ಮನುಷ್ಯನನ್ನು ದೇವರಾಗಿಸಬೇಡಿ – Article by Anjali Srinivas

✍️ ಅಂಜಲಿ ಶ್ರೀನಿವಾಸ್ ಖಟವಟೆ, ಹುಬ್ಬಳ್ಳಿ

ಯಾವ ವ್ಯಕ್ತಿಯೂ ಪರಿಪೂರ್ಣನಲ್ಲ.
ಮನುಷ್ಯ ಅಂದ ಮೇಲೆ ತಪ್ಪು-ಒಪ್ಪುಗಳಿವೆ, ಅವನಲ್ಲೂ ಆಸೆ-ಆಕಾಂಕ್ಷೆಗಳಿವೆ, ಮದ-ಮತ್ಸರಗಳಿವೆ, ಮಿತಿಗಳಿವೆ. ಯಾರನ್ನು ಅತಿಮಾನುಷ ಶಕ್ತಿಯಾಗಿ ನೋಡಬಾರದು. ಯಾವುದೇ ವ್ಯಕ್ತಿ ಒಳ್ಳೆಯವನು ಎನ್ನೋಕೆ “ದೇವರಂತ ಮನುಷ್ಯ” ಎನ್ನುತ್ತಾರೆ. ಅದೇಕೋ ಮನುಷ್ಯನನ್ನು ಮನುಷ್ಯನಾಗಿರಲು ಬಿಡದ ಜನ… ಮನುಷ್ಯನನ್ನು ದೇವರಾಗಿಸಬೇಡಿ.

ಯಾವುದೇ ವ್ಯಕ್ತಿಯನ್ನು ಅತಿಯಾಗಿ ಆರಾಧಿಸುವುದು ಅಥವಾ ಅವರನ್ನು ದೇವರೆಂದು ಭಾವಿಸುವುದು ತಪ್ಪು. ಹೀಗೆ ಮಾಡುವುದರಿಂದ ವ್ಯಕ್ತಿಯ ತಪ್ಪುಗಳನ್ನು ಪ್ರಶ್ನಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ.

ಕೆಲವು ಸಂದರ್ಭದಲ್ಲಿ ಹೀಗೂ ಇರುತ್ತೆ, ನಾವು ಕೆಲವರನ್ನು ಅತಿಯಾಗಿ ನಂಬಿಬಿಡುತ್ತೇವೆ. ಆ ಅತಿಯಾದ ನಂಬಿಕೆ ಮೂಢನಂಬಿಕೆಗೆ ತಿರುಗಿದ್ದು ತಿಳಿಯದೆ ಹೋಗುತ್ತೇವೆ. ಜೀವನದಲ್ಲಿ ನಂಬಿಕೆ ಇರಬೇಕು, ಅದು ನಮಗೆ ಬದುಕುವ ಭರವಸೆ ನೀಡುತ್ತದೆ. ಆದರೆ ಆ ನಂಬಿಕೆಗೆ ವಿವೇಚನೆ, ವಿಜ್ಞಾನ ಮತ್ತು ತರ್ಕದ ಹಿನ್ನಲೆ ಇರಬೇಕು. ಅದಲ್ಲದೆ ದೇವರು ಎಂದು ತಿಳಿದು ಅವರ ಮಾತೇ ವೇದ ವಾಕ್ಯ ಎಂದು ತಿಳಿಯುವವರು ಇದ್ದಾರೆ.

ಕೆಲವು ಸಂದರ್ಭದಲ್ಲಿ ಮಾರ್ಗದರ್ಶನ ಅವಶ್ಯಕ ಇರಬಹುದು, ಆದರೆ ಮಾರ್ಗದರ್ಶನ ನೀಡುತ್ತಿರುವವನು ಕೂಡ ಮನುಷ್ಯನೇ. ಕಣ್ಣು ಮುಚ್ಚಿ ಯಾವುದನ್ನೂ ನಂಬಿದಾಗ ಅದು ಮೂಢನಂಬಿಕೆಯಾಗಿ ಬದಲಾಗಿ ನಮ್ಮನ್ನೇ ಶೋಷಣೆಗೆ ಒಳಪಡಿಸುತ್ತದೆ.

ಒಬ್ಬ ರೈತನಿದ್ದ. ಆತನಿಗೆ ತನ್ನ ಜಮೀನಿನ ಮೇಲೆ ಅಪಾರ ನಂಬಿಕೆ. ಆದರೆ ಅವನು ಒಬ್ಬ ವ್ಯಕ್ತಿಯನ್ನು ದೇವರಂತೆ ನಂಬುತ್ತಿದ್ದ.

ಒಂದು ದಿನ ಆ ಮನುಷ್ಯ ದೇವರು ಹೇಳಿದ – “ಈ ವರ್ಷ ಮಳೆ ಬರುವುದಿಲ್ಲ, ನೀನು ಬಿತ್ತನೆ ಮಾಡಬೇಡ, ನಿನ್ನ ಜಮೀನನ್ನು ನನಗೆ ಬಿಟ್ಟುಕೊಡು, ನಿನಗೆ ಒಳ್ಳೆಯದಾಗುತ್ತದೆ.”

ಇತ್ತ ಕೃಷಿ ಇಲಾಖೆಯವರು, ವಿಜ್ಞಾನಿಗಳು ಹೇಳಿದರು – “ಈ ವರ್ಷ ಉತ್ತಮ ಮಳೆ ಬರುತ್ತದೆ, ಧೈರ್ಯವಾಗಿ ಬಿತ್ತನೆ ಮಾಡಿ.”

ರೈತ ಯಾರ ಮಾತು ಕೇಳಿದ ಗೊತ್ತಾ? ವಿಜ್ಞಾನಿಗಳ ಮಾತನ್ನಲ್ಲ, ಆ ಮನುಷ್ಯ ದೇವರ ಮಾತನ್ನು ಕೇಳಿದ. ತನ್ನ ಜಮೀನನ್ನು ಅವನಿಗೆ ಬಿಟ್ಟುಕೊಟ್ಟ.

ಕೊನೆಗೆ ಏನಾಯ್ತು? ಮಳೆ ಚೆನ್ನಾಗಿ ಬಂತು, ಎಲ್ಲರ ಜಮೀನಿನಲ್ಲಿ ಬೆಳೆ ತುಂಬಿ ತುಳುಕಿತು. ಆದರೆ ಆ ರೈತನ ಕೈಯಲ್ಲಿ ಏನೂ ಇರಲಿಲ್ಲ. ಅವನು ನಂಬಿದ ಮನುಷ್ಯ ದೇವರು ಆ ಜಮೀನಿನಲ್ಲಿ ಬೆಳೆ ಬೆಳೆದು ಮಾರಿಕೊಂಡ.

ಇಲ್ಲಿ ತಪ್ಪು ಮಾಡಿದ್ದು ಯಾರು? ಆ ದೇವರು ಮಾಡಿದ್ದು ಅವನ ಸ್ವಭಾವ. ಆದರೆ ಕಣ್ಣು ಮುಚ್ಚಿ ನಂಬಿದ ರೈತ ತನ್ನ ವಿವೇಚನೆಯನ್ನು ಕಳೆದುಕೊಂಡಿದ್ದ.

ಆದ್ದರಿಂದ ಹೇಳುವುದು ಇಷ್ಟೇ –
ಮನುಷ್ಯನನ್ನು ಮನುಷ್ಯನಾಗಿರಲು ಬಿಡಿ. ಅವನನ್ನು ದೇವರನ್ನಾಗಿಸಬೇಡಿ.

Leave a Reply

Your email address will not be published. Required fields are marked *