ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ. ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಜಿಲ್ಲೆ ವತಿಯಿಂದ ಸೋಮವಾರ ಉಡುಪಿಯ ಸರಕಾರಿ ಪದವಿ ಪೂರ್ವಕಾಲೇಜಿನಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ಮತ್ತು ಸಂವಿಧಾನ ದಿನಾಚರಣೆ ಅಂಗವಾಗಿ ಅರಿವಿನ ಬೆಳಕು ಉಪನ್ಯಾಸ ಮಾಲೆ- 21 ಕಾರ್ಯಕ್ರಮ ನಡೆಯಿತು.

ಉಡುಪಿಯ ಸರಕಾರಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ನಾಗರಾಜ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಾತಿ ಮತಗಳ ಸಂಕೋಲೆಯನ್ನು ಮೀರಿ ಶಾಂತಿಯುತ ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಸಂವಿಧಾನವು ಪ್ರಮುಖ ಕಾರಣ ಇಂತಹ ಸಂವಿಧಾನವನ್ನು ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರಂತರ ಬರಹಗಳು ಮತ್ತು ಸಾಂವಿಧಾನಿಕ ಮೌಲ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸಕಿ ಮತ್ತು ಸಾಹಿತಿ ವಾಸಂತಿ ಅಂಬಲಪಾಡಿ ಉಪನ್ಯಾಸ ನೀಡಿ ಮಾತನಾಡಿ, ಮಕ್ಕಳಿಗಾಗಿ ಅನೇಕ ಕೃತಿಗಳನ್ನು ಬರೆದ ಕಾರಂತರು ಬಾಲವನವನ್ನು ಕಟ್ಟಿ ಅದರ ಮೂಲಕ ಮಕ್ಕಳಿಗೆ ವಿಜ್ಞಾನ ಪ್ರಪಂಚವನ್ನು ಪರಿಚಯಿಸಿದರು. ಕಾರಂತರ ಕಾದಂಬರಿಗಳು ಸಂವಿಧಾನಿಕ ಮೌಲ್ಯಗಳನ್ನು ತಿಳಿಸುತ್ತದೆ. ಇಂದಿನ ಯುವ ಪೀಳಿಗೆಯಲ್ಲಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.
ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಕಾರ್ಯಕ್ರಮ ದಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪನ್ಯಾಸಕ ಪರಮೇಶ್ವರ ಮೋಗವಿರ ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ದಯಾನಂದ ಡಿ ಸ್ವಾಗತಿಸಿ, ಟ್ರಸ್ಟಿನ ಸದಸ್ಯ ಸತೀಶ್ ಕೊಡುವೂರು ವಂದಿಸಿದರು.
