ಕಾರ್ಕಳ, ಅಜೆಕಾರು: ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ಕನಸುಗಳನ್ನು ಕಂಡು ಅವುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ದೃಢ ಸಂಕಲ್ಪದಿಂದ ಕ್ರಮಬದ್ಧವಾಗಿ ಅಭ್ಯಾಸ ಮಾಡಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶಾಮಲಾ ಎಸ್. ಕುಂದರ್ ಹೇಳಿದರು.
ಅವರು ಜು. 27ರಂದು ಅಜೆಕಾರು ಪದ್ಮನಗರ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ಶಾಲಾ ಸಂಸತ್ತು ಉದ್ಘಾಟನಾ ಸಮಾರಂಭ ಹಾಗೂ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಜೀವನದಲ್ಲಿ ಎಂದಿಗೂ ಅಹಂಕಾರ ಪಡಬಾರದು. ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಸರಳತೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ಶ್ಯಾಮಲಾ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜು ಪ್ರಾಂಶುಪಾಲ ಸಂತೋಷ್, ನೂತನ ವಿದ್ಯಾರ್ಥಿ ಸಂಸತ್ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ, ಶಾಲೆಯ ಶಿಸ್ತು, ಗೌರವಕ್ಕೆ ಚ್ಯುತಿ ಬಾರದಂತೆ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕೆಂದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಎ.ಪಿ.ಆರ್.ಒ. ರಾಮಚಂದ್ರ ನೆಲ್ಲಿಕಾರ್, ಉಪಪ್ರಾಂಶುಪಾಲೆ ಆರತಿ ಶುಭ ಹಾರೈಸಿದರು. ಕೀರ್ತನಾ ಸ್ವಾಗತಿಸಿದರು. ಶಿಕ್ಷಕಿ ಆಶಾ ಜ್ಯೋತಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಅದಿತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಲಿಸ್ಟನ್ ಮಿನೇಜಸ್ ವಂದಿಸಿದರು.
