ನಿಟ್ಟೆ ತಾಂತ್ರಿಕ ಕಾಲೇಜು ಮತ್ತು ಅದಾನಿ ಸಿಮೆಂಟ್ಸ್ ನಡುವೆ ಎಂಒಯು ಸಹಿ

ಕಾರ್ಕಳ: ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗ ಹಾಗೂ ನಿಟ್ಟೆ ಸೆಂಟರ್ ಫಾರ್ ಇನ್‌ಫ್ರಾಸ್ಟ್ರಕ್ಚರ್ ಟೆಕ್ನಾಲಜಿ & ಎಂಜಿನಿಯರಿಂಗ್ ಸರ್ವಿಸಸ್ (N-CITES) ವತಿಯಿಂದ ಅದಾನಿ ಸಿಮೆಂಟ್ಸ್‌ನೊಂದಿಗೆ ಮಹತ್ವದ ಒಪ್ಪಂದ (MoU)ಕ್ಕೆ ಸೆಪ್ಟೆಂಬರ್ 3 ರಂದು ಸಹಿ ಮಾಡಲಾಯಿತು. ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನಡೆದ ಈ ಸಮಾರಂಭವು ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮದ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಒಪ್ಪಂದಕ್ಕೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳುಣ್ಕರ್ ಅವರು ನಿಟ್ಟೆ ಸಂಸ್ಥೆಯ ಪರವಾಗಿ ಹಾಗೂ ಅದಾನಿ ಸಿಮೆಂಟ್ಸ್ ನಿಂದ ಉಡುಪಿ ಹಾಗೂ ಚಿಕ್ಕಮಗಳೂರು ವಿಭಾಗದ ತಾಂತ್ರಿಕ- ವ್ಯವಸ್ಥಾಪಕ  ಕರಿಬಸಯ್ಯ ಸಹಿ ಹಾಕಿದರು. ಈ ಸಹಯೋಗವು ಶೈಕ್ಷಣಿಕ ಪರಿಣತಿ ಮತ್ತು ಕೈಗಾರಿಕಾ ಅನುಭವಗಳ ನಡುವೆ ಪರಿಣಾಮಕಾರಿ ಸಂವಹನಕ್ಕೆ ವೇದಿಕೆ ಒದಗಿಸುವುದರ ಜೊತೆಗೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ಅವಕಾಶ ಕಲ್ಪಿಸಲಿದೆ.

ಎಂಒಯು ಸಹಿ ಸಮಾರಂಭವನ್ನು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಭೋಜರಾಜ ಬಿ.ಇ. ಮತ್ತು ಸಹ ಪ್ರಾಧ್ಯಾಪಕ ಹಾಗೂ N-CITESನ ಪ್ರಧಾನ ಸಲಹೆಗಾರ ಡಾ. ಶೈಕ್ ಕಬೀರ್ ಅಹಮದ್ ಅವರು ಸಂಯೋಜಿಸಿದರು.
ಸಮಾರಂಭಕ್ಕೆ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಶ್ರೀನಾಥ್ ಶೆಟ್ಟಿ ಕೆ., ಸಹ ಪ್ರಾಧ್ಯಾಪಕರಾದ ಡಾ. ರಂಜಿತ್ ಆನಂದ್, ಸಹ ಪ್ರಾಧ್ಯಾಪಕರಾದ ಡಾ. ಪುಷ್ಪರಾಜ್ ಹಾಗೂ ಸಂಶೋಧನಾ ವಿದ್ಯಾರ್ಥಿಯಾದ ಸಮೀರ್ ಕುಮಾರ್ ಅವರು ಸಾಕ್ಷಿಗಳಾಗಿ ಉಪಸ್ಥಿತರಿದ್ದರು.

ಅದಾನಿ ಸಿಮೆಂಟ್ಸ್‌ನೊಂದಿಗೆ ಕೈಜೋಡಿಸಿರುವ ಈ ಸಹಯೋಗವು ಶೈಕ್ಷಣಿಕ ಜ್ಞಾನವನ್ನು ಕೈಗಾರಿಕಾ ಅವಶ್ಯಕತೆಗಳೊಂದಿಗೆ ಸಂಪರ್ಕಿಸುವುದಕ್ಕೆ ಸಹಕಾರಿಯಾಗಲಿದೆ. ಸಂಶೋಧನೆ, ಜ್ಞಾನ ಹಂಚಿಕೆ, ವೃತ್ತಿಪರ ಅಭಿವೃದ್ಧಿ, ಪ್ರಾಯೋಗಿಕ ಅನುಭವ ಹಾಗೂ ಉದ್ಯಮಾಧಾರಿತ ಶೈಕ್ಷಣಿಕ ಚಟುವಟಿಕೆಗಳಿಗೆ ಈ ಸಹಭಾಗಿತ್ವವು ಹೊಸ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *