ಉಡುಪಿ: ನಮ್ಮೆಲ್ಲರ ಬದುಕು ಭಾರತದ ಸಂವಿಧಾನವನ್ನು ಅವಲಂಬಿಸಿದೆ. ಭಾರತದ ಸಂವಿಧಾನವು ಕೇವಲ ರಾಜಕೀಯದ ಬಗ್ಗೆ ಆಸಕ್ತಿ ಇರುವವರಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮೆಲ್ಲರ ದಿನನಿತ್ಯದ ಜೀವನದಲ್ಲೂ ಸಂವಿಧಾನವು ಪ್ರಭಾವ ಬೀರುತ್ತಿದೆ. ಸಂವಿಧಾನಕ್ಕೆ ಬದ್ದವಾಗಿ ಸರಕಾರಗಳು ಜನಪರವಾದ ಕಾನೂನುಗಳನ್ನು, ನೀತಿ-ನಿಯಮಾವಳಿಗಳನ್ನು ರೂಪಿಸುತ್ತವೆ. ಶಿಕ್ಷಣ, ಜ್ಞಾನ, ಉದ್ಯೋಗ ಎಲ್ಲಾ ಕ್ಷೇತ್ರಗಳಲ್ಲೂ ತಾರತಮ್ಯವಿಲ್ಲದ ಎಲ್ಲರಿಗೂ ಸಮಾನ ಅವಕಾಶಗಳನ್ನು ಸಂವಿಧಾನ ನಮಗೆ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.



ಅವರು ಮಣಿಪಾಲ ಗಣಿತ ನಗರದಲ್ಲಿರುವ ಜ್ಞಾನಸುಧಾ ಕಾಲೇಜಿನ ಶಾಂತಿ ರಮೇಶ್ ಪೈ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳೂ ಸಮಾನ ಅವಕಾಶಗಳನ್ನು ಪಡೆದು ಮುಖ್ಯವಾಹಿನಿಯಲ್ಲಿ ಬೆರೆಯಲು ಸಹಾಯವಾಗುವಂತೆ ಮೀಸಲಾತಿ ನೀಡಲಾಗಿದೆ. ಆಚಾರ-ವಿಚಾರ, ಭಾಷೆ, ಜಾತಿ-ಮತ, ಆಹಾರ ಪದ್ದತಿಗಳಲ್ಲಿ ಭಿನ್ನತೆ ಇದ್ದರೂ, ನಮ್ಮ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ್ದರೆ ಅದಕ್ಕೆ ನಮ್ಮ ಸಂವಿಧಾನವೇ ಕಾರಣ. ಸ್ವಾತಂತ್ರ್ಯಪೂರ್ವದಲ್ಲಿ ರಾಜರ ಆಡಳಿತ ಬಳಿಕ ಬ್ರಿಟಿಷರ ಆಡಳಿತವಿತ್ತು. ಆದರೆ ಸ್ವಾತಂತ್ರ್ಯಾ ನಂತರ ಜನರೇ ಜನರಿಂದ ಆಳಿಸಿಕೊಳ್ಳುವ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂತು. ಇಂದು ಜನರೇ ತಮ್ಮ ಪ್ರತಿನಿಧಿಗಳನ್ನು ಹಾಗೂ ಸರ್ಕಾರಗಳನ್ನು ಆರಿಸುತ್ತಾರೆ. ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ ಅವರನ್ನು ಮನೆಗೆ ಕಳುಹಿಸುವ ಅಧಿಕಾರವನ್ನೂ ಸಂವಿಧಾನವು ನಮಗೆ ನೀಡಿದೆ ಎಂದರು.
ಸರಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ಸರಕಾರ ಮತ್ತು ನಾಯಕರು ರಾಷ್ಟ್ರ ಎನಿಸಿಕೊಳ್ಳುವುದಿಲ್ಲ. ರಾಷ್ಟ್ರ ಯಾವತ್ತಿಗೂ ಶ್ರೇಷ್ಠ. ಸಂವಿಧಾನವು ರಾಷ್ಟ್ರವನ್ನು ರಕ್ಷಿಸುತ್ತದೆ. ಜನರಿಗೆ ಸರಕಾರಗಳ ಮೌಲ್ಯ ಮಾಪನ ಮಾಡಲು ಮತ್ತು ಸರಕಾರಗಳನ್ನು ಬದಲಾಯಿಸಲು ಪ್ರತಿ ಐದು ವರ್ಷಗಳಿಗೊಮ್ಮೆ ಮತದಾನ ನಡೆಸುವ ಹಕ್ಕನ್ನು ಸಂವಿಧಾನ ನೀಡಿದೆ. ಇದರಿಂದಾಗಿ ಜನಪ್ರತಿನಿಧಿಗಳೂ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದರು.
ವಿದ್ಯಾರ್ಥಿಗಳು ಸಂವಿಧಾನದ ಮಹತ್ವವನ್ನು ಅರಿಯಬೇಕು. ಜನರ ಸಮಸ್ಯೆಗಳನ್ನು ಆಲಿಸಲು ಅವರ ಆಸೆ-ಆಕಾಂಕ್ಷೆಗಳನ್ನು ಪೂರೈಸಲು ಸಂವಿಧಾನವು ನಮಗೆ ಅವಕಾಶ ನೀಡಿದ್ದು, ವಿದ್ಯಾರ್ಥಿಗಳು ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಬಹಳಷ್ಟು ಯುವಕರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಬಹುದು, ಯುವ ಸಂಸತ್ ಕಾರ್ಯಕ್ರಮವು ಅದಕ್ಕೆ ವೇದಿಕೆಯಾಗಲಿ ಎಂದು ಹಾರೈಸಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಮಾನವ ಸರಪಳಿ, ಸಂವಿಧಾನ ಪೀಠಿಕೆ ಓದುವ್ಯದು, ಬೈಕ್ ಮತ್ತು ಸೈಕಲ್ ರ್ಯಾಲಿಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸರಕಾರದ ನಿರ್ದೇಶನದಂತೆ ಯುವ ಸಂಸತ್ತು ಸಭೆಗಳನ್ನು ಈಗಾಗಲೇ ತಾಲೂಕು ಮಟ್ಟದಲ್ಲಿ ಆಯೋಜಿಸಿದ್ದು, ಇಚಿದು ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಉತ್ತಮ ವಾಗ್ಮಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುವುದು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸದೀಯ ಕಲಾಪಗಳ ಕಾರ್ಯವೈಖರಿ ಮತ್ತು ಕಾಯ್ದೆ ಕಾನೂನುಗಳ ರಚನೆ ಹೇಗೆ ನಡೆಯುತ್ತದೆ ಎಂಬುದನ್ನು ಯುವಜನರು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಇಂತಹ ಅಣಕು ಯುವ ಸಂಸತ್ಗಳು ಸೂಕ್ತ ವೇದಿಕೆಯಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ತಮ್ಮ ಪ್ರಭುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಜನರ ಆಶೋತ್ತರಗಳನ್ನು ಈಡೇರಿಸಬೇಕು ಎಂದ ಅವರು, ವಿದ್ಯಾರ್ಥಿಗಳು ಭವಿಷ್ಯದ ಗುರಿಯನ್ನು ಇಟ್ಟುಕೊಳ್ಳುವುದರೊಂದಿಗೆ ಛಲದಿಂದ ಅದನ್ನು ನನಸಾಗಿಸಿಕೊಳ್ಳಬೇಕು. ಸದೃಢ ಭಾರತ ನಿರ್ಮಾಣ ಮಾಡಲು ಯುವಶಕ್ತಿ ಮುಂದಾಗಬೇಕು ಎಂದು ಕರೆ ನೀಡಿದರು.
ಶಾಸಕ ಯಶ್ಪಾಲ್ ಎ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವದಲ್ಲಿಯೇ ಅತೀ ಹೆಚ್ಚು ಯುವ ಜನತೆಯನ್ನು ಹೊಂದಿರುವುದು ನಮ್ಮ ದೇಶ. 30 ಕೋಟಿಗೂ ಹೆಚ್ಚು ಯುವ ಶಕ್ತಿ ನಮ್ಮಲ್ಲಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದರ ಜೊತೆಗೆ ಕ್ರೀಡೆ, ಕಲೆ ಸ್ಭೆರಿದಂತೆ ವ್ಮತ್ತಿತರ ಚಟುವಟಿಕೆಗಳಲ್ಲಿ ಭಾಗವಹಿಸುವುದರೊಂದಿಗೆ ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗುವುದರ ಜೊತೆಗೆ ಸಮಾಜ ಸುಧಾರಣೆ ತರುವ ಮಾರ್ಗದಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಸಂವಿಧಾನದ ಪೀಠಿಕೆ ಬೋದಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್ ವೈ ರಾವ್, ವಕೀಲರ ಸಂಘದ ಅಧ್ಯಕ್ಷರಾದ ರೇನಾಲ್ಡೋ ಪ್ರವೀಣ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು.
ಯುವ ಸಂಸತ್: ಆಡಳಿತ- ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ :
ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಗಂಭೀರ ಚರ್ಚೆ ನಡೆಯಿತು. ರಾಜ್ಯ ವಿಧಾನಸಭೆಯ ಮಾದರಿಯಲ್ಲಿಯೇ ನಡೆದ ಈ ಅಣಕು ಸಂಸತ್ ಕಲಾಪದಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಯುವ ನಾಯಕರು ಗಂಭೀರ ವಿಷಯಗಳನ್ನು ಮಂಡಿಸಿದರು.
ಸದನದಲ್ಲಿ ಸರ್ಕಾರಿ ಶಾಲೆಗಳ ದುರವಸ್ಥೆ ಕುರಿತು ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ವಿದ್ಯಾರ್ಥಿಗಳು ಪ್ರಾಣಭಯದಿಂದ ಪಾಠ ಕೇಳುವಂತಾಗಿದೆ. ಪಾಠ ಮಾಡಲು ಶಿಕ್ಷಕರೇ ಇಲ್ಲ. ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ಕುಡಿಯುವ ನೀರಿಗೂ ತಾತ್ವಾರವಿದ್ದು, ಕೇಂದ್ರದಿಂದ ಬಂದ ಅನುದಾನ ಬಳಕೆಯಾಗದೆ 40% ಅನುದಾನ ವಾಪಸ್ ಆಗಿದೆ ಎಂದು ಪ್ರತಿಪಕ್ಷ ನಾಯಕರು ಸರಕಾರದ ವೈಫಲ್ಯಕ್ಕೆ ಕನ್ನಡಿ ಹಿಡಿದರು.
ಶಿಕ್ಷಣ ಸಚಿವರ ಪರವಾಗಿ ಉತ್ತರಿಸಿದ ಮುಖ್ಯಮಂತ್ರಿಗಳು ಇದಕ್ಕೆ ಹಿಂದಿನ ಸರ್ಕಾರ ಕೈಗೊಂಡ ಅಧ್ವಾನಗಳೇ ಕಾರಣ ಎಂದರು. ಕೇವಲ ಕಡತಗಳಲ್ಲಿ ಮಾತ್ರ ಶಾಳೆಗಳಿವೆ ಆದರೆ ಸ್ಥಳ ಪರಿಶೀಲನೆ ನಡೆಸಿದರೆ ಅಲ್ಲಿ ಶಾಲೆಗಳು ಅಸ್ತಿತ್ವದಲ್ಲೇ ಇಲ್ಲ. ತಾವು ಸರ್ಕಾರದಲ್ಲಿರುವಾಗ ಕೈಗೊಂಡ ಅಧ್ವಾನಗಳಿಂದಾಗಿ ಅನುದಾನ ವಾಪಸಾಗಿದೆ. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ದಾಖಲೆ ಒದಗಿಸಿ ಪ್ರತಿಪಕ್ಷ ನಾಯಕರಿಗೆ ಮಾತಿನೇಟು ನೀಡಿದರು.
ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ದಿನಕ್ಕೆ 2.6 ಕೋಟಿ ರೂ ಸೈಬರ್ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಸರಕಾರ ಎಚ್ಚತ್ತಿಲ್ಲ, ವಂಚನೆ ಪ್ರಕರಣಗಳಲ್ಲಿ ದುಡ್ಡು ಕಳೆದುಕೊಂಡವರಿಗೆ ಹಣ ವಾಪಸು ಮಾಡುವ ಪ್ರಕ್ರಿಯೆ ನಿಧಾನವಾಗಿದೆ. ಸೆನ್ ಠಾಣೆಗಳಲ್ಲಿ 320 ಹುದ್ದೆ ಖಾಲಿ ಇದ್ದರೂ ಹುದ್ದೆ ಭರ್ತಿಗೆ ಸರಕಾರ ಮುಂದಾಗುತ್ತಿಲ್ಲ ಎಂದು ಪ್ರತಿಪಕ್ಷ ನಾಯಕರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು ಸೆನ್ ಠಾಣೆಗಳಲ್ಲಿ ಪರಿಣತಿ ಹೊಂದಿದ ಎಥಿಕಲ್ ಹ್ಯಾಕರ್ ಗಳನ್ನು ನೇಮಿಸಲು ಪ್ರಕಿಯೆ ನಡೆಯುತ್ತಿದೆ. ಸೈಬರ್ ಪ್ರಕರಣಗಳನ್ನು ದಾಖಲಿಸಲು 1093 ಕಾರ್ಯನಿರ್ವಹಿಸುತ್ತಿದೆ. ಮೂರುವರ್ಷಗಳಲ್ಲಿ 5476 ಪ್ರಕರಣಗಳಲ್ಲಿ 678 ಕೋಟಿ ಸಂತ್ರಸ್ತರಿಗೆ ವಾಪಾಸಾಗಿದೆ. ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿದ್ದು ವಿಳಂಬವಾಗುತ್ತಿದೆ ಎಂದು ಉತ್ತರಿಸಿದಾಗ ಪ್ರತಿಪಕ್ಷ ಸದಸ್ಯರು ಗದ್ದಲ ನಡೆಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು ಸದನದಲ್ಲಿ ಗದ್ದಲ ಎಬ್ಬಿಸಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಎಲ್ಲರೂ ಒಟ್ಟಾಗಿ ಮಾತನಾಡದೆ ಒಬ್ಬೊಬ್ಬರಾಗಿ ಮಾತನಾಡಿ, ಸದನದ ಗೌರವ ಕಾಪಾಡಿ ಎಂದು ಕಿವಿಮಾತು ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಶುಚಿ ಯೋಜನೆಯಡಿ ಕಳಪೆಗುಣಮಟ್ಟದ ಸ್ಯಾನಿಟರಿ ಪ್ಯಾಡ್ ವಿತರಣೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಅಲೆಯವುದನ್ನು ತಪ್ಪಿಸಲು ಕಾರವಾರ ಮತ್ತು ಶಿರಸಿ ಜಿಲ್ಲೆಯನ್ನು ವಿಭಜಿಸುವ ಕುರಿತು, ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಕುರಿತು ಪ್ರತಿಪಕ್ಷದ ಸದಸ್ಯರು ಆಡಳಿದ ಪಕ್ಷದ ಸದಸ್ಯರ ಮೇಲೆ ಆರೋಪ ಹೊರಿಸಿದರೆ, ಅತ್ತ ಆಡಳಿತ ಪಕ್ಷದ ಸದಸ್ಯರೂ ದಿಟ್ಟತನದಿಂದ ಅಂಕಿ-ಅಂಶಗಳ ಆಧಾರ ಸಹಿತ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು.
