ಮೂಡುಬಿದಿರೆ: ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು, ಕೇಂದ್ರ ಆಯುಷ್ ಮಂತ್ರಾಲಯದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಮಂಡಳಿಯ ಸಹಯೋಗದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮೂಲಕ ದೇಹದ ಬೊಜ್ಜು ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರ ಕಾಲೇಜಿನ ಆವರಣದಲ್ಲಿ ನಡೆಯಿತು.

ಕಾರ್ಯಾಗಾರದ ಮುಖ್ಯ ಉದ್ದೇಶ ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ದೇಹದ ಬೊಜ್ಜಿನ ಸಮಸ್ಯೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆಯ ಮೂಲಕ ಅದನ್ನು ತಡೆಯುವ ಮತ್ತು ನಿಯಂತ್ರಿಸುವ ಮಾರ್ಗಗಳನ್ನು ಚರ್ಚಿಸಲಾಯಿತು.
ಎಸ್‌ಡಿಎಮ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಡೀನ್ ಡಾ. ಶಿವಪ್ರಸಾದ್ ಶೆಟ್ಟಿಯವರು ಬೊಜ್ಜಿಗೆ ಸಂಬಂಧಿಸಿದಂತೆ ವೈದ್ಯಕೀಯ ಮತ್ತು ಜೀವನಶೈಲಿಯ ಅಂಶಗಳನ್ನು ವಿಶ್ಲೇಷಿಸಿ, ದೀರ್ಘಕಾಲಿಕ ತೂಕ ನಿಯಂತ್ರಣಕ್ಕಾಗಿ ಯೋಗಾಭ್ಯಾಸ, ಮನೋನಿಗ್ರಹ ಮತ್ತು ಮೈಂಡ್-ಬಾಡಿ ಮೆಡಿಸಿನ್ ಮಹತ್ವವನ್ನು ವಿವರಿಸಿದರು. ಯನಪೋಯಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಅಜಿತ್ ಕೆ, ಆಹಾರ ಕ್ರಮದ ಪರಿಷ್ಕರಣೆ, ನೈಸರ್ಗಿಕ ಪೌಷ್ಟಿಕ ತತ್ತ್ವಗಳು ಹಾಗೂ ಸಮತೋಲನಯುತ ಸಹಜ ಆಹಾರದ ಪಾತ್ರವನ್ನು ಸಮಗ್ರವಾಗಿ ವಿವರಿಸಿದರು.
ಕಾರ್ಯಾಗಾರದಲ್ಲಿ ಸಂವಾದಾತ್ಮಕ ಅಧಿವೇಶನಗಳು, ಯೋಗಾಭ್ಯಾಸಗಳ ಪ್ರಾಯೋಗಿಕ ಪ್ರದರ್ಶನಗಳು ಹಾಗೂ ಸಾಕ್ಷ್ಯಾಧಾರಿತ ನೈಸರ್ಗಿಕ ಚಿಕಿತ್ಸಾ ವಿಧಾನಗಳ ಕುರಿತು ಚರ್ಚೆಗಳು ನಡೆದವು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿ ತಜ್ಞರಿಂದ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು. ಸಮಾಜದಲ್ಲಿ ಹೆಚ್ಚುತ್ತಿರುವ ಬೊಜ್ಜನ್ನು ತಗ್ಗಿಸಲು ಪರಂಪರಾಗತ ವೈದ್ಯಕೀಯ ಪದ್ಧತಿಗಳನ್ನು ಆಧುನಿಕ ಜೀವನಶೈಲಿ ನಿರ್ವಹಣೆಯೊಂದಿಗೆ ಸಮನ್ವಯಗೊಳಿಸುವ ಅಗತ್ಯವನ್ನು ಈ ಕಾರ್ಯಕ್ರಮ ಒತ್ತಿ ಹೇಳಿತು.
ಕಾರ್ಯಕ್ರಮದಲ್ಲಿ ಸಂಯೋಜಕಿ ಡಾ. ದೀಕ್ಷಾ ಶೆಣೈ ಇದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ ವನಿತಾ ಶೆಟ್ಟಿ ಸ್ವಾಗತಿಸಿ, ಪ್ರೇಕ್ಷಾ ನಿರೂಪಿಸಿ, ಸರೀನಾ ವಂದಿಸಿದರು.
