ಡಾ ಸುರೇಶ ನೆಗಳಗುಳಿಯವರಿಗೆ ಕವಿಕಾವ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ

ಕಾಸರಗೋಡು: ಡಾ ವಾಮನ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್ ಅವರ ಮುಂದಾಳತ್ವದಲ್ಲಿ ಕಾಸರಗೋಡು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನವು ಭಾನುವಾರ 22 ಫೆಬ್ರವರಿ 2026 ರಂದು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

 ಇದೇ ವೇಳೆ ಮಂಗಳೂರಿನ ಕಣಚೂರು ಹಾಗೂ ಮಂಗಳ ಆಸ್ಪತ್ರೆಯ ಖ್ಯಾತ ಮಿಶ್ರಪದ್ಧತಿ ಶಸ್ತ್ರ ಚಿಕಿತ್ಸಕ, ಹಾಗೂ ಬರಹಗಾರ  ಡಾ. ಸುರೇಶ ನೆಗಳಗುಳಿ ಅವರಿಗೆ ಕಾರ್ಯಕ್ರಮದ ಮುಖ್ಯ ಅಂಗವಾಗಿರುವ ರಾಷ್ಟ್ರೀಯ ಪ್ರಶಸ್ತಿ 2026ರ ಕವಿ ಕಾವ್ಯ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಾಂಗಣದಲ್ಲಿ ಸುಸಜ್ಜಿತಗೊಂಡ ‘ಚುಟುಕು ಯೋಗಾಚಾರ್ಯ ಡಾ ಎಂ ಜಿ ಆರ್ ಅರಸ್ ವೇದಿಕೆ’ಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಗಡಿನಾಡು ಪ್ರದೇಶದ ಶಕ್ತಿ ಕೇಂದ್ರ ವಾದ ಶ್ರೀಮದೆಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಮತ್ತು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು  ಉದ್ಘಾಟನೆ ಮಾಡಿದರು. 

ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿಯವರು ಮೆರವಣಿಗೆಗೆ ಚಾಲನೆ ನೀಡಿದರು.  ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ಡಾ ಕೃಷ್ಣ ಪ್ರಸಾದ್ ಕೂಡ್ಲು, ಅತಿಥಿಗಳ ಸ್ವಾಗತವನ್ನು ಡಾ. ವಾಮನ ರಾವ್ ಬೇಕಲ್, ಪ್ರಸ್ತಾವನೆಯನ್ನು ಪ್ರದೀಪ್ ಬೇಕಲ್, ದೀಪ ಪ್ರಜ್ವಲನೆಯನ್ನು ಡಾ ಕೆ ಎನ್ ವೆಂಕಟರಮಣ ಹೊಳ್ಳ ನಡೆಸಿಕೊಟ್ಟರು. 

ಡಾ. ಗೋವಿಂದ ಭಟ್ ಹಾಗೂ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು ಮತ್ತು ಕನ್ನಡ ಧ್ವಜಾರೋಹಣವನ್ನು ವಿಜಿ ಕುಮಾರ್ ಅವರು ಮತ್ತು ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಹಾರಾರ್ಪಣೆಯನ್ನು ಸುರೇಶ್ ನೆಗಳಗುಳಿ ಅವರು ನಡೆಸಿಕೊಟ್ಟರು.

ಅನಂತರ ವಿರಾಜ್ ಅಡೂರ್ ಅಧ್ಯಕ್ಷತೆಯ ಚುಟುಕು ಕವಿಗೋಷ್ಠಿಯು ರೇಖಾಸುದೇಶ್ ನಿರ್ವಹಣೆಯಲ್ಲಿ ನಡೆಯಿತು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ ಕೆ ಎನ್ ವೆಂಕಟರಮಣ ಹೊಳ್ಳ ಮತ್ತು ರಾಜೇಶ್ ಕೋಟೆಕಣಿ ಸ್ವಾಗತ ಜವಾಬ್ದಾರಿ ನಿರ್ವಹಿಸಿದರು.

Leave a Reply

Your email address will not be published. Required fields are marked *