ಮಂಗಳೂರು: ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ವಿಶ್ವಕೊಂಕಣಿ ಕೇಂದ್ರದಲ್ಲಿ ಅ. 03 ರಂದು ಕನಕದಾಸರು ಕೊಂಕಣಿಯಲ್ಲಿ, ಕನಕದಾಸರ ಸಾಹಿತ್ಯ ಕೊಂಕಣಿಯಲ್ಲಿ: ವಿಚಾರಸಂಕಿರಣ ಮತ್ತು ಗೀತ ಗಾಯನ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡದ ಪ್ರಸಿದ್ಧ ಅನುವಾದಕರು ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಡಾ. ಪ್ರಧಾನ ಗುರುದತ್ತ್ ದೀಪ ಬೆಳಗಿಸಿ ಕಾರ್ಯಕ್ರವನ್ನು ಉದ್ಗಾಟಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ನಂದಗೋಪಾಲ ಶೆಣೈ ನೆರೆದ ಅತಿಥಿ ಗಣ್ಯರನ್ನು ಸ್ವಾಗತಿಸುತ್ತಾ ಕೊಂಕಣಿಯಲ್ಲಿ ಪ್ರಕಟವಾಗಿರುವ ಕನಕದಾಸರ ಸಾಹಿತ್ಯವನ್ನು ಕೊಂಕಣಿ ಭಾಷಿಕರಿಗೆ ತಲುಪಿಸುವ ಸದುದ್ದೇಶದಿಂದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನವು ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ತಿಳಿಸಿದರು. ಬೆಂಗಳೂರು ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀಯುತ ಕಾ.ತ. ಚಿಕ್ಕಣ್ಣ ಇವರ ಶುಭ ಸಂದೇಶವನ್ನು ನೆರೆದ ಸಭಿಕರಿಗೆ ಓದಿ ತಿಳಿಸಲಾಯಿತು.
ಮಂಗಳೂರು ವಿಶ್ವವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜಯವಂತ ನಾಯಕ್ ಇವರು ಕನಕದಾಸ ಕಾವ್ಯಗಳ ಮೂರು ಸಂಪುಟಗಳನ್ನು ಲೋಕಾರ್ಪಣೆ ಮಾಡಿದರು. ಸಂತ ಅಲೋಷಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆಯ ಫಾದರ್ ಪ್ರಶಾಂತ ಮಾಡ್ತಾ ರವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ಈ ಸಂಧರ್ಭದಲ್ಲಿ ಮಂಗಳೂರಿನ ಸಾಧನಾ ಬಳಗ ಮತ್ತು ನಾಟ್ಯ ಧಾರಾ ಮಹಿಳಾ ತಂಡದವರಿಂದ ‘ಕನಕದಾಸರ ಕೀರ್ತನೆಗಳ ಕುಣಿತ ಭಜನೆ’ ಮತ್ತು ಉಪೇಂದ್ರ ಮಲ್ಯ ತಂಡದವರಿಂದ ‘ಶ್ರೀನಿವಾಸ ಕಲ್ಯಾಣ’ ಗೀತ ನಾಟಕದ ಪ್ರದರ್ಶನ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು.
ಕನಕದಾಸರ ಕೀರ್ತನೆಗಳ ವಿಚಾರ ಸಂಕಿರಣದಲ್ಲಿ ಕನಕದಾಸರ ಸಾಹಿತ್ಯವನ್ನು ಕೊಂಕಣಿಗೆ ಅನುವಾದ ಮಾಡಿರುವ ತಜ್ಞರಿಂದ ಕನಕದಾಸರ ಸಾಹಿತ್ಯದ ಕುರಿತು ಸಂಶೋಧನಾತ್ಮಕ ಪ್ರಬಂಧಗಳ ಮಂಡನೆಯ ವಿಚಾರಸಂಕಿರಣ ಜರುಗಿತು. ಡಾ. ಗೀತಾ ಶೆಣೈ, ಡಾ. ಬಿ ದೇವದಾಸ ಪೈ, ಡಾ. ಸಂಧ್ಯಾ ನಾಯಕ್, ಡಾ. ಶೈಲಜಾ ಮಂಗಳೂರುಕಾರ, ಶಕುಂತಳಾ ಆರ್ ಕಿಣಿ, ಜಯಶ್ರೀ ಶೆಣೈ,ಮಧುಕರ ಮಲ್ಯ, ಡಾ. ಅರವಿಂದ ಶ್ಯಾನಭಾಗ್ ಮತ್ತು ಸ್ಮಿತಾ ಶೆಣೈ ಮೊದಲಾದ ಸಾಹಿತ್ಯ ತಜ್ಞರು ಭಾಗವಹಿಸಿ ತಮ್ಮ ವಿಚಾರ ಮಂಡಿಸಿದರು.
ಕನಕದಾಸರ ಕೀರ್ತನೆಗಳ ಗೀತ-ಗಾಯನ ಕಾರ್ಯಕ್ರಮದಲ್ಲಿ ಕನಕದಾಸರ ಕೊಂಕಣಿ ಅನುವಾದಿತ ಹಾಡುಗಳನ್ನು ಹೆಸರಾಂತ ಸಂಗೀತ ತಜ್ಞರಾದ ಪುತ್ತೂರು ನರಸಿಂಹ ನಾಯಕ್, ವಿದ್ವಾನ್ ಯೋಗೀಶ ಕಿಣಿ, ಚೈತ್ರಾ ಪೈ, ರವೀಂದ್ರ ಪ್ರಭು, ಮುರಳೀಧರ ಕಾಮತ್, ವರ್ಷಾ ಪ್ರಭು ಮತ್ತು ಪುತ್ತೂರು ಪಾಂಡುರಂಗ ನಾಯಕ ಮೊದಲಾದವರು ತಮ್ಮ ಸುಶ್ರಾವ್ಯ ಕಂಠದಿಂದ ಹಾಡುತ್ತಾ ಜನ ಮನ ಸೂರೆಗೊಂಡರು. ಎಲ್ಲಾ ಹಾಡುಗಾರರನ್ನು ಹಾಗೂ ಅನುವಾದಕರನ್ನು ಈ ಸಂದರ್ಭದಲ್ಲಿ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಈ ಸುಸಂಧರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ ಎ ನಂದಗೋಪಾಲ್ ಶೆಣೈ ಯವರು ಅಖಿಲ ಭಾರತ ಕೊಂಕಣಿ ಪರಿಷದ್ ನ 34 ನೇ ಸಮ್ಮೇಳನದ ಅಧ್ಯಕ್ಷ ಪದಕ್ಕೆ ಚುನಾಯಿತರಾದ ಸಂದೇಶವನ್ನು ಸಭೆಯಲ್ಲಿ ಕೇಂದ್ರದ ಟ್ರಸ್ಟಿ ಮೆಲ್ವಿನ್ ರೊಡ್ರಿಗಸ್ ಮಂಡಿಸುತ್ತಾ ಕೇಂದ್ರದ ವಿಶ್ವಸ್ಥ ಮಂಡಳಿಯು ಸೇರಿ ಅವರನ್ನು ಗೌರವಿಸಿದರು. ಉಪಾಧ್ಯಕ್ಷರಾದ ವಿಲಿಯಂ ಡಿಸೋಜಾ, ರಮೇಶ್ ಡಿ ನಾಯಕ್, ಟ್ರಸ್ಟಿ ಗಿಲ್ಬರ್ಟ್ ಡಿಸೋಜಾ, ಕೋಶಾಧಿಕಾರಿ ಬಿ ಆರ್ ಭಟ್, ಆಡಳೀತ ಅಧಿಕಾರಿ ಡಾ. ಬಿ ದೇವದಾಸ ಪೈ, ಪ್ರಧಾನ ಸಂಪಾದಕರಾದ ಡಾ.ಗೀತಾ ಶೆಣೈ ಮತ್ತು ಕಾರ್ಯಕ್ರಮದ ಪ್ರಾಯೋಜಕರಾದ ವರ್ಧನಿಯ ಉಷಾ ನಂದಗೋಪಾಲ ಶೆಣೈ ಉಪಸ್ಥಿತರಿದ್ದರು.
ಬಾಲಚಂದ್ರ ಪ್ರಭುರವರು ಕನಕದಾಸರ ಕೀರ್ತನೆಯನ್ನು ಕೊಂಕಣಿಯಲ್ಲಿ ರಾಗ ಸಂಯೋಜನೆ ಮಾಡಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಸುಚಿತ್ರಾ ಶೆಣೈ, ಸ್ಮಿತಾ ಶೆಣೈ ಮತ್ತು ಡಾ. ವಿಜಯಲಕ್ಷ್ಮೀ ನಾಯಕ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಮಾರಂಭದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದು ಎರಡು ದಿನಗಳ ಕಾರ್ಯಕ್ರಮವನ್ನು ವೀಕ್ಷಿಸಿ ಸಂಭ್ರಮಿಸಿದರು.
