
✍️ ಚಿಮಕ
ಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ
ಗಿಡಮರ ಬೆಳೆಸಿ ಭೂಸಿರಿಯನು ಉಳಿಸೋಣ ಈ ಲೋಕದಲಿ,
ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗೋಣ ಜೀವರಾಶಿಯಲಿ.
ಪ್ರಕೃತಿ ಜೊತೆಯಲಿ ಸಾಗುವ ಈ ಸುಂದರ ಪಯಣದಲಿ,
ನೆಮ್ಮದಿ ಸ್ವರ್ಗವ ಕಾಣೋಣ ನಮ್ಮ ಬಾಳಿನಲಿ! || ೧ ||
ಮನುಜರೆಲ್ಲ ಒಂದೇ ಭೂಮಿತಾಯಿ ಮಡಿಲಲಿ,
ಬಾಳಿ ಬದುಕಬೇಕಿದೆ ನಾವು ಈ ಧರೆಯಲಿ.
ಆಸೆ-ಆಕಾಂಕ್ಷೆಗಳ ಮರೆತು ಈ ಧರಣಿಯಲಿ,
ಪ್ರೀತಿ ಹಂಚೋಣ ನಾವು ಸೃಷ್ಟಿಯ ಭುವಿಯಲಿ! || ೨ ||
ನೆರಳನು ನೀಡುತ ತಂಪನು ಕೊಡುವ ಕಾನನದಲಿ,
ನಿಸರ್ಗದ ಸೊಬಗು ನಲಿದಾಡುವ ತೋಟದಲಿ.
ಉಸಿರಿನ ಗಾಳಿ ತರುವ ಕಾಡಿನ ರಕ್ಷಣೆಯಲಿ,
ಸಕಲ ಜೀವಿಗಳ ರಕ್ಷಣೆ ದೇವನ ಸೃಷ್ಟಿಯಲಿ! || ೩ ||
ಧರೆಯ ಒಡಲು ಬೆಂದು ದಹಿಸುವ ಈ ಸಮಯದಲಿ,
ದೇಶದ ಪ್ರಾಣ ಉಳಿಸುವ ಶಪಥದಲಿ.
ಮೋಡವು ಮಳೆ ಸುರಿಸಿ ತಂಪನು ಚೆಲ್ಲುವ ಮುಗಿಲಲಿ,
ಹಸಿರು ಕ್ರಾಂತಿ ಮಾಡೋಣ ಈ ಮಣ್ಣಲಿ! || ೪ ||
ಹಸಿರನು ಬೆಳೆಸಿದರೆ ಇಂದಿನ ದಿನಗಳಲಿ,
ಉಸಿರನು ಕಾಯುವುದು ನಾಳಿನ ಕ್ಷಣಗಳಲಿ.
ನಿಸ್ವಾರ್ಥದ ಪ್ರೀತಿ ಬೆಳಗಲಿ ಎಲ್ಲರ ಮನಗಳಲಿ,
ಇದೇ ಅಲ್ಲವೇ ಶ್ರೇಷ್ಠ ಉಡುಗೊರೆ ವಿಶ್ವದ ಒಡಲಲಿ! || ೫ ||
ಬತ್ತಿ ಹೋಗುವ ನದಿಗಳ ಕಾಯುವ ಹೊಣೆಯಲಿ,
ಜಲವೇ ಜೀವದ ನೆಲೆಯೆಂದು ತಿಳಿಯೋಣ ಬದುಕಿನಲಿ.
ಮುಂದಿನ ಪೀಳಿಗೆ ಹಕ್ಕನ್ನು ಕಾಯುವ ಹಾದಿಯಲಿ,
ಹಸಿರು ನಾಡನ್ನು ಕೊಟ್ಟು ಹೋಗೋಣ ಭೂಸಿರಿಯಲಿ! || ೬ ||
ನವ ಪೀಳಿಗೆ ಬಾಳಿಗೆ ಬೆಳಕಾಗುವ ದಾರಿಯಲಿ,
ಕೋಟಿ ಗಿಡಗಳ ನೆಡೋಣ ಈ ಭೂಮಂಡಲದಲಿ.
ಹಸಿರುಟ್ಟ ವನಸಿರಿಯು ಭೂಷಣವು ಧರೆಯಲಿ,
ಹಸಿರೇ ನಮ್ಮಯ ಉಸಿರೆಂದು ಸಾರೋಣ ಜಗದಲಿ! || ೭ ||
ಬಂದು ಹೋಗುವ ಈ ಜೀವದ ಪಯಣದಲಿ,
ಒಳ್ಳೆಯ ವಿಚಾರಗಳ ಬಿಟ್ಟು ಹೋಗೋಣ ಜಗತ್ತಿನಲಿ.
ನೆಟ್ಟ ಗಿಡಗಳು ಉಸಿರಾಗಿ, ಮರವಾಗಿ ಪ್ರಕೃತಿಯ ನಿಯಮದಲಿ,
ಜಗವು ಸದಾ ಸ್ಮರಿಸುವುದು ನೀಡಿದ ಕೊಡುಗೆಯಲಿ! || ೮ ||
