ಮೂಡುಬಿದಿರೆ: ಯಕ್ಷಗಾನ ಗೊಂಬೆ ಆಟದ ಕುರಿತು ಸಂಶೋಧನಾ ಅಧ್ಯಯನ ವರದಿ

ಮೂಡುಬಿದಿರೆ: ಭಾರತ ಸರ್ಕಾರದ ಕರಕುಶಲ ಅಭಿವೃದ್ಧಿ ಹಾಗೂ ಜವಳಿ ಸಚಿವಾಲಯದ ಮಂಗಳೂರು ಆಯುಕ್ತರ ಕಚೇರಿಯಿಂದ ರೂಪುಗೊಂಡ ಯಕ್ಷಗಾನ ಗೊಂಬೆ ಆಟದ ಕುರಿತು ಸಂಶೋಧನಾ ಅಧ್ಯಯನ ವರದಿ ಪುಸ್ತಕ ಅನಾವರಣವು ಬುಧವಾರ ಆಳ್ವಾಸ್ ಕಾಲೇಜಿನಲ್ಲಿ ನೆರವೇರಿತು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ, ಯಕ್ಷಗಾನ ಗೊಂಬೆ ಆಟವು ಕರಾವಳಿ ಭಾಗದ ಆಕರ್ಷಕ ಕಲೆಯಾಗಿದ್ದು, ಪಪೆಟ್ (ಗೊಂಬೆ)ಗಳ ಮೂಲಕ ಯಕ್ಷಗಾನದ ಕಥಾವಸ್ತುಗಳನ್ನು ಪ್ರದರ್ಶಿಸುವ ಕಲಾರೂಪಕವಾಗಿದೆ. ಈ ಕಲೆ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಮಹತ್ವದ ಮಾಧ್ಯಮ ಎಂದರು.  

ಯಕ್ಷಗಾನ ಗೊಂಬೆ ಆಟಕ್ಕೆ ಸುಮಾರು 300 ರಿಂದ 400 ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಪುರಾತನ ಕಾಲದಲ್ಲಿ ಜನರಿಗೆ ರಾಮಾಯಣ, ಮಹಾಭಾರತ ಹಾಗೂ ಪುರಾಣಗಳ ಕಥೆಗಳನ್ನು ಸುಲಭವಾಗಿ ತಲುಪಿಸಲು ಈ ಕಲೆಯನ್ನು ಬಳಸಲಾಗುತ್ತಿತ್ತು. ಈ ಗೊಂಬೆಗಳನ್ನು ಸಾಮಾನ್ಯವಾಗಿ ಮರ, ಬಟ್ಟೆ ಮತ್ತು ಚರ್ಮದಿಂದ ತಯಾರಿಸಲಾಗುತ್ತದೆ. ಕಲಾವಿದರು ಬಿದಿರಿನ ಕಡ್ಡಿಗಳ ಅಥವಾ ದಾರಗಳ ಸಹಾಯದಿಂದ ಈ ಗೊಂಬೆಗಳನ್ನು ಚಲಾಯಿಸಿ ಜೀವಂತವಾಗಿರುವಂತೆ ಪ್ರದರ್ಶಿಸುತ್ತಾರೆ.  
ಆಧುನಿಕ ಯುಗದಲ್ಲಿ ಟಿವಿ, ಸಿನೆಮಾ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದ ಈ ಕಲೆ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಆದ್ದರಿಂದ, ಈ ಕಲೆ ಉಳಿಯಲು ಸರ್ಕಾರ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ವಿಶೇಷ ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪ್ರತಿಯೊಂದು ಕಲಾರೂಪವೂ ತನ್ನದೇ ಆದ ವೈಶಿಷ್ಟ್ಯ ಮತ್ತು  ಶ್ರೇಷ್ಠತೆಯನ್ನು ಹೊಂದಿದೆ. ಕಲೆಯ ಮೇಲಿನ ವಿಶೇಷ ಆಸಕ್ತಿ, ಶ್ರದ್ಧೆ ಮತ್ತು ತಾಳ್ಮೆಯಿದ್ದಾಗ ಮಾತ್ರ ಒಬ್ಬ ಕಲಾವಿದ ತನ್ನ ಪಾತ್ರವನ್ನು ಸಮರ್ಪಕವಾಗಿ ರೂಪಿಸಬಲ್ಲ.  ನಿರಂತರ ಅಭ್ಯಾಸದಿಂದ ಕಲೆ ಅರಳಿ ಬೆಳೆಯಲು ಸಾಧ್ಯ ಎಂದು ಹೇಳಿದರು. ಈ ಕಲೆಯನ್ನು ಪುನರುಜ್ಜೀವನಗೊಳಿಸಲು ಕೆಲವು ಮಹತ್ವದ ಯೋಜನೆಗಳನ್ನು ಕೇಂದ್ರ ಸರ್ಕಾರಕ್ಕೆ ಈ ವರದಿ ಶಿಫಾರಸು ಮಾಡಿದೆ. ಈ ಶಿಫಾರಸುಗಳನ್ನು ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತಂದರೆ, ಯಕ್ಷಗಾನ ಗೊಂಬೆ ಆಟಕ್ಕೆ ಹೊಸ ಚೈತನ್ಯ ದೊರೆಯುವ ಸಾಧ್ಯತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕರಕುಶಲ ಅಭಿವೃದ್ಧಿ ಹಾಗೂ ಜವಳಿ ಸಚಿವಾಲಯದ ಮಂಗಳೂರು ವಲಯದ ಸಹಾಯಕ ನಿರ್ದೇಶಕಿ ರಾಜೇಶ್ವರಿ ಕೆ.ಎಂ, ಸಹಾಯಕ ಡಿಸೈನರ್ ಅಶ್ವಿನ್ ಕುಮಾರ್, ಆಳ್ವಾಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೇಶ್ ಕೈರೋಡಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಪ್ರಿಯಾ ಭಾರದ್ವಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *