ಮಂಗಳೂರು: ಅಂತರಾಷ್ಟ್ರೀಯ ಮಾತೃ ಭಾಷಾ ದಿನದ ವಿಶೇಷ ಕಾರ್ಯಕ್ರಮ

ಮಂಗಳೂರು: ಅಂತರರಾಷ್ಟ್ರೀಯ ಮಾತೃಭಾಷೆ ದಿನದ ಅಂಗವಾಗಿ “ಇಂಟೆಕ್ ಮಂಗಳೂರು ಚಾಪ್ಟರ್” ವತಿಯಿಂದ ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ “ ಮಂಗಳೂರಿನ ಬಹುಭಾಷಿಕತೆ ಮತ್ತು ಸಾಂಸ್ಕೃತಿಕ ಗುರುತು” ಎಂಬ  ಮೇಲೆ ವಿಶೇಷಯದ ಚರ್ಚಾ ಕಾರ್ಯಕ್ರಮವು ಫೆಬ್ರವರಿ 21ರಂದು ಮಂಗಳೂರು ಬಲ್ಲಾಳ್ ಬಾಗ್  ಕೊಡಿಯಾಲ ಗುತ್ತು ‘ಸೆಂಟರ್  ಫಾರ್ ಆರ್ಟ್ ಎಂಡ್ ಕಲ್ಚರ್ ನಲ್ಲಿ ನಡೆಯಿತು.

“ಅಂತರಾಷ್ಟ್ರೀಯ ಮಾತೃಭಾಷೆ ದಿನಾಚರಣೆ ಬಾಂಗ್ಲಾದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಮಾನ್ಯತೆ ನೀಡಿ ಆಚರಿಸಲು ನಡೆದ ಹೋರಾಟದಿಂದ ಉದ್ಭವಿಸಿತು. ಇಂದಿಗೂ ಅದು ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನಂತರ ಆಚರಿಸುವ ಮಹತ್ವದ ಏಕೈಕ ಧರ್ಮ ನಿರಪೇಕ್ಷ ಹಬ್ಬವಾಗಿದೆ” ಎಂದು ಇಂಟ್ಯಾಕ್ ಸಂಚಾಲಕರಾದ ಸುಭಾಷ್ ಬಸು ಅವರು ನುಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪಿ ಕೃಷ್ಣಮೂರ್ತಿ ಅವರು ಮಾತನಾಡಿ “ನಾವೆಲ್ಲ ಬಹುಭಾಷಾ ಸಂಸ್ಕೃತಿಯೊಳಗೆ ಬದ್ಧರಾಗಿ ಬದುಕುತ್ತಿದ್ದೇವೆ. ನಮ್ಮಲ್ಲಿ ಬೇರೆ ಬೇರೆ ಮಾತೃಭಾಷೆಗಳಿದ್ದರೂ ಅಂತಿಮವಾಗಿ ಭಾಷೆಯೊಳಗಿನ ಭಾವವೇ ಪ್ರಧಾನವಾಗಿ ನಾವೆಲ್ಲ ಭಿನ್ನರಲ್ಲ ಒಂದೇ ಎಂಬ ಭಾವವನ್ನು ಬಿತ್ತಿ ಮಂಗಳೂರಿನ ಭಾಷಿಕ ಸಂಬಂಧಗಳು ಬೆಸೆದುಕೊಂಡಿವೆ” ಎಂದು ನುಡಿದರು.

ಕವಿ ಲೇಖಕ ಉಪನ್ಯಾಸಕರಾದ ರಘು ಇಡ್ಕಿದು ಮಾತನಾಡಿ” ಮಾತೃ ಭಾಷೆಯು ಸಂವಹನದ ಪರಿಧಿಯನ್ನು ಮೀರಿ ವ್ಯಕ್ತಿತ್ವದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ “ ಎಂದು ಹೇಳಿದರು.

ಕವಿ ಅನಾರ್ಕಲಿ ಸಲೀಂ ಮಂಡ್ಯ ಅವರು ಮಾತನಾಡಿ “ನಾನು ಉರ್ದು ಭಾಷೆಯನ್ನು ಬಳಸಿದರು ನನ್ನ ಸಂಪೂರ್ಣ ಜೀವನದಲ್ಲಿ ಕನ್ನಡವನ್ನು ಕಲಿತಿದ್ದೇನೆ ಮತ್ತು ನನ್ನ ಸಾಹಿತ್ಯ ಚಟುವಟಿಕೆಗಳಿಗೆ ಮತ್ತು ಕೃತಿಗಳ ನಿರ್ಮಾಣಕ್ಕೆ ಕನ್ನಡವೇ ಪ್ರಧಾನ ಭಾಷೆಯಾಗಿ ನಿಂತಿದೆ” ಎಂದು ಹೇಳಿದರು.

ಪಿಂಗಾರ ಪತ್ರಿಕೆಯ ಹಿರಿಯ ಪತ್ರಕರ್ತ ರೇಮಂಡ್ ಡಿಕುನ್ಹಾ ಅವರು ಕೊಂಕಣಿ ಭಾಷೆಯ ಕುರಿತು ಮಾತನಾಡಿದರು. ಕೊಂಕಣಿ ಭಾಷೆಯನ್ನು ವಿವಿಧ ಧರ್ಮಗಳು ಮತ್ತು ಜಾತಿಗಳಲ್ಲಿ 40 ಕ್ಕೂ ಹೆಚ್ಚು ಸಮುದಾಯಗಳು ಮಾತನಾಡುತ್ತಿವೆ ಈ ಭಾಷೆ ಪಶ್ಚಿಮ ಕರಾವಳಿಯುದ್ದಕ್ಕೂ ವ್ಯಾಪಿಸಿದೆ. ಇಂದು ಮಂಗಳೂರಿನಲ್ಲಿ ವ್ಯಾಪಕವಾಗಿ ಈ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಹೇಳಿದರು. 

ಕವಿ ಎನ್ ಸುಬ್ರಾಯ ಭಟ್ ಮಾತನಾಡಿ “ ಹವ್ಯಕ ಕನ್ನಡ ಮತ್ತು ಇತರ ಕನ್ನಡದ ಉಪಭಾಷೆಗಳಿಗಿರುವ ವೈಶಿಷ್ಟ್ಯದ ಕುರಿತು ಮಾತನಾಡಿದರು. ಹವ್ಯಕ ಕನ್ನಡವು  ಹಳೆ ಕನ್ನಡಕ್ಕೆ ಸಮೀಪವಾಗಿರುವ ವಿಶಿಷ್ಟ ಉಪಭಾಷೆಯಾಗಿದೆ. ಈ ಭಾಷೆಯಲ್ಲಿಯೂ ಸಾಹಿತ್ಯ ನಿರ್ಮಾಣ ನಡೆಯುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಪರಿಣಿತ ಅವರು ಪಾಲ್ಗೊಂಡು “ಇಂಗ್ಲಿಷ್ ಭಾಷೆಯಲ್ಲಿಯೇ ನನ್ನ ಆಲೋಚನಾ ಕ್ರಮಗಳು ರೂಪುಗೊಂಡರು ಒಬ್ಬಾಕೆ ತಾಯಿಯಾಗಿ ಮಗನ ಜೊತೆ  ನನ್ನ ತುಳು ಪ್ರಧಾನ ಭಾಷೆಯಾಗಿದೆ “ಎಂದು ಹೇಳಿದರು. 

.

ಮಾಧ್ಯಮ ಕಾರ್ಯನಿರ್ವಾಹಕರಾದ ಪ್ರಕಾಶ್ ಅವರು ಮಾತನಾಡಿ ” ವಿದ್ವಾಂಸರೆಂದು ಕರೆಸಿಕೊಳ್ಳುವ ದೊಡ್ಡವರೆಲ್ಲ ಸಹಜವಾದ ಮಾತೃ  ಭಾಷೆಗೆ ಅತಿ ರಂಜಿತ ಪದಗಳನ್ನು ಸೇರಿಸಿ ಮಾತನಾಡುವ ಮೂಲಕ ಭಾಷೆಯನ್ನು ಉಳಿಸುವ ಕೆಲಸ ಮಾಡುವುದಿಲ್ಲ ಜನಸಾಮಾನ್ಯರಿಂದಲೇ ಮಾತೃಭಾಷೆಗಳು ಉಳಿಯುವುದು “ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಮಧುಸೂದನ  , ಕಲಾವಿದರಾದ ರಾಜೇಂದ್ರ ಕೇದಿಗೆ,   ನೇಮಿ.ರಾಜ್

ಶೆಟ್ಟಿ, ಹರೀಶ್ ಕೊಡಿಯಲ್ ಬೈಲ್ ಉಪಸ್ಥಿತರಿದ್ದರು.

 ಚರ್ಚೆಯಲ್ಲಿ – ವಿದೇಶಗಳಲ್ಲಿ ಭಾಷಾ ಆಧಾರಿತ ಸಮುದಾಯಗಳ ಭಾಗವಹಿಸುವಿಕೆ, ಇಂಗ್ಲಿಷ್ ಶಿಕ್ಷಣದ ಹೇರಿಕೆ ಹಾಗೂ ಮುಂದಿನ ತಲೆಮಾರಿಗೆ ಮಾತೃಭಾಷೆಯ ಮೇಲೆ ಆಸಕ್ತಿ ಮೂಡಿಸುವ ಅಗತ್ಯತೆ ಮುಂತಾದ ವಿಷಯಗಳ ಕುರಿತು ಶ್ರೋತ್ರು ವರ್ಗದಿಂದ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸುಭಾಷ್ ಬಸು ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *