ಮೂಡುಬಿದಿರೆ: ದಿಗಂಬರ ಆಚಾರ್ಯ 108 ಆನೇಕಾಂತ ಸಾಗರ್ ಮುನಿ ಮಹಾರಾಜರ ಸಂಘದ ತ್ಯಾಗಿವೃಂದವು ಬುಧವಾರ ಸಂಜೆ ಮೂಡುಬಿದಿರೆ ಜೈನಕಾಶಿಯಿಂದ ಸಿದ್ದಕಟ್ಟೆ ಕಡೆಗೆ ವಿಹಾರ ಕೈಗೊಂಡಿತು.

ಗುರು ಬಸದಿಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಜಲ, ಎಳನೀರು, ಹಾಲು, ಚತುಷ್ಕೋಣ, ಕಾಶ್ಮೀರಿ ಕೇಸರಿ, ಅಕ್ಕಿ ಹಿಟ್ಟು, ಅರಿಶಿಣ, ಚಂದನ ಅಷ್ಟಗಂಧ ಹಾಗೂ ಕನಕ ಪುಷ್ಪವೃಷ್ಠಿಯೊಂದಿಗೆ ಮಹಾಮಸ್ತಕಾಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ಆಚಾರ್ಯರು ಹಾಗೂ ಸಂಘದ ತ್ಯಾಗಿವೃಂದ ಭಾಗವಹಿಸಿದರು.
ಶ್ರೀ ಮಠದಲ್ಲಿ ರತ್ನಬಿಂಬ ಮತ್ತು ಧವಳ ಸಿದ್ಧಾಂತ ಶಾಸ್ತ್ರಗಳ ದರ್ಶನ ಮಾಡಿದರು. ಸಂಜೆ 3.30ಕ್ಕೆ ಸಾವಿರ ಕಂಬ ಬಸದಿ ಯಲ್ಲಿ ಭಗವಂತನ ದರ್ಶನವನ್ನು ಸಂಘದ ಸಮಸ್ತ ಮಹಾರಾಜರು ಮತ್ತು ಮಾತಾಜಿಯವರು ನೆರವೇರಿಸಿದರು.
ಬಳಿಕ ಮೂಡುಬಿದಿರೆ ಶ್ರೀ ಜೈನ ಮಠದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಉಪಸ್ಥಿತಿ ಹಾಗೂ ನೇತೃತ್ವದಲ್ಲಿ ಸಂಜೆ 4.30ಕ್ಕೆ ಪಾದಪೂಜೆ ನಡೆಯಿತು. ಆಶೀರ್ವಚನದಲ್ಲಿ 1928ರಲ್ಲಿ ಆಚಾರ್ಯ ಶಾಂತಿ ಸಾಗರ ಮಹಾರಾಜರ ದರ್ಶನ ನಡೆದಿದ್ದು, ನೂರು ವರ್ಷಗಳ ಸಂಧರ್ಭದಲ್ಲಿ ಮೂಡುಬಿದಿರೆ ದರ್ಶನಕ್ಕಾಗಿ ಪುನಃ ಬರುತ್ತೇವೆ ಎಂದು ತಿಳಿಸಿದರು. ಧರ್ಮ ಸಂಗ್ರಹ, ದೇವ ಭಕ್ತಿ ಹಾಗೂ ಗುರುಗಳ ಶ್ರದ್ಧೆಯಿಂದ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ನಂತರ ಸಂಘವು ಸಿದ್ದಕಟ್ಟೆ ಕಡೆಗೆ ವಿಹಾರ ಮಾಡಿತು. ಈ ಸಂದರ್ಭದಲ್ಲಿ ಪುಷ್ಪರಾಜ್, ಶಂಭವ್ ಕುಮಾರ್, ಕೃಷ್ಣರಾಜ್ ಹೆಗ್ಡೆ, ಶ್ರೇಯಾಂಸ್ ಜೈನ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಿಕೆಗಳು ಪಾಲ್ಗೊಂಡರು.
