ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಉಗಾಂಡ ಘಟಕದ ಅಧ್ಯಕ್ಷರಾಗಿ ಸುಶಾನ್ ಪೂಜಾರಿ ನೇಮಕ

ಮಂಗಳೂರು ತಾಲೂಕಿನ ಮರಕಡ ಗ್ರಾಮದ ಹೆಮ್ಮೆಯ ಪುತ್ರರಾದ ಸುಶಾನ್ ಪೂಜಾರಿ ಅವರು ಕಳೆದ ಆರು ವರ್ಷಗಳಿಂದ ಉಗಾಂಡಾದ ಕಂಪಾಲದಲ್ಲಿ ನೆಲೆಸಿದ್ದು, ಕನ್ನಡ ಮತ್ತು ತುಳು ಭಾಷೆ, ಕಲೆ ಹಾಗೂ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮುದಾಯ ಸೇವಾ ಕ್ಷೇತ್ರಗಳಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿರುವ ಅವರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮರಕಡ, ಕಾವೂರು ಬಿಲ್ಲವ ಸಂಘ, ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಟ್ರಸ್ಟ್(ರಿ.) ಯುವಕ ಮಂಡಲ, ಮರಕಡ ಫ್ರೆಂಡ್ಸ್ ಸರ್ಕಲ್ ಹಾಗೂ ಗುರುಶಕ್ತಿ ಕೋ-ಆಪರೇಟಿವ್ ಸೊಸೈಟಿಗಳ ಸ್ಥಾಪಕ ನಿರ್ದೇಶಕರಾಗಿ ಸಂಘಟನೆಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ವಿದೇಶಿ ನೆಲದಲ್ಲಿದ್ದರೂ ತಾಯ್ನಾಡಿನ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಸಾಮಾಜಿಕ ಬದ್ಧತೆಯನ್ನು ಮರೆಯದೆ, ಅನಿವಾಸಿ ತುಳುವರನ್ನು ಒಗ್ಗೂಡಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯದಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಈ ಸೇವಾ ಮನೋಭಾವ ಮತ್ತು ಸಂಘಟನಾ ಚಟುವಟಿಕೆಗಳು ಮರಕಡ ಗ್ರಾಮಕ್ಕೆ ಮಾತ್ರವಲ್ಲದೆ ಸಮಸ್ತ ತುಳುನಾಡಿಗೆ ಹೆಮ್ಮೆಯ ವಿಷಯವಾಗಿದೆ.

ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ಸುಶಾನ್ ಪೂಜಾರಿ ಇವರನ್ನು ಉಗಾಂಡಾದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀಹರಿನಾರಾಯಣದಾಸ ಅಸ್ರಣ್ಣ ಕಟೀಲ್, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ, ಹಾಗೂ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಮತ್ತು ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ.ಆರ್. ಆಳ್ವ ಅವರು ಅಭಿನಂದಿಸಿ, ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ್ದಾರೆ.

ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಶತಮಾನೋತ್ಸವದ ಈ ಐತಿಹಾಸಿಕ ಸಂದರ್ಭದಲ್ಲಿ ಉಗಾಂಡ ಘಟಕಕ್ಕೆ ದೊರೆತಿರುವ ಹೊಸ ನಾಯಕತ್ವವು ಜಾಗತಿಕ ಮಟ್ಟದಲ್ಲಿ ತುಳು ಸಂಘಟನೆ, ತುಳು ಭಾಷೆ ಮತ್ತು ಸಂಸ್ಕೃತಿಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *