ಉಡುಪಿ, ನ. 21: ಗ್ರಂಥಾಲಯಗಳು ಜ್ಞಾನದ ಭಂಡಾರಗಳಿದ್ದಂತೆ. ಪ್ರಪಂಚದ ಎಲ್ಲ ಭಾಷೆಯ ಪುಸ್ತಕಗಳು ನಮಗೆ ಗ್ರಂಥಾಲಯದಲ್ಲಿ ದೊರೆಯುತ್ತದೆ. ಪುಸ್ತಕ ಓದುವುದರಿಂದ ನಮ್ಮ ಜ್ಞಾನ ಹೆಚ್ಚುತ್ತದೆ ಎಂದು ಶಾಸಕ ಯಶ್ಪಾಲ್ ಎ ಸುವರ್ಣ ಹೇಳಿದರು.
ಅವರು ಶುಕ್ರವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯ ಉಡುಪಿ ಇದರ ಆಶ್ರಯದಲ್ಲಿ ಅಜ್ಜರಕಾಡು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2026 ಅಂಗವಾಗಿ ಉತ್ತಮ ಓದುಗ/ ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.




ಕಲಿಯುವುದು ಒಂದು ನಿರಂತರ ಪ್ರಕ್ರಿಯೆ. ಜೀವನದಲ್ಲಿ ಎಷ್ಟು ಓದಿದರೂ ಕಡಿಮೆ. ಓದಿದಷ್ಟೂ ಮತ್ತೂ ಓದಬೇಕು ಎನಿಸುತ್ತದೆ. 30 ಕೋಟಿ ಯುವಕರನ್ನು ಹೊಂದಿದ ನಮ್ಮ ಭಾರತ ಯುವ ದೇಶ. ಹಲವಾರು ವಿದ್ಯಾರ್ಥಿಗಳು ಸಾರ್ವಜನಿಕ ಗ್ರಂಥಾಲಯಗಳಲ್ಲಿ ದೊರೆಯುವ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆದು ಉನ್ನತ ಅಧಿಕಾರಿಗಳಾಗುತ್ತಾರೆ. ಗ್ರಂಥಾಲಯ ಪಿತಾಮಹ ಎಸ್. ಆರ್ ರಂಗನಾಥ್ ಅವರ ದೂರದೃಷ್ಟಿಯ ಪರಿಣಾಮವಾಗಿ ಇಂದು ದೇಶದ ಮೂಲೆ ಮೂಲೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳಿವೆ ಎಂದರು.
ಜನಸಾಮಾನ್ಯರ ಜ್ಞಾನಾರ್ಜನೆಗೋಸ್ಕರ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಯುವಜನರು ಸೇರಿದಂತೆ ಎಲ್ಲಾ ವಯೋಮಾನದವರು ಗ್ರಂಥಾಲಯಗಳಿಗೆ ಭೇಟಿ ನೀಡಿ, ಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಓದುವುದರೊಂದಿಗೆ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದ ಅವರು, ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇನ್ನೂ ಉತ್ತಮ ಫಲಿತಾಂಶ ಪಡೆಯುವುದರೊಂದಿಗೆ ಶೈಕ್ಷಣಿಕ ಕಾಶಿ ಎಂದೇ ಹೆಸರುವಾಸಿಯಾದ ಉಡುಪಿ ಜಿಲ್ಲೆಗೆ ಮತ್ತಷ್ಟು ಕೀರ್ತಿ ತರುವುದರೊಂದಿಗೆ ರಾಷ್ಟ್ರಕ್ಕೆ ಮಾದರಿಯಾಗಬೇಕು ಎಂದರು.
ಉತ್ತಮ ಓದುಗ ಪುರಸ್ಕಾರಕ್ಕೆ ಭಾಜನರಾದ ಗಣೇಶ್ ಬಿ ಹೆಗ್ಡೆ ಹಾಗೂ ವಿಜಯಲಕ್ಷ್ಮಿ ಬಿ.ವಿ ಮತ್ತು ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರಕ್ಕೆ ಭಾಜನರಾದ ಪುಷ್ಪ, ನಳಿನಾಕ್ಷಿ, ಸಾಧನಾ ಹಾಗೂ ಅನಿತಾ ಅವರುಗಳನ್ನು ಸನ್ಮಾನಿಸಲಾಯಿತು.
ಸೈಬರ್ ಕ್ರೈಂ ಪೊಲೀಸ್ ಠಾಣೆಯ ನೀಲೇಶ್, ಸೈಬರ್ ಸುರಕ್ಷತಾ ಜಾಗೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಿಮಿತ್ತ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಶೋಕ್ ಕಾಮತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ರಂಜಿತಾ ಸಿ. ಪ್ರಾಸ್ತಾವಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ನಮಿತಾ ಬಿ. ಸ್ವಾಗತಿಸಿ, ಪ್ರಥಮ ದರ್ಜೆ ಸಹಾಯಕಿ ಪ್ರೇಮ ನಿರೂಪಿಸಿ, ಗ್ರಂಥಾಲಯ ಸಹಾಯಕಿ ಶ್ಯಾಮಲಾ ವಂದಿಸಿದರು.
