ಮೂಡುಬಿದಿರೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳು ಮತ್ತು ಪದವಿಗೆ ಸೀಮಿತರಾಗದೆ, ಪರಿಣಾಮಕಾರಿ ಸಂವಹನ ಕೌಶಲ್ಯ, ಬಹುಮುಖ ಪ್ರತಿಭೆ, ವಿಮರ್ಶಾತ್ಮಕ ಚಿಂತನೆ ಹಾಗೂ ವಿವಿಧ ಕ್ಷೇತ್ರಗಳ ಜನರೊಂದಿಗೆ ಉತ್ತಮ ಸಂಪರ್ಕ ಬೆಳೆಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಬೇಕು ಎಂದು ಆಳ್ವಾಸ್ ಎಂಬಿಎ ಕಾಲೇಜಿನ ಸಹಾಯಕ ಪ್ರಾಧ್ಯಪಕಿ ದಿಶಾ ಸಿ. ಶೆಟ್ಟಿ ನುಡಿದರು.
ಆಳ್ವಾಸ್ ಕಾಲೇಜು (ಸ್ವಾಯತ್ತ), ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗವು ಶುಕ್ರವಾರ ಆಯೋಜಿಸಿದ್ದ ಅತಿಥಿ ಉಪನ್ಯಾಸದಲ್ಲಿ ಅವರು ಮಾತನಾಡಿದರು.




ವೈಯಕ್ತಿಕ ಬದುಕು ಹಾಗೂ ವೃತ್ತಿಜೀವನದಲ್ಲಿನ ಸಂವಹನದ ಸ್ವರೂಪದಲ್ಲಿ ವ್ಯತ್ಯಾಸವಿದೆ. ವೈಯಕ್ತಿಕ ಜೀವನದಲ್ಲಿ ವ್ಯಕ್ತಿಯು ತನ್ನ ಆಯ್ಕೆಯಂತೆ ಮಾತನಾಡಬಹುದು. ಆದರೆ ವೃತ್ತಿಜೀವನದಲ್ಲಿ ಸಾಂಸ್ಕೃತಿಕ ಭಿನ್ನತೆ, ಭಾಷೆ ವೈವಿಧ್ಯ ಹಾಗೂ ವಿಭಿನ್ನ ಹಿನ್ನೆಲೆಯ ಜನರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುವ ಸಾಮಥ್ರ್ಯ ಮಹತ್ವದ ಪಾತ್ರ ವಹಿಸುತ್ತದೆ. ವಿಭಿನ್ನ ಹಿನ್ನೆಲೆಯ ಜನರೊಂದಿಗೆ ಮುಕ್ತವಾಗಿ ಮಾತನಾಡುವ ಮತ್ತು ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಸಾಮಥ್ರ್ಯವು ವಿದ್ಯಾರ್ಥಿಗಳ ಮುಂದಿನ ಬದುಕಿನಲ್ಲಿ ಹಲವು ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ.
ವಿದ್ಯಾರ್ಥಿಗಳು ಒಂದೇ ಕ್ಷೇತ್ರಕ್ಕೆ ಸೀಮಿತರಾಗದೆ ವಿವಿಧ ಕ್ಷೇತ್ರಗಳ ಕುರಿತು ಆಸಕ್ತಿ ಮತ್ತು ಜ್ಞಾನವನ್ನು ಬೆಳೆಸಿಕೊಳ್ಳಬೇಕು. ವಿಭಿನ್ನ ಕ್ಷೇತ್ರಗಳ ವ್ಯಕ್ತಿಗಳೊಂದಿಗೆ ಬೆಳೆಸಿಕೊಳ್ಳುವ ಸಂಪರ್ಕವು ಮುಂದಿನ ದಿನಗಳಲ್ಲಿ ಉತ್ತಮ ಸಂಪರ್ಕಜಾಲವಾಗಿ ರೂಪುಗೊಂಡು ಹೊಸ ಅವಕಾಶಗಳನ್ನು ಸೃಷ್ಟಿಸಬಲ್ಲದು.
ಅಂಕಪಟ್ಟಿಯು ಉದ್ಯೋಗ ಜಗತ್ತಿಗೆ ಪ್ರವೇಶಿಸಲು ನೆರವಾಗಬಹುದು. ಆದರೆ ಉದ್ಯೋಗ ಪಡೆಯುವುದರ ಜತೆಗೆ ವೃತ್ತಿಜೀವನದಲ್ಲಿ ಮುನ್ನಡೆಯಲು ವಿದ್ಯಾರ್ಥಿಗಳು ತಮ್ಮನ್ನು ಇತರರಿಂದ ವಿಭಿನ್ನವಾಗಿಸುವ ಹೆಚ್ಚುವರಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪದವಿ ಮತ್ತು ಅಂಕಗಳೊಂದಿಗೆ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಹೆಚ್ಚುವರಿ ಪ್ರಯತ್ನ, ಅನುಭವ ಹಾಗೂ ನಿರಂತರ ಕಲಿಕೆಗೆ ಆದ್ಯತೆ ನೀಡಬೇಕು ಎಂದರು.
ಜೀವನದಲ್ಲಿ ಎದುರಾಗುವ ವಿಚಾರಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ, ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇ ಆದ ವೈಶಿಷ್ಟ್ಯ ಮತ್ತು ಗುರುತನ್ನು ರೂಪಿಸಿಕೊಂಡಾಗ ವೈಯಕ್ತಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಹೊಸ ದಾರಿಗಳು ತೆರೆದುಕೊಳ್ಳುತ್ತವೆ ಎಂದರು.
ವಿದ್ಯಾರ್ಥಿನಿ ಅಕ್ಷತಾ ಪೈ ಸ್ವಾಗತಿಸಿ, ಭುವನಾ ವಂದಿಸಿ, ಅಮೀನಾ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಪೂರ್ವಿ ಅತಿಥಿಯನ್ನು ಪರಿಚಯ ಮಾಡಿಕೊಟ್ಟರು. ಆಳ್ವಾಸ್ ಸೈನ್ಸ್ ವಿಭಾಗದ ಡೀನ್ ರಮ್ಯಾ ರೈ ಹಾಗೂ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಮುಖ್ಯಸ್ಥ ಡಾ. ಟಿ. ಕೆ. ರವೀಂದ್ರನ್ ಇದ್ದರು.
