಸಿ.

ಅಲ್ಲದೆ, ನಾನು ಹಿಂದೆ ಹೇಳಿದ ಗುಣಗಳು (ಸಂಸ್ಕಾರ, ಮೌಲ್ಯಗಳು, ಒಳ್ಳೆಯ ವಿಚಾರಗಳು) ಆ ಹುಡುಗನಲ್ಲೂ ಇದ್ದರೆ, ನೀವು ಅವನನ್ನು ಒಪ್ಪಿಕೊಂಡು ಮದುವೆಯಾಗುವುದರಲ್ಲಿ ತಪ್ಪೇನಿದೆ? ಒಂದು ವೇಳೆ ಆ ಗುಣಗಳು ಅವನಲ್ಲಿ ಖಂಡಿತಾ ಇಲ್ಲ ಎಂದಾದರೆ, ನೀವು ಸುಮ್ಮನೆ ಕಾಲಹರಣ ಮಾಡದೆ ಮನೆಯಲ್ಲಿ ನಿಮ್ಮ ತಂದೆ-ತಾಯಿಗೆ ನೇರವಾಗಿ ಧೈರ್ಯವಾಗಿ ಹೇಳಿ, ಅವರ ಜೊತೆ ನೀವೇ ಮಾತನಾಡಿ.

ನೋಡಿ ಮೇಡಂ, ನಿಮ್ಮ ಬಗ್ಗೆ ನನಗೆ ಚೆನ್ನಾಗಿ ಗೊತ್ತು, ನಿಮ್ಮ ಪರಿಸ್ಥಿತಿಯೂ ನನಗೆ ಅರ್ಥವಾಗುತ್ತದೆ. ಆದರೆ ಆ ಹುಡುಗ ಹೇಗೋ, ಅವನ ಒಳಮನಸ್ಸು ಹೇಗೋ ನನಗೆ ಏನು ಗೊತ್ತು? ಯಾವುದೂ ಸರಿಯಾಗಿ ಗೊತ್ತಿಲ್ಲದೆ ಅವನ ಬಗ್ಗೆ ತಪ್ಪಾಗಿ ತಿಳಿದುಕೊಂಡು, ಆ ಹುಡುಗನಿಗೆ ಅನ್ಯಾಯ ಮಾಡುವುದು ಸರಿಯಲ್ಲವಲ್ಲ ಅಲ್ವಾ…?”

“ಒಂದುವೇಳೆ ಆ ಹುಡುಗನ ಪ್ರೀತಿ ನಿಷ್ಕಲ್ಮಶವಾಗಿದ್ದು, ನಾನು ಹೇಳಿದ ಎಲ್ಲಾ ಗುಣಗಳು ಅವನಲ್ಲಿ ಇದ್ದು, ನನ್ನ ಸಲಹೆಯಿಂದ ಅವನಿಗೆ ನೀವು ಸಿಗದೆ ಹೋಗುವಂತೆ ಆದರೆ—ಅದು ಬಹಳ ದೊಡ್ಡ ಅಧರ್ಮ ಹಾಗೂ ಪಾಪ ಆಗುತ್ತದೆ ಮೇಡಂ. ನನ್ನ ಆ ತಪ್ಪನ್ನು ಭಗವಂತನಾಗಲಿ, ನನ್ನ ಅಂತರಾತ್ಮವಾಗಲಿ ಯಾವತ್ತೂ ಒಪ್ಪುವುದಿಲ್ಲ, ಕ್ಷಮಿಸುವುದಿಲ್ಲ. ಸೋ ಅದಕ್ಕೆ ಐ ಆಮ್ ಸಾರಿ!

ಬಟ್ ಒನ್ ಥಿಂಗ್… ಕೇವಲ ಅವನು ಓದಿಲ್ಲ ಅನ್ನುವ ಒಂದೇ ಒಂದು ಕಾರಣಕ್ಕೆ ನೀವು ಆತನನ್ನು ಬೇಡ ಅನ್ನೋದು ತಪ್ಪು. ಒಳ್ಳೆಯ ಗುಣಗಳಿರುವ ಆ ಹುಡುಗನ ಬಗ್ಗೆ ನಾನು ನಿಮಗೆ ಸ್ಪಷ್ಟವಾಗಿ ಹೇಳಿದ್ದೇನೆ, ಮುಂದಿನ ಅಂತಿಮ ನಿರ್ಧಾರ ಸಂಪೂರ್ಣವಾಗಿ ನಿಮ್ಮ ಕೈಯಲ್ಲೇ ಇದೆ ಮೇಡಂ” ಎಂದು ಹೇಳಿ ಕರ್ಣ ತನ್ನ ಮಾತಿಗೆ ಮುಕ್ತಾಯ ಹಾಡುತ್ತಾನೆ.

ಕರ್ಣನ ಈ ಆಳವಾದ, ನ್ಯಾಯಸಮ್ಮತವಾದ ಮತ್ತು ವಿವೇಚನೆಯಿಂದ ಕೂಡಿದ ಮಾತುಗಳನ್ನೆಲ್ಲಾ ಶಾಂತವಾಗಿ ಆಲಿಸಿದ ಶ್ರುತಿ, “ಮಾಸ್ಟರ್, ಇಷ್ಟೆಲ್ಲ ಆಳವಾದ ಆಲೋಚನೆಗಳನ್ನು ಹೇಳಿ ನನಗೆ ಸರಿಯಾದ ದಾರಿ ತೋರಿಸಿದ್ದಕ್ಕೆ ಧನ್ಯವಾದಗಳು” ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ…

ಧನ್ಯವಾದಗಳು.. 🙏

Leave a Reply

Your email address will not be published. Required fields are marked *