8 ಸಪ್ಟೆಂಬರ್ ಕ್ರೈಸ್ತರಿಗೆ ಮರಿಯಾ ಜಯಂತಿ

✍️ ರೇಮಂಡ್ ಡಿಕೂನಾ ತಾಕೊಡೆ

ಕ್ರೈಸ್ತ ಜನರಿಗೆ ಎರಡು ಹಬ್ಬಗಳನ್ನು ತಾರೀಖು ಮತ್ತು ತಿಂಗಳ ನಿಯಮಗಳನ್ನು ಅನುಸರಿಸಿ ಆಚರಣೆ ಮಾಡಲು ಇರುತ್ತವೆ.
ಒಂದನೇಯದು ಕ್ರಿಸ್ಮಸ್ ಅದು ಇಪ್ಪತ್ತೈದು ಡಿಸೆಂಬರ್ ಮತ್ತು ಸೆಪ್ಟೆಂಬರ್ 8 ಮರಿಯಮ್ಮ ಅಥವಾ ಯೇಸುವಿನ‌ ತಾಯಿ ಮೇರಿ ಮಾತೆಯ ಜನನ.

ಕ್ರಿಸ್ಮಸ್‌ಗಿಂತ ಭಿನ್ನವಾಗಿ ಮೇರಿ ಮಾತೆಯ ಜನ್ಮವನ್ನು, ತಾಯಿಗೆ ಸಹಜವಾದ ಸನ್ಮಾನ ಊಟೊಪಚಾರ, ಹೂವಿನ ಅರ್ಪಣೆಯ ಉಪಚಾರ ಮಾಡಿ ಮಾಡುವ ವಿಧಾನ ಸೊಗಸಾದ ಒಂದು ಸುಂದರ ನೋಟ.

ಜೊಕಿಮ್ ಮತ್ತು ಆನ್ನಾ ದಂಪತಿಗಳಿಗೆ ದೈವೆಚ್ಚೆಯಂತೆ ಮೇರಿಯ ಗರ್ಭಧಾರಣೆ ಆಗುವುದು ಎಂದು ಹೇಳುತ್ತದೆ ಧರ್ಮ ಗ್ರಂಥ.
ಗೋವಾದಲ್ಲಿ ವಿಶೇಷವಾಗಿ ಹತ್ತಾರು ಕಡೆಗಳಲ್ಲಿ ಪವಾಡವಾಗಿ ವಿವಿಧ ಹೆಸರುಗಳಿಂದ ಮರಣಾನಂತರ ಪ್ರತ್ಯಕ್ಷವಾಗಿ ವರಗಳನ್ನು ನೀಡಿದ ಮಾತೆಯ ಪ್ರತ್ಯಕ್ಷದರ್ಶಿ ರೂಪಗಳನ್ನು ಮಾಡಿ ತೋರಿಸುವ ಪರಿಪಾಠವು ಇದೆ.

ಕರ್ನಾಟಕ ಮತ್ತು ಇಲ್ಲಿಯ ಕರಾವಳಿಯ ಜನರು ಲೋಕದ ಯಾವ್ಯಾವ ದೇಶಗಳಲ್ಲಿ ಇದ್ದಾರೆ ಅಲ್ಲಿ ಮಾತೆಗೆ ಒಂಬತ್ತು ದಿನಗಳ ಹೂವಿನ ಪ್ರೋಕ್ಷಣೆ ಮಕ್ಕಳಿಂದ ಮಾಡಿಸಿ ಜನ್ಮದಿನದ ಪೂರ್ವ ತಯಾರಿ ಮಾಡುತ್ತಾರೆ.

ಇದು ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಸುಂದರ ನೋಟ ನೀಡುತ್ತದೆ. ಆಯಾಪ್ರದೇಶದ ಕಾಡು ಹೂವಿನ ಎಲ್ಲಾ ಪ್ರಕಾರಗಳ ಸಂಗ್ರಹ ಮಾಡಿ ಪ್ರಾರ್ಥನಾ ವಿಧಿಯ ಮೂಲಕ ಅರ್ಪಣೆ ಮಾಡುವ ಸುಂದರ ನೋಟ ರಮಣೀಯ.

ಗುಡ್ಡಗಾಡು, ಗದ್ದೆಗಳಲ್ಲಿ, ಬೇಲಿಯಲ್ಲಿ, ಕಾಡಿನಲ್ಲಿ, ತೋಟದ ಬದುಗಳಲ್ಲಿ, ಬದಿಯಲ್ಲಿ ಇರುವ ಕಾಡುಹೂವುಗಳಿಗೆ ದೇವರಪಾದ ಸೇರುವ ಅಪರೂಪದ ಮತ್ತು ಅಪೂರ್ವ ಸುಸಮಯ ಆಗಸ್ಟ್ 30ರಿಂದ ಸಪ್ಟೆಂಬರ್ 8ರವರೆಗೆ ಇದು.

ಸಂಜೆಯೇ ಹೂಗಳನ್ನು ಕೊಯ್ದು ಬೆಳಗ್ಗೆ ಶಾಲೆಯ ಆವರಣದಲ್ಲಿ ಇರುವ ಚರ್ಚ್ ಒಳಗೆ ಅಲಂಕಾರದಲ್ಲಿ ಇಟ್ಟ ಬಾಲಮೇರಿ‌ಮಾತೆಗೆ ಕೈಯೆತ್ತಿ ಪ್ರೋಕ್ಷಣೆ ಮಾಡುವುದು ಸೊಗಸು.

ಬಾನೆಲ್ಲಾ ಆ ಒಂದು ಗಳಿಗೆಗಳಲ್ಲಿ ನೂರಾರು ಹೂಗಳು ಹಾರಿ ಆಗುವ ರಂಗು ರಮಣೀಯ. ಅದೇ ಹಳೆಯ ‌ಮೇರಿ ಮಾತೆಯ ಗೀತೆಯ ಸಾಲುಗಳ ಸುರಸುಂದರ ರಾಗ “ಮಾತೆಗೆ ಹೊಗಳುವ ಅವರಿಗೆ ವಂದಿಸುವ,ಗಾಯನ ಅವರ ಮಾಡುವ ಸ್ವರ್ಗದಲ್ಲಿ ಪ್ರತಿಧ್ವನಿಸುವ.”

ಆಧುನಿಕತೆ: ಕೃಷಿ ಕ್ರೈಸ್ತ ಜನರ ಜೀವನಾಡಿ ಆಗಿತ್ತು. ಆಗ ಗದ್ದೆಯ ಬದುಗಳಲ್ಲಿ, ತೋಟದ ಬದಿಯಲ್ಲಿ, ಬಾವಿಗಳ ಕಟ್ಟೆಯ ಮೇಲೆ ನೀರಿನ ಆಶ್ರಯಕ್ಕೆ ಹೂಗಳಾದ ಲಿಲ್ಲಿ, ಶಂಖ, ಟೊಪ್ಪಿಗೆ, ಕಾಡುಮಲ್ಲಿಗೆ, ಉರಿಮಲ್ಲಿಗೆ, ಜಿಡ್ಡೆ, ಜೀನಿಯ, ಗೊಂಡೆ, ದಾಸವಾಳ, ಸೇವಂತಿಗೆ, ಗುಲಾಬಿ, ದೊಡ್ಡ ದಾಸವಾಳ, ಬೋಗನ್‌ವಿಲ್ಲಾ, ಮುಳ್ಳಿನ ಗೊಂಡೆ, ಬಟನ್ ಗೊಂಡೆ, ಕಾಡಿನ ಹತ್ತು ಹಲವು ಸೊಪ್ಪಿನ ಗಿಡಗಳಲ್ಲಿ ಹೂವುಗಳು ಮಳೆ ಕೊನೆಯಲ್ಲಿ ಆಗುತ್ತಿದ್ದುವು. ಬೆಳಗ್ಗೆ ಊಟಮಾಡಿದ ಮೇಲೆ ಬಟ್ಟಲು ತೊಳೆದು ಅದರಲ್ಲಿ ಹೂಗಳು ಸುಂದರವಾಗಿ ಮುಡಿದು ಶಾಲೆಯ ಕಡೆ ನಡೆದು ಹೊರಟರೆ ಅದು ಹೂವಿನ ಮೆರವಣಿಗೆ.

ನಾಲ್ಕು ದಾರಿಗಳಿಂದ ಎಲ್ಲಾ ಮಕ್ಕಳು ಹೂಗಳು ಕೈಯಲ್ಲಿ ಹಿಡಿದು ಬರುವ ಸೊಗಸೇ ಅಪಾರ.

ಈಗ ಹಾಗೆ ಇಲ್ಲ. ಹೂವಿನ ಮಂಡಿಯಿಂದ, ಅಂಗಡಿಯಿಂದ ಖರೀದಿಸಿದ ಹೂವುಗಳು. ಅದೂ ಪ್ರೋಕ್ಷಣೆ ಕಲಿಸಬೇಕು. ಸಾಲಾಗಿ ಬಂದು ಬಾಲತಾಯಿ ಮೇರಿ ಮೂರ್ತಿಯ ಬಳಿ ಇಟ್ಟು ನಂತರ ಪ್ರೋಕ್ಷಣೆ. ನಮಗೆ ಸಿಹಿ ಕೊಡುಗೆ ಇರಲಿಲ್ಲ. ಈಗ ನಾಲ್ಕಾರು ಬಗೆಯ ತಿಂಡಿಯನ್ನು ಹೂವು ತಂದ ಮಕ್ಕಳಿಗೆ ಕೊಡುತ್ತಾರೆ.

ಸೆಪ್ಟೆಂಬರ್ 08 ಸೊಗಸಾದ ಕೃಷಿ ಹಬ್ಬದ ಆಚರಣೆ. ಒಂದೂ ಮಾಂಸಹಾರವಿಲ್ಲ. ಸಂಪೂರ್ಣ ಸಸ್ಯಹಾರ.
ಅದೂ ಇಡೀ ಕುಟುಂಬದ ಜೊತೆಯಲ್ಲಿ ಊಟ. ಮನೆಯ ಯಜಮಾನ ಮೊದಲ ತುತ್ತು ಊಟದ ನಂತರ ಇತರ ಸದಸ್ಯರು ಊಟ.
ಇದಕ್ಕೆ ಪುದ್ದರ್, ಕುರಲ್, ಪೊಸ ಒನಸ್ ಹೀಗೆ ತುಳುವರು ಕರೆಯುತ್ತಾರೆ.

8 ಸಪ್ಟೆಂಬರ್ ಆಚರಣೆ: ನವೇನ ಎಂಟು ದಿನಗಳ ಕಾಲ ಬೆಳಗ್ಗೆ ಅಥವಾ ಸಂಜೆಯಲ್ಲಿ ಚರ್ಚ್ ಅನುಕೂಲವಾಗುವಂತೆ ಮಾಡಿ ಸಪ್ಟೆಂಬರ್ 08 ಮಹಾ ಅರಾಧನೆ.

ಇದರಲ್ಲಿ ಹೊಸ ತೆನೆ, ಕಬ್ಬು ಸಿಹಿ ಅಳವಡಿಸಿ ಚರ್ಚ್ ಈ ಯೇಸುವಿನ ತಾಯಿಯ ಜನ್ಮ ದಿನಾಚರಣೆಯನ್ನು ರೈತರ ಹಬ್ಬ ಅಥವಾ ಕೃಷಿ ಹಬ್ಬದ ಸಾಲಿಗೆ ಸೇರಿಸುವ ಮೂಲಕ ಜನರ ಕುಟುಂಬದ ವ್ಯವಸ್ಥೆಯ ಒಂದು ಭಾಗವಾಗಿಸಿದೆ.

ತುಳುನಾಡಿನ ಪರಂಪರೆಯ ಮೂರು, ಐದು, ಏಳು, ಒಂಬತ್ತು, ಹನ್ನೊಂದು ಹೀಗೆ ಓಡ್ ನಂಬರ್ ತರಕಾರಿ ಪಲ್ಯಗಳು ಬಳಸಿಕೊಂಡು ಶಾಕಹಾರಿ ಭೋಜನ ಮಾಡುವ ವಿಧಾನ ತುಳುನಾಡಿನ ಚೌತಿ, ಅಷ್ಟಮಿ, ಓಣಂ, ಪಾಡ್ಯಗಳ ಜೊತೆಗೆ ಇದ್ದು ಆಚರಣೆ ತೋರಿಸುತ್ತದೆ. ಜೊತೆಗೆ ಸಿಹಿಗೆ ಚರ್ಚ್ ಕುಟುಂಬಕ್ಕೆ ಕಬ್ಬು ದಾನಿಗಳು ನೀಡುವ ಹಾಗೆ ಮಾಡುವುದು ಇದೆ.

ಈ ಸಮಯದಲ್ಲಿ ತೆನೆ ಬಾಗಿ ಕೊಯ್ಲಿಗೆ ಬರುತ್ತದೆ ಅದಕ್ಕೆ ಹೊಸ ತೆನೆ ಹಬ್ಬದ ಸಂದರ್ಭದಲ್ಲಿ ಎಲ್ಲಾ ಕುಟುಂಬದ ಜನರಿಗೆ ಉಪಲಬ್ಧ ಮಾಡುವುದು ರೈತರ ಕೃಷಿಯು ಒಂದು ಸಂಭ್ರಮ ಆಗಿದೆ. ಮನೆ ಮಗಳು, ಅಳಿಯ, ಅಣ್ಣ ತಮ್ಮ ತಂಗಿ ಹಿರಿಯ ಕಿರಿಯ ಪರವೂರಿನಲ್ಲಿ ಉದ್ಯೋಗ ಮಾಡುವವರು ಒಟ್ಟುಗೂಡುವ ಶುಭಗಳಿಗೆಯೂ ಹೌದು.
ಕುಟುಂಬದ ಕಲಹಗಳು ಮಾತೆಯ ಹೆಸರಿನಲ್ಲಿ ಇತ್ಯರ್ಥಕ್ಕೆ ಬರುವುದು ಇದೆ. ಪಾಯಸದಲ್ಲಿ ಅದ್ದಿ ತಿನ್ನುವ ನೀರ್ತೆಲ್ಲವು ಕೊನೆಗೆ ಡಜರ್ಟ್(Dessert) ಬಹಳ ರುಚಿ.

ಹೊಸ ತೆನೆ ಚರ್ಚ್ ಗೆ ತಂದು ಆಶೀರ್ವದಿಸಿ ಮನೆಗೆ ಒಳಗೆ ಬರುವಾಗ ದೇವರ ಗುಡಿಯ ಅಲ್ತಾರಿನ ದೀಪವನ್ನು ಉರಿಸಿ ಹಿರಿಯ ಯಜಮಾನರು ಪಡೆದು ದೇವರ ಪಟದ ಬಳಿ ಇರಿಸುವುದು ಗೌರವ. ದುಷ್ಟ ದೋಷಕ್ಕೆ ವರ್ಷದ ದಿನಗಳಲ್ಲಿ ಆ ದೇವರ ಪಟದ ಬಳಿಯಿರುವ ಬತ್ತದ ಅಥವಾ ತೆನೆಯ ನೀರು ಮಾಡಿ ಕುಡಿಸುವು ನಂಬಿಕೆ.
ಊಟದ ನಂತರ ಕಬ್ಬು ತಿನ್ನುವ ಹಲ್ಲುಗಳು ಸರಿಯಿದ್ದವರದು. ಮನೆಯ ತುಂಬಾ ಇದ್ದು ಬಾಳೆ ಎಲೆಯ ಮೇಲೆ ನೆಲದ ಮೇಲೆ ಕುಳಿತು ಊಟವೇ ವಿಶಿಷ್ಟ.
ತಾಯಿಯ ಸ್ಥಾನವನ್ನು ನೀಡಿ ಮೇರಿ ಮಾತೆ ಯೇಸುವಿನ ತಾಯಿಯಾಗಿ ಸ್ಥಾಪಿಸಿದ ‌ಕ್ರೈಸ್ತ ಚರ್ಚ್ ಹೀಗೆ ಪ್ರತೀ ವರುಷ ಸಪ್ಟೆಂಬರ್ 8 ಖಾಯಂ ಆಚರಣೆ ‌ಕರಾವಳಿಯಲ್ಲಿ ಮಾಡುವುದು ಸುಂದರ ನೋಟ.

ಸದ್ದು ಗದ್ದಲವಿಲ್ಲದೆ ಮನೋಹರವಾದ ನೋಟ ಇದು. ಸಿಹಿ ಮತ್ತು ಪ್ರೀತಿಯ ಒಂದು ಕುಟುಂಬದ ಮಿಲನ.

Leave a Reply

Your email address will not be published. Required fields are marked *