ಮಂಗಳೂರು: ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆಯನ್ನು ನಡೆಸಲಾಯಿತು.
ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್.ಎಂ.ಆರ್ ಮಾತನಾಡಿ, ಅನುಭವಿ ಫಾರ್ಮ ಲೇಡೀಗೋಶನ್ನಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆಗಳ ಪ್ರೇರಣಾದಾಯಕ ಮನೋಭಾವನೆಯಿಂದ ಇಂದು ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಾರ್ವತ್ರಿಕ ಮೆಚ್ಚುಗೆಯನ್ನು ಪಡೆದ ವಿಶಾಲವಾದ ಫಾರ್ಮಸಿ ಮತ್ತು ಮುಖ್ಯ ಉಗ್ರಾಣವನ್ನು ಪ್ರಾರಂಭಿಸಲು ಸಾಧ್ಯವಾಯಿತು ಎಂದರು.

ನಿವಾಸಿ ವೈದ್ಯಾಧಿಕಾರಿ ಡಾ.ಜಗದೀಶ್ ಫಾರ್ಮಸಿ ಅಧಿಕಾರಿಗಳ ಸಮರ್ಪಣಾ ಮನೋಭಾವವನ್ನು ಕೊಂಡಾಡಿದರು.
ಹಿರಿಯ ಫಾರ್ಮಸಿ ಅಧಿಕಾರಿಗಳಾದ ಸಂಧ್ಯಾ,ಮಹಾಲಕ್ಷ್ಮಿ , ಲಾವಣ್ಯ, ಮೋಹನ್ ದಾಸ್, ಪುಷ್ಪಲತಾ, ರೇಖಾ ಅಲ್ಲದೆ ಕಿರಿಯ ಫಾರ್ಮಸಿಸ್ಟ್ ಗಳಾದ ಅಕ್ಷತಾ,ರಿಶಾನಾ,ಸಕೀನಾ ಅವರನ್ನು ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ಶ್ರದ್ಧಾಪೂರ್ವಕವಾದ ಸರಕಾರಿ ಸೇವೆಯನ್ನು ಗುರುತಿಸಿ ಗೌರವಾದರಗಳೊಂದಿಗೆ ಹೂ ಹಾರ,ಶಾಲು, ಫಲಪುಷ್ಪ ಹಾಗೂ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
ಅನಿಸಿಕೆಗಳನ್ನು ತಿಳಿಸಿದ ಫಾರ್ಮಸಿ ಅಧಿಕಾರಿಗಳು, ಇದುವರೆಗಿನ ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಹಿಂದೆಂದೂ ಕಾಣದಿರುವ ಹಾಗೂ ತಮ್ಮನ್ನು ಗೌರವಿಸಿ ಪುರಸ್ಕರಿಸಿದ ಈ ಕ್ಷಣಗಳು ಚಿರಸ್ಮರಣೀಯ ಎಂದರು.ಇಂಥಹ ಅಭಿಮಾನದ ಕಾರ್ಯಕ್ರಮಗಳು ಸಿಬ್ಬಂದಿಗಳಲ್ಲಿ ಮತ್ತಷ್ಟು ವೃತ್ತಿಪರ ಸ್ಫೂರ್ತಿಯನ್ನು ದ್ವಿಗುಣಗೊಳಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಪ್ರಸೂತಿ ತಜ್ಞ ಡಾ.ದಯಾನಂದ್,ಮಕ್ಕಳ ತಜ್ಞೆ ಡಾ.ಮನಿಷಾ, ಸಹಾಯಕ ಆಡಳಿತಾಧಿಕಾರಿ ಅನಿತಾ ಸತ್ಯನ್, ನರ್ಸಿಂಗ್ ಸುಪರಿಂಟೆಂಡೆಂಟ್ ಗೀತಾ, ಕೆ.ಎಂ.ಸಿ. ನರ್ಸಿಂಗ್ ಸುಪರ್ವೈಸರ್ ಮಲ್ಲಿಕಾ, ಆಫೀಸ್ ಸುಪರಿಂಟೆಂಡೆಂಟ್ ಶಂಕರ್ ಉಪಸ್ಥಿತರಿದ್ದರು. ಶುಶ್ರೂಷಾಧಿಕಾರಿ ಜಯಲಕ್ಷ್ಮಿ ನಿರೂಪಿಸಿದರು. ಹಿರಿಯ ಶುಶ್ರೂಧಿಕಾರಿ ಮಹಾಲಕ್ಷ್ಮೀ ಸ್ವಾಗತಿಸಿ, ಸರೋಜಾ ವಂದಿಸಿದರು.
