ಮೂಡುಬಿದಿರೆ: ಪ್ರಕೃತಿಯ ಮೇಲಿನ ಪ್ರೀತಿಯನ್ನು ಕೇವಲ ಹವ್ಯಾಸವಾಗಿ ಸೀಮಿತಗೊಳಿಸದೆ, ಅದನ್ನೇ ಅರ್ಥಪೂರ್ಣ ಹಾಗೂ ಭವಿಷ್ಯ ರೂಪಿಸುವ ವೃತ್ತಿಜೀವನವನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶ ಯುವಜನತೆಗೆ ಇಂದು ಹೆಚ್ಚಾಗಿದೆ ಎಂದು ಮೂಡುಬಿದಿರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಐಎಫ್‍ಎಸ್ ಆಕಾಶ್ ಧನಾಜಿ ಕದಂ ಹೇಳಿದರು.





ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ, ಕುಂದಾಪುರ ವಿಭಾಗ, ಮೂಡುಬಿದಿರೆ ಉಪವಿಭಾಗ ಹಾಗೂ ಮೂಡುಬಿದಿರೆ ವಲಯ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಆಳ್ವಾಸ್ ಕುವೆಂಪು ಹಾಲ್‍ನಲ್ಲಿ ಆಯೋಜಿಸಲಾದ 72ನೇ ವನ್ಯಜೀವಿ ಸಪ್ತಾಹ–2026ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಗೆ ಸೀಮಿತವಾದ ಕ್ಷೇತ್ರವಲ್ಲ. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಈ ಕ್ಷೇತ್ರದಲ್ಲಿ ಹೊಸ ಹೊಸ ವೃತ್ತಿ ಅವಕಾಶಗಳು ಸೃಷ್ಟಿಯಾಗುತ್ತಿವೆ. ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ನಕ್ಷೆ ತಯಾರಿಕೆ, ದೂರ ಸಂವೇದಿ ತಂತ್ರಜ್ಞಾನ, ಡ್ರೋನ್ ಮೂಲಕ ಸಮೀಕ್ಷೆ, ವನ್ಯಜೀವಿ ಗಣತಿ, ಜೀವವೈವಿಧ್ಯ ದಾಖಲಾತಿ, ಪರಿಸರ ಸಂಶೋಧನೆ ಹಾಗೂ ಪರಿಸರ ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯುವಜನತೆಗೆ ಉತ್ತಮ ವೃತ್ತಿ ಅವಕಾಶಗಳಿವೆ.
ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೂ ಪರಿಸರ ಮತ್ತು ಅರಣ್ಯ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಬಹುದು. ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಹಾಗೂ ವೃತ್ತಿ ಆಯ್ಕೆ ಕುರಿತು ಮಾರ್ಗದರ್ಶನ ನೀಡಲು ತಾವು ಸಿದ್ಧರಿರುವುದಾಗಿ ಅವರು ತಿಳಿಸಿದರು.
ಪ್ರಕೃತಿಯು ಮನುಷ್ಯನೊಬ್ಬನಿಗಾಗಿ ಮಾತ್ರ ಸೃಷ್ಟಿಯಾಗಿಲ್ಲ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಅಸ್ತಿತ್ವ ಮತ್ತು ಪರಿಸರ ವ್ಯವಸ್ಥೆಯಲ್ಲಿ ನಿರ್ದಿಷ್ಟ ಪಾತ್ರವಿದೆ. ಪ್ರಕೃತಿ ಎಲ್ಲ ಜೀವಿಗಳನ್ನು ಸಮಾನವಾಗಿ ಸೃಷ್ಟಿಸಿದ್ದರೂ, ಮನುಷ್ಯ ಮಾತ್ರ ತನ್ನನ್ನು ಇತರ ಜೀವಿಗಳಿಗಿಂತ ಶ್ರೇಷ್ಠನೆಂದು ಪರಿಗಣಿಸುತ್ತಿದ್ದಾನೆ. ಈ ಮನುಷ್ಯಕೇಂದ್ರಿತ ಚಿಂತನೆಯಿಂದ ಹೊರಬಂದು ಪರಿಸರಕೇಂದ್ರಿತ ದೃಷ್ಟಿಕೋನ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.
ಮೂಡುಬಿದಿರೆ ವಲಯದ ವಲಯಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಸಂಪತ್ತು ನಾಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಭಿವೃದ್ಧಿ ಅಗತ್ಯವಾದರೂ, ಅದರ ಹೆಸರಿನಲ್ಲಿ ಪರಿಸರವನ್ನು ಕಳೆದುಕೊಳ್ಳುವಂತಾಗಬಾರದು. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಸಮತೋಲನದಿಂದ ಮುನ್ನಡೆಸುವ ಚಿಂತನೆ ಅಗತ್ಯ ಎಂದರು.
ಅಕ್ಟೋಬರ್ 2ರಿಂದ 8ರವರೆಗೆ ನಡೆಯುವ ವನ್ಯಜೀವಿ ಸಪ್ತಾಹ ಕೇವಲ ಆಚರಣೆಗೆ ಸೀಮಿತವಾಗದೆ, ಜನರಲ್ಲಿ ನಿರಂತರ ಪರಿಸರ ಪ್ರಜ್ಞೆ ಮೂಡಿಸುವ ಅಭಿಯಾನವಾಗಿದೆ. ಅರಣ್ಯ ಸಂರಕ್ಷಣೆ ಸರ್ಕಾರ ಅಥವಾ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕೆಎಂಎಫ್ ಮಂಗಳೂರು ನಿರ್ದೇಶಕ ಸುಚರಿತ ಶೆಟ್ಟಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪಶ್ಚಿಮ ಘಟ್ಟದ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕು. ಜಲಮೂಲಗಳು, ದಟ್ಟ ಅರಣ್ಯ ಮತ್ತು ಸಸ್ಯ ವೈವಿಧ್ಯ ಹಿಂದೆ ಇದ್ದಷ್ಟು ಇಂದು ಕಾಣುತ್ತಿಲ್ಲ. ನೆಲ, ಜಲ ಮತ್ತು ಮಣ್ಣಿನ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿಯೇ ಜಾಗೃತಿ ಮೂಡಿಸಬೇಕು. ಪ್ರಕೃತಿಯನ್ನು ಪ್ರೀತಿಸುವ ಮನಸ್ಸು ಬೆಳೆಸಿದಾಗ ಮಾತ್ರ ಸಮೃದ್ಧ ಭಾರತ ನಿರ್ಮಾಣ ಸಾಧ್ಯ ಎಂದರು.
ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಮನುಷ್ಯನು ಜೀವಿಗಳಲ್ಲಿ ಶ್ರೇಷ್ಠ ಎಂಬ ಕಲ್ಪನೆಯಿಂದ ಹೊರಬರಬೇಕಿದೆ. ಪ್ರಕೃತಿಯ ವಿನ್ಯಾಸವೇ ಜೀವಕೇಂದ್ರಿತವಾಗಿದೆ. ಆದ್ದರಿಂದ ಮನುಷ್ಯಕೇಂದ್ರಿತ ಚಿಂತನೆಯ ಬದಲಾಗಿ ಜೀವಿ ಕೇಂದ್ರಿತ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು.
ಪರಿಸರ ಪ್ರೇಮಿ ವಿನೀಶ್ ಪೂಜಾರಿ ಮಾತನಾಡಿ, ಅರಣ್ಯ ಇಲಾಖೆ ಅತ್ಯಂತ ಮಹತ್ವದ ಇಲಾಖೆಯಾಗಿದೆ. ವನ್ಯಜೀವಿಗಳ ಬೇಟೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಅವುಗಳ ಸಂರಕ್ಷಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಬೆಳವಾಯಿಯ ಚಿಟ್ಟೆ ಪಾರ್ಕಿನ ಸಮ್ಮಿಲನ್ ಶೆಟ್ಟಿ ಮಾತನಾಡಿ, ಹೊಸದಾಗಿ ಅರಣ್ಯ ಬೆಳೆಸುವುದು ಅಗತ್ಯವಾದರೂ, ಈಗಾಗಲೇ ನೈಸರ್ಗಿಕವಾಗಿ ಬೆಳೆದು ನಿಂತಿರುವ ಅರಣ್ಯವನ್ನು ಸಂರಕ್ಷಿಸುವುದು ಅದಕ್ಕಿಂತಲೂ ಮಹತ್ವದ್ದಾಗಿದೆ. ಚಿಟ್ಟೆಗಳ ಸಂರಕ್ಷಣೆಗಾಗಿ ತಾವು ಆರಂಭಿಸಿದ ಉದ್ಯಾನವನವು ಇಂದು ಹೇಗೆ ಹಲವು ಜೀವಿಗಳಿಗೆ ಆಶ್ರಯ ಒದಗಿಸುವ ಸಣ್ಣ ಪರಿಸರ ವ್ಯವಸ್ಥೆಯಾಗಿ ರೂಪುಗೊಂಡಿದೆ ಎಂಬುದನ್ನು ವಿವರಿಸಿದರು.
ಪ್ರಾಯೋಗಿಕ ಅರಿವು
72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಕಾರ್ಯವಿಧಾನಗಳ ಕುರಿತು ಪ್ರಾಯೋಗಿಕ ಅರಿವು ಮೂಡಿಸುವ ಸಲುವಾಗಿ ಕಡಲಕೆರೆ ನರ್ಸರಿ ಹಾಗೂ ಮೂಡುಬಿದಿರೆ ವಲಯ ಅರಣ್ಯ ಕಚೇರಿಯಲ್ಲಿರುವ ವಿವಿಧ ವಿಭಾಗಗಳು ಮತ್ತು ಅಧಿಕಾರಿಗಳ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಕೇರ್ವಾಸೆ ಕಳ್ಳಬೇಟೆ ತಡೆ ಶಿಬಿರದಲ್ಲಿ ಅರಣ್ಯ ಸಂರಕ್ಷಣೆ ಮತ್ತು ಕಳ್ಳಬೇಟೆ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಅರಣ್ಯ ಪ್ರದೇಶಗಳ ಗಸ್ತು ಮತ್ತು ಮೇಲ್ವಿಚಾರಣೆಯಲ್ಲಿ ಬಳಸಲಾಗುವ ವಾಕಿಟಾಕಿ, ಜಿಪಿಎಸ್, ಕ್ಯಾಮೆರಾ ಟ್ರ್ಯಾಪ್, ಡ್ರೋನ್ ಹಾಗೂ ಇತರ ತಾಂತ್ರಿಕ ಸಾಧನಗಳ ಬಳಕೆ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಲಾಯಿತು. ವನ್ಯಜೀವಿಗಳ ಚಲನವಲನ ಪತ್ತೆಹಚ್ಚುವುದು, ಅವುಗಳ ಆವಾಸಸ್ಥಾನವನ್ನು ಗುರುತಿಸುವುದು, ಅರಣ್ಯ ಪ್ರದೇಶದ ಗಡಿ ಮತ್ತು ಪರಿಸರ ಬದಲಾವಣೆಗಳನ್ನು ದಾಖಲಿಸುವುದು ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಈ ತಂತ್ರಜ್ಞಾನಗಳು ಹೇಗೆ ನೆರವಾಗುತ್ತವೆ ಎಂಬುದನ್ನು ಅಧಿಕಾರಿಗಳು ವಿವರಿಸಿದರು. ಇದರ ಜೊತೆಗೆ ಮಾಳ ಅರಣ್ಯ ತಪಾಸಣಾ ಠಾಣೆಯ ಕಾರ್ಯನಿರ್ವಹಣೆಯ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮರ ಸಾಗಣೆ, ಕಳ್ಳಬೇಟೆ ಹಾಗೂ ಇತರ ಅರಣ್ಯ ಅಪರಾಧಗಳನ್ನು ತಡೆಗಟ್ಟುವಲ್ಲಿ ತಪಾಸಣಾ ಠಾಣೆಗಳ ಪಾತ್ರದ ಕುರಿತು ತಿಳಿಸಲಾಯಿತು.
ಶ್ರೀಶಾ ಕಾರ್ಯಕ್ರಮ ನಿರೂಪಿಸಿ, ರಧ್ವಾ ವಂದಿಸಿದರು.
