ಬೆಂಗಳೂರು: ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಸಮಸ್ತ ಜೈನ ಸಮಾಜದ ಪರವಾಗಿ ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸೇರಿದಂತೆ ಜೈನ ಸಮಾಜದ ಧಾರ್ಮಿಕ ಮುಖಂಡರು ಭೇಟಿ ಮಾಡಿ ಆಶೀರ್ವದಿಸಿದರು.
ವಿಧಾನಸೌಧದ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆದ ಸುಮಾರು 30 ನಿಮಿಷಗಳ ಸಭೆಯಲ್ಲಿ ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ವಾಮೀಜಿ, ವರೂರು-ಹುಬ್ಬಳ್ಳಿಯ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು, ಕೊಲ್ಲಾಪುರದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕರು ಹಾಗೂ ಕಂಬದಹಳ್ಳಿಯ ಶ್ರೀ ಭಾನುಕೀರ್ತಿ ಭಟ್ಟಾರಕರು ಮುಖ್ಯಮಂತ್ರಿಗಳನ್ನು ಗೌರವಿಸಿ, ಹರಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸ್ಮರಣಿಕೆಯಾಗಿ ರವಿಷೇಣ ಆಚಾರ್ಯ ರಚಿತ ಹಾಗೂ ಶ್ರೀ ಜೀವಂಧರ ಕುಮಾರ್ ಹೋತಪೇಟೆ ಅವರು ಅನುವಾದಿಸಿರುವ ‘ಅಧ್ಯಾತ್ಮಯೋಗಿ ಶ್ರೀ ರಾಮ’ ಗ್ರಂಥವನ್ನು ಶಾಸ್ತ್ರ ಸ್ವಾಧ್ಯಾಯಕ್ಕಾಗಿ ಮುಖ್ಯಮಂತ್ರಿಗಳಿಗೆ ನೀಡಲಾಯಿತು.




ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲಿ ನಾಡಿನ ಸರ್ವರಿಗೂ ಒಳಿತಾಗಲಿ, ರಾಜ್ಯದಲ್ಲಿ ರಾಮರಾಜ್ಯದಂತಹ ಉತ್ತಮ ಆಡಳಿತ ನೆಲೆಸಲಿ ಎಂದು ಜೈನ ಧಾರ್ಮಿಕ ಮುಖಂಡರು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಜೈನ ಸಮಾಜಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳೊಂದಿಗೆ ಜೈನ ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.
ಜೈನ ಸಮಾಜದ ಬೇಡಿಕೆಗಳ ಪಟ್ಟಿಯನ್ನು ಪರಿಶೀಲಿಸಿ, ಈ ಕುರಿತು ವಿಚಾರಿಸಿ ಸೂಕ್ತವಾಗಿ ತಿಳಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ್ ಪಾಟೀಲ್, ಮಗಡುಮ್, ವಿನೋದ್ ದೊಡ್ಡಣ್ಣವರ್, ರಾಜಕೀರ್ತಿ, ಅರುಣ್ ಯಲಗುದ್ರಿ, ಮುನ್ನೋಳಿ ವಕೀಲರು, ಆಶಾ ಪ್ರಭು, ಹರ್ಷೇಂದ್ರ ಜೈನ್, ಕರ್ನಾಟಕ ಜೈನ ಅಸೋಸಿಯೇಷನ್ನ ಪದಾಧಿಕಾರಿಗಳು ಹಾಗೂ ಆಶೀಶ್ ಜೈನ್, ನೇಹಾ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
