ಗುಣಮಟ್ಟದೊಂದಿಗೆ ತ್ವರಿತವಾಗಿ ಸೇತುವೆ ಕಾಮಗಾರಿ ಪೂರ್ಣಗೊಳಿಸಿ: ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್

ಉಡುಪಿ: ಬಜಗೋಳಿಯ ತೆಂಕಬೆಟ್ಟು ರಾಜ್ಯ ಹೆದ್ದಾರಿ ರಸ್ತೆಯ 5 ಕೋಟಿ ರೂ. ವೆಚ್ಚದಲ್ಲಿ ಪೆರ್ಡೂರು -ಬೈರಂಪಳ್ಳಿ- ಅಣ್ಣಾಲು ಸಂಪರ್ಕ ಸೇತುವೆಯ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗಧಿತ ಕಾಲಾವಧಿಯ ಒಳಗೆ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ಸರಕಾರದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಕರೆ ನೀಡಿದರು.

ಅವರು ಉಡುಪಿ ತಾಲೂಕಿನ ಪೆರ್ಡೂರು -ಬೈರಂಪಳ್ಳಿ- ಅಣ್ಣಾಲು ಸಂಪರ್ಕ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ (ಶಿಲಾನ್ಯಾಸ) ನೆರವೇರಿಸಿ ಮಾತನಾಡುತ್ತಿದ್ದರು.
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 9 ಸೇತುವೆಗಳ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ ಟೆಂಡರ್ ಅನ್ನು ಕರೆಯಲಾಗಿದ್ದು, ಅದರಲ್ಲಿ ಪೆರ್ಡೂರು-ಬೈರಂಪಳ್ಳಿ-ಅಣ್ಣಾಲು ಸಂಪರ್ಕ ಸೇತುವೆಯು ಒಂದಾಗಿದೆ. ಇಂದಿನಿಂದಲೇ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಿ, ತ್ವರಿತವಾಗಿ ಗುಣಮಟ್ಟದೊಂದಿಗೆ ಕೈಗೊಂಡು ಪೂರ್ಣಗೊಳಿಸಲು ಮುಂದಾಗಬೇಕು ಎಂದರು.
ಗ್ರಾಮೀಣ ಪ್ರದೇಶಗಳ ರಸ್ತೆ ಸೇರಿದಂತೆ ಮತ್ತಿತರ ಮೂಲ ಸೌಲಭ್ಯಗಳನ್ನು ಒದಗಿಸಲು ಮಾನ್ಯ ಮುಖ್ಯಮಂತ್ರಿಗಳು ವಿಶೇಷ ಅನುದಾನವನ್ನು ನೀಡಿದ್ದಾರೆ. ಈಗಾಗಲೇ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ 25 ಕೋಟಿ ರೂ. ಅನುದಾನ ನೀಡುವುದರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು, ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಪ್ರಗತಿಯ ವೇಗವನ್ನು ಹೆಚ್ಚಿಸಲಾಗುವುದು ಎಂದರು.
ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮಾನ್ಯ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಪೆರ್ಡೂರು -ಬೈರಂಪಳ್ಳಿ- ಅಣ್ಣಾಲು ಸಂಪರ್ಕ ಸೇತುವೆ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಸಹಕಾರ ನೀಡಿದ್ದಾರೆ. ಮಳೆಗಾಲದ ಒಳಗಾಗಿ ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ ಎಂದರು.
ಜಿಲ್ಲೆಯ ಭೌಗೋಳೀಕ ಪರಿಸರ ಆದರಿಸಿ ಹಾಗೂ ಹೆಚ್ಚು ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ಥಿ ಹಾಗೂ ಮರು ನಿರ್ಮಾಣಕ್ಕೆ ಸರಕಾರ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿಯ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಮುಖಂಡರಾದ ವಿನಯ್ ಕುಮಾರ್ ಸೊರಕೆ, ಜಯಾನಂದ ಹೆಗ್ಡೆ, ಕಿಶನ್ ಹೆಗ್ಡೆ ಕೊಳ್ಕೆಬೈಲು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *