ಸರಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳನ್ನು ಯಥಾವತ್ತಾಗಿ ಅನುಷ್ಠಾನ ಮಾಡಿ: ಅಶೋಕ್ ಕುಮಾರ್ ಕೊಡವೂರು

ಉಡುಪಿ, ಅ. 27: ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಯಥಾವತ್ತಾಗಿ ಅನುಷ್ಠಾನ ಮಾಡಬೇಕು. ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಸಮಸ್ಯೆಗಳು ಎದುರಾದಾಗ ಅದನ್ನು ಗಂಭೀರವಾಗಿ ಪರಿಗಣಿಸುವುದರೊಂದಿಗೆ ಗ್ಯಾರಂಟಿ ಯೋಜನೆಯಿಂದ ಅರ್ಹರು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಾಜ್ಯದ ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ರಾಜ್ಯ ಸರ್ಕಾರವು ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಸಹಕಾರವಾಗಿವೆ. ಈ ಯೋಜನೆಗಳು ಜಾರಿಗೆ ಬಂದ ಬಳಿಕ ಸಾವಿರಾರು ಕುಟುಂಬಗಳಿಗೆ ಅನುಕೂಲ ಮಾಡಿಕೊಟ್ಟಿವೆ ಎಂದರು.
ಶಕ್ತಿ ಯೋಜನೆಯಡಿ ಅರ್ಹ ಮಹಿಳಾ ಪ್ರಯಾಣಿಕರುಗಳಿಗೆ ಯೋಜನೆಯ ಸೌಲಭ್ಯ ದೊರಕುವಂತೆ ಮಾಡಬೇಕು. ಪಡುಬಿದ್ರೆ-ನಿಟ್ಟೆ ಹಾಗೂ ಪಳ್ಳಿ-ಬೆಳ್ವೆ ಮಾರ್ಗದ ಸಾರಿಗೆಗಳು ಸಮಯ ಬದಲಾವಣೆ ಮಾಡಿಕೊಂಡು ಕಾರ್ಯಾಚರಿಸುವಂತೆ ಕಳೆದ ಸಭೆಗಳಲ್ಲಿ ಸೂಚಿಸಿದ್ದರೂ ಸಹ ಇದುವರೆಗೂ ಸದರಿ ಮಾರ್ಗಗಳಲ್ಲಿ ಸಾರಿಗೆ ಬಸ್‍ಗಳು ಸಂಚರಿಸುತ್ತಿಲ್ಲ. ಈ ಬಗ್ಗೆ ಆರ್.ಟಿ.ಓ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸೂಕ್ತ ತೀರ್ಮಾನ ತೆಗೆದುಕೊಂಡು, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಬೈಂದೂರು ವ್ಯಾಪ್ತಿಯಲ್ಲಿ ನಿಗಮದ ಕೆಲವು ಬಸ್‍ಗಳು ಬಸ್ ನಿಲ್ದಾಣವನ್ನು ಪ್ರವೇಶಿಸದೇ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ಬಸ್‍ಗಳನ್ನು ನಿಲ್ಲಿಸಿ, ಸಾರ್ವಜನಿಕರನ್ನು ಇಳಿಸಿ ಹೋಗುತ್ತಿರುವುದರಿಂದ ಬಸ್ ನಿಲ್ದಾಣಗಳಲ್ಲಿ ಬಸ್‍ಗಳಿಗಾಗಿ ಕಾಯುತ್ತಿರುವ ಪ್ರಯಾಣಿಕರುಗಳಿಗೆ ತೊಂದರೆ ಉಂಟಾಗುತ್ತಿದೆ. ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ, ಪ್ರಯಾಣಿಕರ ಸೌಲಭ್ಯಕ್ಕಾಗಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದ್ದು, ನಿಗಮದ ಎಲ್ಲಾ ಬಸ್‍ಗಳು ಬಸ್ ನಿಲ್ದಾಣವನ್ನು ಪ್ರವೇಶಿಸಿ, ವರದಿ ಮಾಡಿಕೊಂಡು, ಪ್ರಯಾಣಿಕರನ್ನು ಹತ್ತಿಸಿಕೊಂಡು ನಂತರ ಮುಂದಕ್ಕೆ ಪ್ರಯಾಣ ಬೆಳೆಸಬೇಕು ಎಂದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಬಸ್‍ನ ಚಾಲಕರು, ನಿರ್ವಾಹಕರು ತಪ್ಪು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡದಂತೆ ನಿಗಮದ ವ್ಯವಸ್ಥಾಪಕರು ಸೂಚನೆ ನೀಡಬೇಕು ಎಂದರು.
ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಪಡಿತರ ಚೀಟಿದಾರರು ಇ-ಕೆವೈಸಿ ಯನ್ನು ತಪ್ಪದೇ ಮಾಡಿಸಬೇಕು. ಈಗಾಗಲೇ ಸುಮಾರು ಶೇ. 84 ರಷ್ಟು ಇ-ಕೆವೈಸಿ ಕಾರ್ಯಗಳು ಪೂರ್ಣಗೊಂಡಿದ್ದು, ಸಾರ್ವಜನಿಕರು ಸ್ವಯಂ ಆಗಿಯೂ ಕೂಡ “ಅನ್ನಸೇವೆ” ಮೊಬೈಲ್ ಆಪ್ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದ್ದು, ಇದು ನೂರರಷ್ಟು ಪ್ರಗತಿಯಾಗಬೇಕಿದೆ ಎಂದರು.

ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 3,32,021 ಜನರು ನೋಂದಣಿಯಾಗಿದ್ದು, 10,667 ಕುಟುಂಬಗಳು ಸರ್ವೇ ಕಾರ್ಯ ಬಾಕಿ ಇದ್ದು, ಇದನ್ನು ಅಕ್ಟೋಬರ್ 31 ರ ಒಳಗಾಗಿ ಪೂರ್ಣಗೊಳಿಸಬೇಕು ಎಂದ ಅವರು, ಯುವ ನಿಧಿ ಯೋಜನೆಯ ಪ್ರಯೋಜನದ ಬಗ್ಗೆ ಕೌಶಲ್ಯಾಭಿವೃದ್ಧಿ ಇಲಾಖೆಯೊಂದಿಗೆ ಸಮನ್ವಯ ಹೊಂದಿ ವ್ಯಾಪಕ ಪ್ರಚಾರ ಮೂಡಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಸೆಪ್ಟಂಬರ್ ವರೆಗೆ 4.74 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 194.32 ಕೋಟಿ. ರೂ ಭರಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ 2,13,236 ಮಹಿಳೆಯರಿಗೆ ಪ್ರತೀ ಮಾಹೆ ಎರಡು ಸಾವಿರ ರೂಗಳನ್ನು ನೀಡಲಾಗುತ್ತಿದ್ದು, ಈವರೆಗೆ 1451.36 ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3,32,021 ಕುಟುಂಬಗಳು ನೋಂದಾಯಿಸಿ, ಉಚಿತ ವಿದ್ಯುಚ್ಛಕ್ತಿ ಸೌಲಭ್ಯ ಪಡೆದಿದ್ದು, ಇದಕ್ಕಾಗಿ 788.02 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಯ ಒಟ್ಟು 8,24,049 ಫಲಾನುಭವಿಗಳಿದ್ದು, ಪ್ರತಿಯೊಬ್ಬರಿಗೂ 5 ಕೆ.ಜಿ ಆಹಾರ ಧಾನ್ಯದ ಬದಲಾಗಿ ಇದುವರೆಗೆ 427.36 ಕೋಟಿ ರೂ. ಪಾವತಿಸಲಾಗಿದೆ ಹಾಗೂ ಯುವನಿಧಿ ಯೋಜನೆಯಡಿ 5401 ಅಭ್ಯರ್ಥಿಗಳು ನೋಂದಣಿಯಾಗಿದ್ದು, 5016 ಫಲಾನುಭವಿಗಳಿಗೆ 13.67 ಕೋಟಿ ರೂ. ನೇರ ನಗದನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ನವೆಂಬರ್ 24 ರಂದು ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶವನ್ನು ಆಯೋಜಿಸಲು ತೀರ್ಮಾನಿಸಿದ್ದು, ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾರಂಟಿ ಫಲಾನುಭವಿಗಳು ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಸಮಿತಿಯ ಸದಸ್ಯರುಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಸತೀಶ್ ಹಾಗೂ ಸಂತೋಷ್ ಕುಲಾಲ್, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಅಧ್ಯಕ್ಷರಾದ ಡಾ.ಸುನೀತಾ ಶೆಟ್ಟಿ, ನವೀನ್ ಚಂದ್ರ ಅಡ್ವೆ, ಮೋಹನ್ ಪೂಜಾರಿ, ಅಜಿತ್ ಹೆಗ್ಡೆ ಹಾಗೂ ಶಂಕರ ಶೇರಿಗಾರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಮಟ್ಟದ ಸದಸ್ಯರುಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *