ಮನಸೊಂದು ಮಗು ಬದುಕಿನಲ್ಲಿ ಬಯಸಿದ್ದೆಲ್ಲ ಸಿಗುವುದಿಲ್ಲ ಎಂಬುವುದು ಅದಕ್ಕೇನು ಗೊತ್ತು..?

✍️ಅಂಜಲಿ ಶ್ರೀನಿವಾಸ್ ಖಟವಟೆ
ಹುಬ್ಬಳ್ಳಿ

ಸದಾ ತನ್ನದೇ ಕಲ್ಪನೆಯ ಲೋಕದಲ್ಲಿ ಬಣ್ಣ ಬಣ್ಣದ ಕನಸುಗಳ ಅರಮನೆಯಲ್ಲಿ ಕಲ್ಪನೆಯ ಕನಸಿಗೆ ರೆಕ್ಕೆ ಕಟ್ಟಿ ಖುಷಿಪಡುವುದು ಮನುಸ್ಸು ಕ್ಷಣಕ್ಷಣಕ್ಕೂ ಬದಲಾಗುವ ಕಡಲಿನ ಅಲೆಗಳಂತೆ ಇರುತ್ತದೆ.
ಒಂದು ಕ್ಷಣದಲ್ಲಿ ಆಕಾಶದೆತ್ತರಕ್ಕೆ ಏರುವಷ್ಟು ಸಂತೋಷವಾದರೆ, ಮರುಕ್ಷಣವೇ ಸಣ್ಣ ಕಾರಣಕ್ಕೆ ಮನಸ್ಸು ಕುಗ್ಗಿ ಹೋಗುತ್ತದೆ. ಸನ್ನಿವೇಶಗಳಿಗೆ ತಕ್ಕಂತೆ ಮನಸ್ಸು ತನ್ನ ಬಣ್ಣವನ್ನು ಬದಲಾಯಿಸುತ್ತಿರುತ್ತದೆ.
ಹೊರಗೆ ನಗುತ್ತಿದ್ದರೂ ಒಳಗೆ ನೂರು ನೋವುಗಳನ್ನು ಬಚ್ಚಿಟ್ಟುಕೊಳ್ಳುವ ಶಕ್ತಿಯೂ ಮನಸ್ಸಿಗಿದೆ. ಹಾಗೆಯೇ, ಏನೂ ಇಲ್ಲದಿದ್ದರೂ ಸಣ್ಣ ವಿಷಯಗಳಲ್ಲಿ ದೊಡ್ಡ ಖುಷಿಯನ್ನು ಹುಡುಕಿಕೊಳ್ಳುವ ಗುಣವೂ ಇದೆ.
ಸಿಕ್ಕಿದ್ದರಲ್ಲಿ ತೃಪ್ತಿ ಪಡುವುದಕ್ಕಿಂತ, ಸಿಗದಿರುವುದರ ಕಡೆಗೆ ಮನಸ್ಸು ಹೆಚ್ಚು ಆಕರ್ಷಿತವಾಗುತ್ತದೆ. ಒಂದು ಆಸೆ ಈಡೇರಿದ ತಕ್ಷಣ ಮತ್ತೊಂದು ಆಸೆ ಹುಟ್ಟಿಕೊಳ್ಳುವುದು ಮನುಷ್ಯ ಸಹಜ ಗುಣ.
ಒಂದೇ ಮನಸ್ಸು ಇತರರ ಕಷ್ಟಕ್ಕೆ ಕರಗಿ ನೀರಾಗಬಲ್ಲದು, ಮತ್ತೊಂದೆಡೆ ತನ್ನ ಸ್ವಾರ್ಥಕ್ಕಾಗಿ ಕಲ್ಲಾಗಿಯೂ ಬದಲಾಗಬಲ್ಲದು.ಮನಸ್ಸಿನ ಹೂದೋಟದಲ್ಲಿ ಭಾವ ಬೃಂಗವು ವಿವಿಧ ಭಾವಗಳ ಸ್ಪರ್ಶಿಸುವುದು.ಬಯಸಿದ್ದೆಲ್ಲ ಸಿಗದು ಬಾಳಲಿ ಎಂಬ ಮನಸ್ಸು… ಮನಸ್ಸಿದ್ದರೆ ಮಾರ್ಗ ಎಂದು ಕೂಡ ಹೇಳುವುದು. ಒಮ್ಮೆ ತಾಯಿ ಮಗು ರೇಲ್ವೆಯಲ್ಲಿ ಕುಳಿತುಕೊಳ್ಳುತ್ತಾರೆ. ಒಂದು ನಿಲ್ದಾಣ ಬಂದಾಗ ಮಗು ಕಿಟಕಿಯಿಂದ ಆಟಿಕೆಯನ್ನು ಗಮನಿಸುತ್ತದೆ ಆ ಆಟಿಕೆಯನ್ನು ಬೇಕೇ ಬೇಕು ಎಂದು ರಚ್ಚೆ ಹಿಡಿಯುತ್ತದೆ. ತಾಯಿಗೆ ಬೇರೆದಾರಿ ಇಲ್ಲದೆ ರೇಲಿನಿಂದ್ ಕೆಳಗಿಳಿಯುತ್ತಾಳೆ. ರೇಲು ಮುಂದಿನ ನಿಲ್ದಾಣಕ್ಕೆ ಹೊರಡಲು ಸಿದ್ಧವಾದಾಗ ಮಗು ಗಾಬರಿಯಾಗುತ್ತೆ ಮತ್ತೆ ಅಳಲು ಪ್ರಾರಂಭಿಸುತ್ತದೆ.
ಸುತ್ತ ಮುತ್ತಲು ತನ್ನ ತಾಯಿಯ ಬರುವಿಕೆಗೆ ಹಂಬಲಿಸುತ್ತದೆ. ತಾಯಿ ಬಂದ ತಕ್ಷಣ ತಾಯಿಯನ್ನು ಬಿಗಿದಪ್ಪಿಕೊಂಡು ಅಳುತ್ತದೆ.. ಮನಸ್ಸು ನಿರಾಳವಾಗಿರುತ್ತದೆ. ಯಾವ್ ಆಟಿಕೆಗಾಗಿ ಹಠ ಹಿಡಿದು ಕೂತಿತ್ತೋ ಆ ಆಟಿಕೆ ಈಗ ಬೇಡವಾಗಿದೆ.. ಮನಸ್ಸು ಕೂಡ ಮಗುವಿನ ಹಾಗೇನೇ ಅಲ್ಲವೇ..? ಇರುವುದೆಲ್ಲ ಬಿಟ್ಟು ಬೇರೆ ವಸ್ತುವಿನ ಕಡೆ ವಾಲುತ್ತದೆ.. ಕಳೆದುಕೊಂಡಾಗಲೇ ಆ ವಸ್ತುವಿನ ವಾಸ್ತವ ಬೆಲೆ ಅರಿಯುತ್ತದೆ.

ಮನಸಿಗೊಂದು ಕಿವಿಮಾತು
ಓ ಮನಸೇ, ನೀನಲ್ಲದ ನಿನ್ನನ್ನು ನೀನೆಲ್ಲಿ ಹುಡುಕದಿರು ನಿನ್ನ ಪ್ರಯತ್ನಕ್ಕೂ ಮೀರಿದ್ದು ಕಾಲಕ್ಕೆ ಬಿಟ್ಟುಬಿಡು
ಎಲ್ಲವೂ ನಿನ್ನ ಕೈಯಲ್ಲಿ ಇಲ್ಲ
ಕೆಲವು ವಿಷ್ಯಗಳು ಹಾಗೆಯೇ ಬಿಡಬೇಕು.
ಕೆಲವು ಜನರನ್ನು ಹಾಗೆಯೇ ಬಿಟ್ಟುಬಿಡಬೇಕು.
ಕೆಲವು ನೋವುಗಳನ್ನ ಹಾಗೆಯೇ ಒಪ್ಪಿಕೊಂಡು ಬಿಡಬೇಕು.ಕೆಲವು ಸಂತಸಗಳನ್ನು ಹಾಗೆಯೇ ಸಂಭ್ರಮಿಸಬೇಕು
ನೀನು ಎಲ್ಲರನ್ನೂ ಮೆಚ್ಚಿಸಬೇಕಿಲ್ಲ .
ನೀನು ಎಲ್ಲರ ನಿರೀಕ್ಷೆಗೂ ತಕ್ಕ ಹಾಗೆ ಬದುಕಬೇಕೆಂದೇನಿಲ್ಲ
ನೀನು ನೀನಾಗಿ ಬದುಕು
ಬೇಸರವಾದರೆ ಸ್ವಲ್ಪ ಅತ್ತುಬಿಡು, ತಪ್ಪಿಲ್ಲ.
ಖುಷಿಯಾದರೆ ನಕ್ಕು ಬಿಡು ತಪ್ಪಿಲ್ಲ
ಯಾರಿಗೂ ಮಾತನಾಡುವುದಕ್ಕೆ ಇಷ್ಟ ಇಲ್ಲ ಎಂದರೆ ಮೌನವಾಗಿದ್ದು ಬಿಡು ಅದೂ ತಪ್ಪಲ್ಲ.
ಜೀವನ ಎಂದರೆ ಓಟ ಅಲ್ಲ.
ಜೀವನ ಎಂದರೆ ಒಂದು ಸಣ್ಣ ನಡಿಗೆ.
ದಾರಿಯಲ್ಲಿ ಸಿಗೋ ಗಾಳಿ, ಮರ, ಒಂದು ಕಾಫಿ, ಒಂದು ನಗು… ಇವನ್ನೆಲ್ಲ ಅನುಭವಿಸುತ್ತ ಸಾಗಬೇಕಷ್ಟೆ..
ಅದಕ್ಕೆ ಇವತ್ತಿಂದ, ದಿನಕ್ಕೆ ಒಮ್ಮೆಯಾದರೂ ಮನಸ್ಸಿಗೆ ಹೇಳಿ…ಓ ಮನಸೇ ರಿಲ್ಯಾಕ್ಸ್
ಇವತ್ತು, ಈ ಕ್ಷಣ, ನಾನು ನನ್ನ ಜೊತೆ ಇದ್ದೀನಿ. ಅಷ್ಟೇ…

Leave a Reply

Your email address will not be published. Required fields are marked *