ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ‘‘ವಿಶ್ವ ಸೊಳ್ಳೆ ದಿನಾಚರಣೆ’’ ಕಾರ್ಯಕ್ರಮವನ್ನು ಶುಕ್ರವಾರ ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.


ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ, 1897 ನೇ ಅಗಸ್ಟ್ 20 ರಂದು ಭಾರತೀಯ ಸಂಜಾತ ಬ್ರಿಟಿಷ್ ವೈದ್ಯ ವಿಜ್ಞಾನಿ ಸರ್. ರೋನಾಲ್ಡ್ ರೋಸ್ ಇವರು ಸೊಳ್ಳೆಗಳಿಂದ ಮನುಷ್ಯನಿಗೆ ಮಲೇರಿಯಾ ಹರಡುತ್ತದೆ ಎಂದು ಜಗತ್ತಿಗೆ ಹೇಳಿದ ದಿನವಾಗಿದೆ. ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜನಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಹೆಚ್.ನಾಯ್ಕ್‍ರ್ ಮಾತನಾಡಿ, ಅನಾಫಿಲಿಸ್, ಕ್ಯುಲೆಕ್ಸ್, ಈಡೀಸ್ ಈಜಿಪ್ಟ್ ಈ ಮೂರು ಜಾತಿಯ ಸೊಳ್ಳೆಗಳು ಮಲೇರಿಯಾ, ಡೆಂಗ್ಯೂ, ಆನೆಕಾಲು, ಚಿಕ್ಕುಂಗುನ್ಯಾ, ಮೆದುಳುಜ್ವರ ಸೇರಿದಂತೆ ಮುಂತಾದ ಕಾಯಿಲೆಗಳನ್ನು ಹರಡುತ್ತವೆ. ರೋಗಗಳ ನಿರ್ಮೂಲನೆಗೆ ಸೊಳ್ಳೆಗಳ ನಿಯಂತ್ರಣವೊಂದೇ ದಾರಿಯಾಗಿದ್ದು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಎಂದು ಮಾಹಿತಿ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವಪ್ಟ ಪಟೇಗಾರ್ ಮಾತನಾಡಿ, ಯಾವುದೇ ಜ್ವರ ಬಂದಾಗ ತತ್‍ಕ್ಷಣವೇ ಆರೋಗ್ಯ ಕೇಂದ್ರಗಳಿಗೆ ತೆರಳಿ ರಕ್ತ ಪರೀಕ್ಷೆ ಮಾಡಿಸುವುದರೊಂದಿಗೆ, ಸೂಕ್ತ ಚಿಕಿತ್ಸೆ ಪಡೆದುಕೊ¼ಳ್ಳಬೇಕು. ನೀರು ಶೇಖರಣ ತೊಟ್ಟಿಗಳನ್ನು ವಾರಕೊಮ್ಮೆ ಶುಚಿಗೊಳಿಸಿ ಭದ್ರ ಮುಚ್ಚಳವನ್ನು ಮುಚ್ಚಿಡಬೇಕು, ಸಂಜೆ ವೇಳೆ ಕಿಟಕಿ ಬಾಗಿಲುಗಳನ್ನು ಮುಚ್ಚಬೇಕು ಎಂದ ಅವರು, ಸ್ವಯಂ ರಕ್ಷಣಾ ವಿಧಾನ, ರಾಸಾಯನಿಕ ವಿಧಾನ, ಜೈವಿಕ ವಿಧಾನದ ಬಗ್ಗೆ ಮುಂಜಾಗೃತಾ ಕ್ರಮವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮೇಲ್ವಿಚಾರಣಾಧಿಕಾರಿ ಪಿ.ಎಂ. ಇಟಗಿ, ಪ್ರಾಧ್ಯಾಪಕರಾದ ಅನುಪಮಾ. ಐ, ಡಾ.ರಂಜನಾ ಪಾಟೀಲ್, ಪ್ರಾಧ್ಯಾಪಕ ವೃಂದದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿ ವಂದಿಸಿದರು.
