ಜೀವನದಲ್ಲಿ ಅನೇಕರು ಸಿಗುತ್ತಾರೆ. ನಾವು ನಮ್ಮನ್ನು ಇತರರಲ್ಲಿ ಹುಡುಕುತ್ತೇವೆ. ಬೇರೆಯವರ ಬದುಕಿನಲ್ಲಿ ನಮ್ಮ ಪ್ರಾಮುಖ್ಯತೆ ಏನು ಎಂದು ಸದಾ ಯೋಚಿಸುತ್ತೇವೆ. ಆದರೆ ಮಗಳು ಮಾತ್ರ ಯಾವ ಪ್ರಶ್ನೆಯೂ ಕೇಳದೆ ನಮ್ಮನ್ನೇ ಹುಡುಕುತ್ತಾಳೆ.

ಈಗ ನನ್ನ ಮಗಳು ನನ್ನಿಂದ ಅತ್ತು ನನ್ನೇ ತಬ್ಬಿಕೊಳ್ಳುವಳು. ಈ ಪ್ರೀತಿಗೆ ಏನು ಹೆಸರಿಡಲಿ? ನನ್ನ ಕಣ್ಣಲ್ಲಿ ಧೂಳು ಬಿದ್ದರೂ ಓಡಿ ಬಂದು “ಅಮ್ಮ ನಿಮ್ಮ ಕಣ್ಣಲ್ಲಿ ನೀರು ಏಕೆ?” ಎಂದು ನನ್ನ ಕಣ್ಣೀರು ಒರೆಸುವಾಗ, ಇವಳು ನನ್ನ ಎರಡನೇ ತಾಯಿ ಎನಿಸುತ್ತಾಳೆ.
ಅದ್ಯಾರೋ ಮಗು ಓಡುತ್ತಾ ಬಿದ್ದಾಗ, ಅದರ ಬೆನ್ನು ಸವರಿ ತಲೆ ಮೇಲೆ ಕೈಯಾಡಿಸುತ್ತಿದ್ದ ನನ್ನ ಮಗಳನ್ನು ನೋಡಿ, ಬೇರೆಯವರ ನೋವಿಗೆ ಸ್ಪಂದಿಸುವ ಗುಣಕ್ಕೆ ಮನಸ್ಸಿನಲ್ಲಿ ಮುಗುಳುನಗು ಬೀರಿದೆ . ನವಿಲು ಗರಿಯನ್ನು ನೋಡಿ “ಕೃಷ್ಣ”ನ ಕಿರೀಟ ಎಂದು ಹೇಳುವಳು. “ಅಮ್ಮ ಹಣೆಯ ಮೇಲೆ ಬಿಂದಿ ಎಲ್ಲಿ?” ಎಂದು ಪ್ರಶ್ನಿಸುತ್ತಾಳೆ. ಗಡಿಬಿಡಿಯಲ್ಲಿಯೂ “ಇರು, ಹಚ್ಚಿಕೊಳ್ಳುತ್ತೇನೆ” ಎಂದು ಕನ್ನಡಿ ಮುಂದೆ ನಿಂತು ಬಿಂದಿ ಹಚ್ಚಿಕೊಳ್ಳುವಾಗ, ನಮ್ಮ ಸಂಸ್ಕಾರದ ಮೇಲೆ ಹೆಮ್ಮೆ ಎನಿಸುತ್ತದೆ.
ಊಟ ಮಾಡುವಾಗ “ಅಮ್ಮ ಚೆನ್ನಾಗಿದೆ” ಎಂದು ನನ್ನ ಹೋಗಳಿ ತಿನ್ನುವಾಗ “ಅಯ್ಯೋ ನನ್ನ ಕಂದ” ಎಂದು ಮುದ್ದಾಡಿ ಬಿಡುತ್ತೇನೆ.
ಮಕ್ಕಳು ನಾವು ಹೇಳಿದ್ದನ್ನು ಮಾಡುವುದಕ್ಕಿಂತ, ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ ಎಂಬುದು ನಿಜ. ನನ್ನ ಮಗಳು ಅಪ್ಪನನ್ನು ಗಮನಿಸುತ್ತಿರುತ್ತಾಳೆ. ಅವರಂತೆ “ಊಟ ಚೆನ್ನಾಗಿದೆ” ಎನ್ನುತ್ತಾಳೆ. ಬಿಂದಿಯ ಬಗ್ಗೆ ಕಾಳಜಿ ವಹಿಸುತ್ತಾಳೆ. ಈ ಸಂಸ್ಕಾರದ ಶ್ರೇಣಿ ಅಪ್ಪನಿಗೆ ಸಲ್ಲಬೇಕು.
ಒಂದು ಸಿಹಿ ನೆನಪಿನ ಕತೆ
ಅಪ್ಪ-ಮಗಳು ದಾರಿಯಲ್ಲಿ ಹೋಗುತ್ತಿದ್ದರು. ಅಪ್ಪ ಮಾವಿನ ಹಣ್ಣು ಕೊಂಡರು. ಮಗಳು ಎರಡು ಹಣ್ಣು ತೆಗೆದುಕೊಂಡಳು. “ಮಗಳೇ ಅದರಲ್ಲಿ ನನಗೂ ಒಂದು ಕೊಡುವೆಯಾ?” ಎಂದು ಅಪ್ಪ ಕೇಳಿದರು. ಮಗಳು ಎರಡೂ ಹಣ್ಣನ್ನೂ ಕಚ್ಚಿಬಿಟ್ಟಳು. ಅಪ್ಪನಿಗೆ ಕೋಪ ಬಂತು. “ಇವಳ ಅಮ್ಮ ಏನು ಸ್ವಾರ್ಥಿ ಗುಣ ಕಲಿಸಿದ್ದಾಳೋ” ಎಂದು ಮನದಲ್ಲಿ ನಿಂದಿಸಿದರು.
ಆದರೆ ಮಗಳು ಒಂದು ಹಣ್ಣನ್ನು ಅಪ್ಪನ ಕೈಗೆ ಕೊಟ್ಟು “ಅಪ್ಪ ತಗೊಳ್ಳಿ” ಎಂದಳು. “ಯಾಕೆ ಎರಡೂ ಕಚ್ಚಿದೆ ಪುಟ್ಟ?” ಎಂದು ಅಪ್ಪ ಕೇಳಿದಾಗ, “ಯಾವುದು ಸಿಹಿ ಇದೆ ಎಂದು ನೋಡಿ, ಸಿಹಿ ಇದ್ದ ಹಣ್ಣನ್ನು ನಿಮಗೆ ಕೊಡಲು” ಎಂದಳು.
ಆ ಕ್ಷಣ ಅಪ್ಪನ ಕಣ್ಣು ತುಂಬಿ ಬಂತು. ಮಡದಿಯ ಸಂಸ್ಕಾರದ ಬಗ್ಗೆ ತಪ್ಪಾಗಿ ತಿಳಿದಿದ್ದಕ್ಕೆ ಬೇಸರಪಟ್ಟರು.
ಹೌದು, ಪ್ರತಿ ಮಗುವೂ ಬಿಳಿ ಹಾಳೆಯಂತೆ. ಅದನ್ನು ಮುದ್ದೆ ಮಾಡಿದರೆ ರದ್ದಿಯಾಗುತ್ತದೆ. ಕವಿಯ ಕೈಯಲ್ಲಿ ಕವಿತೆಯಾಗುತ್ತದೆ. ಚಿತ್ರಕಾರನ ಕೈಯಲ್ಲಿ ಚಿತ್ರವಾಗುತ್ತದೆ.
ಮಕ್ಕಳು ಮನುಕುಲದ ಹೂವುಗಳು.. ಅವುಗಳನ್ನು ಅಕ್ಕರೆಯ ನೀರೇರೆಯಬೇಕು ಅರಳಿದಾಗ ಸಂಸ್ಕಾರದ ಘಮ ಬೀರುವವು.. ಯಾವ ರೀತಿ ರೂಪಿಸುತ್ತೇವೆಯೋ, ಆ ರೀತಿ ಅವರು ಸಮಾಜಕ್ಕೆ ಕಾಣುತ್ತಾರೆ
✍️ ಅಂಜಲಿ ಶ್ರೀನಿವಾಸ್ ಖಟವಟೆ ಹುಬ್ಬಳ್ಳಿ
