ಮೂಡುಬಿದಿರೆ ಜೈನಕಾಶಿ ಶ್ರೀ ದಿಗಂಬರ ಜೈನ ಮಠದಲ್ಲಿ 27ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

ಮೂಡುಬಿದಿರೆ: ಮೂಡುಬಿದಿರೆ ಜೈನಕಾಶಿಯ ಶ್ರೀ ದಿಗಂಬರ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ 27ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವವು ಶನಿವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ವರ್ಧಂತ್ಯುತ್ಸವದ ಅಂಗವಾಗಿ ಶ್ರೀ ಗುರುಗಳ ಬಸದಿಯಲ್ಲಿ ಬೆಳಿಗ್ಗೆ 7.15ಕ್ಕೆ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಎಳನೀರು, ಹಾಲು, ಶ್ರೀಗಂಧ ಹಾಗೂ ಸುಗಂಧ ಕಲಶಗಳಿಂದ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಚತುರ್ವಿಂಶತಿ ತೀರ್ಥಂಕರರ ಮಹಾಮಾತೆ ಪದ್ಮಾವತಿ ದೇವಿಗೆ ವಿಶೇಷ ಪೂಜೆ ಹಾಗೂ ಆರತಿ ಸಲ್ಲಿಸಲಾಯಿತು.

ಬಳಿಕ ಶ್ರೀಗಳು ಚಂದನ ಗದ್ದುಗೆ ಮೇಲೆ ವಿರಾಜಮಾನರಾಗಿ 18 ಬಸದಿ ಗೋಷ್ಠಿಗಳ ಪೂಜಾ ಪ್ರಸಾದವನ್ನು ಸ್ವೀಕರಿಸಿದರು. ಬಸದಿ ಪುರೋಹಿತರಿಗೆ ವಸ್ತ್ರದಾನ ಹಾಗೂ ದಕ್ಷಿಣೆ ನೀಡಿ, ನೆರೆದ ಭಕ್ತರಿಗೆ ಹರಸಿ ಆಶೀರ್ವಾದ ಮಾಡಿದರು.

ಶ್ರೀ ಮಠದಲ್ಲಿ ಬೆಳಿಗ್ಗೆ 8.35ಕ್ಕೆ ಮೂಲ ಸ್ವಾಮಿಗೆ ಅಭಿಷೇಕ, ಪೂರ್ವಾಚಾರ್ಯ ಗಣಧರ ಚರಣಗಳಿಗೆ ಅಭಿಷೇಕ ಹಾಗೂ ಮಹಾಮಾತೆ, ಪಟ್ಟದ ಕುಲದೇವಿ ಕುಷ್ಮಾಂಡಿನೀ ದೇವಿಗೆ ಷೋಡಶೋಪಚಾರ ಪೂಜೆ ನೆರವೇರಿಸಲಾಯಿತು.

ಶ್ರವಣಬೆಳಗೊಳ ಕ್ಷೇತ್ರದಿಂದ ಆಗಮಿಸಿದ ಪ್ರತಿನಿಧಿಗಳಾದ ವೃಷಭರು ಶ್ರೀಗಳಿಗೆ ಶ್ರೀಫಲ ಸಮರ್ಪಿಸಿ, ಕ್ಷೇತ್ರದ ಪ್ರಸಾದವನ್ನು ನೀಡಿದರು. ಈ ಸಂದರ್ಭದಲ್ಲಿ ಮೂಡುಬಿದಿರೆ ಸ್ವಾಮೀಜಿಯವರು ಪ್ರತಿನಿಧಿಗಳಿಗೆ ಶಾಲು ಹಾಗೂ ಸ್ಮರಣಿಕೆ ನೀಡಿ ಹರಸಿ ಆಶೀರ್ವದಿಸಿದರು.

ಬಸದಿ ಮುಕ್ತೇಸರ ಪಟ್ಟಣ ಶೆಟ್ಟಿ ಸುದೇಶ್ ಕುಮಾರ್, ಶ್ರೀ ಶಂಭವ ಕುಮಾರ್, ಯಂ. ಬಾಹುಬಲಿ ಪ್ರಸಾದ್, ಪ್ರವೀಣ್ ಚಂದ್ರ, ಸುಧಾಕರ್, ಇಂದ್ರ, ಜ್ಞಾನಚಂದ್ರ, ವೃಷಭರು, ಪುರೋಹಿತರಾದ ನಾಗೇಂದ್ರ ಇಂದ್ರ, ವಿರಾಜ್ ಇಂದ್ರ, ಪಟ್ಟದ ಪುರೋಹಿತರಾದ ಪಾರ್ಶ್ವನಾಥ, ಧರಣೇಂದ್ರ, ಅರವಿಂದ್, ಪ್ರಸಾದ್, ಭಾಸ್ಕರ್ ಕೋಟ್ಯಾನ್, ಭಾರತ್ ಬ್ಯಾಂಕ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ಸಂಜಯಂತ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ವೀತರಾಗ ಭಗವಂತ ಹಾಗೂ ಪೂರ್ವಾಚಾರ್ಯರ, ದೀಕ್ಷಾ ಗುರುಗಳ ಆಶೀರ್ವಾದದಿಂದ ತೀರ್ಥಕ್ಷೇತ್ರದ ಶ್ರೀಮಠದ ಅಭಿವೃದ್ಧಿ ಕಾರ್ಯಗಳನ್ನು ಹಿಂದಿನ ಗುರುಗಳ ಪರಂಪರೆಯಂತೆ ನಡೆಸಿಕೊಂಡು ಬಂದಿರುವುದು ತೃಪ್ತಿ ತಂದಿದೆ ಎಂದರು.

ಸಮಾಜದಲ್ಲಿ ಉತ್ಸಾಹ, ಪ್ರಗತಿಯ ಬಯಕೆ ಹಾಗೂ ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮುದಾಯಗಳ ಐಕ್ಯತೆಯಿಂದ ಗುರುಪೀಠದೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜ ಹಾಗೂ ಮಠದ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.

ಶ್ರೀಮಠದಲ್ಲಿ ಕಳೆದ 14 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನೇಪಾಳ ಮೂಲದ ಗೂರ್ಖಾ ರಾಮ್ ಸಿಂಗ್ ಅವರನ್ನು ಶ್ರೀಗಳು ಗೌರವಿಸಿ ಆಶೀರ್ವಾದ ನೀಡಿದರು.

ವರ್ಧಂತ್ಯುತ್ಸವದ ಅಂಗವಾಗಿ ಸಂಜೆ 6.30ರಿಂದ ಮಹಾವೀರ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗಾವಿ, ಮಹಾರಾಷ್ಟ್ರ, ಮುಂಬೈ ಹಾಗೂ ಉತ್ತರ ಪ್ರದೇಶದ ಝಾನ್ಸಿಯಿಂದ ಆಗಮಿಸಿದ್ದ ಭಕ್ತರು ಶ್ರೀಗಳ ಆಶೀರ್ವಾದ ಪಡೆದರು.

Leave a Reply

Your email address will not be published. Required fields are marked *