ಮೂಡುಬಿದಿರೆ: ಎಐ ಯುಗದಲ್ಲಿ ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವ ಅಗತ್ಯ – ಸುಯೋಗ್ ಶೆಟ್ಟಿ

ಮೂಡುಬಿದಿರೆ: ಕೃತಕ ಬುದ್ಧಿಮತ್ತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಉದ್ಯಮ ಹಾಗೂ ನಿರ್ವಹಣಾ ಕ್ಷೇತ್ರವನ್ನು ವೇಗವಾಗಿ ಪರಿವರ್ತಿಸುತ್ತಿದ್ದು, ವಿದ್ಯಾರ್ಥಿಗಳು ಬದಲಾವಣೆಗಳನ್ನು ಧನಾತ್ಮಕವಾಗಿ ಸ್ವೀಕರಿಸಬೇಕು ಎಂದು ಉದ್ಯಮಿ ಹಾಗೂ ಸ್ಟ್ರಾಟೆಜಿಕ್ ಅಡ್ವೈಸರ್ ಸುಯೋಗ್ ಶೆಟ್ಟಿ ಹೇಳಿದರು.

ಆಳ್ವಾಸ್ ಸ್ನಾತಕೋತ್ತರ ವ್ಯವಹಾರ ನಿರ್ವಹಣಾ ವಿಭಾಗದ 2026–28ನೇ ಸಾಲಿನ ಎಂಬಿಎ ವಿದ್ಯಾರ್ಥಿಗಳಿಗಾಗಿ ಸೋಮವಾರ ಆಯೋಜಿಸಿದ್ದ ‘ಎಂಬಿಎ ಆಗಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯ

ವಹಾರ ಕ್ಷೇತ್ರದಲ್ಲಿ ಯಶಸ್ಸಿನಷ್ಟೇ ವೈಫಲ್ಯಗಳಿಂದ ಕಲಿಯುವ ಸಾಮಥ್ರ್ಯವೂ ಮಹತ್ವದ್ದಾಗಿದೆ. ಉದ್ಯಮ ನಡೆಸುವಾಗ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸ್ಥೈರ್ಯ ಯಶಸ್ಸಿಗೆ ಅಗತ್ಯವಾದ ಪ್ರಮುಖ ಗುಣವಾಗಿದೆ. ಮುಂದಿನ ಐದಾರು ವರ್ಷಗಳ ವೃತ್ತಿಜೀವನವನ್ನು ವಿದ್ಯಾರ್ಥಿ ನೆಲೆಯಿಂದಲೇ ಯೋಚಿಸಬೇಕು. ನೀವು ಆಯ್ಕೆ ಮಾಡುವ ಕ್ಷೇತ್ರಗಳ ಮೇಲೆ ಎಐ ಮತ್ತು ಹೊಸ ನಿರ್ವಹಣಾ ತಂತ್ರಜ್ಞಾನಗಳು ಬೀರುವ ಪರಿಣಾಮವನ್ನು ಅರ್ಥಮಾಡಿಕೊಂಡು, ಅದಕ್ಕೆ ಅಗತ್ಯವಾದ ಕೌಶಲಗಳನ್ನು ಇಂದೇ ಬೆಳೆಸಿಕೊಳ್ಳಿ ಎಂದರು.

ವಿಭಾಗದ ಹಿರಿಯ ವಿದ್ಯಾರ್ಥಿನಿ ಮೇಘನಾ ವೆಂಕಟೇಶ್ ಮಾತನಾಡಿ, ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ವಿದ್ಯಾರ್ಥಿಗಳು ಬಲವಾದ ಸಂಪರ್ಕ ಜಾಲವನ್ನು ಬೆಳೆಸಿಕೊಳ್ಳಬೇಕು. ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಫಲಿತಾಂಶದ ಬಗ್ಗೆ ಅತಿಯಾದ ಚಿಂತನೆ ನಡೆಸುವುದಕ್ಕಿಂತ ಪ್ರಕ್ರಿಯೆಯ ಮೇಲೆ ಗಮನಹರಿಸಬೇಕು. ಸಣ್ಣ ಹೆಜ್ಜೆಯಿಂದ ಆರಂಭಿಸಿದರೂ, ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸುವ ಗುಣ ಯಶಸ್ಸಿಗೆ ಅತ್ಯಗತ್ಯ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪರೀಕ್ಷಾ ಕೇಂದ್ರಿತ ಶಿಕ್ಷಣಕ್ಕೆ ಸೀಮಿತರಾಗದೆ, ಸಂಸ್ಥೆಯಲ್ಲಿ ದೊರೆಯುವ ವೈವಿಧ್ಯಮಯ ಅವಕಾಶಗಳನ್ನು ಅನ್ವೇಷಿಸಬೇಕು. ಜೀವನದಲ್ಲಿ ಶಿಸ್ತು ಅತ್ಯಂತ ಮಹತ್ವದ್ದಾಗಿದ್ದು, ಜ್ಞಾನ ಮತ್ತು ವೃತ್ತಿಪರ ಕೌಶಲಗಳ ಜೊತೆಗೆ ವಿದ್ಯಾರ್ಥಿಗಳು ತಮ್ಮ ಸಮಾಜದೊಂದಿಗೆ ಅನ್ಯೋನ್ಯವಾಗಿ ಬದುಕುವ ಕಲೆಯನ್ನು ಕರಗತಗೊಳಿಸಿಕೊಳ್ಳಬೇಕು ಎಂದರು.

ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡೀಸ್ ಮಾತನಾಡಿದರು.
ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ ಸ್ವಾಗತಿಸಿ, ಡಾ. ಕ್ಯಾಥ್ರಿನ್ ಡೇವಿಡ್ ಕಾರ್ಯಕ್ರಮ ನಿರೂಪಿಸಿ, ಡಾ ವಿಷ್ಣುಮೂರ್ತಿ ವಂದಿಸಿದರು.

Leave a Reply

Your email address will not be published. Required fields are marked *