ಉಡುಪಿ: ಉಡುಪಿ ಜಿಲ್ಲೆಯು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು ಇಲ್ಲಿನ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಜಿಲ್ಲೆಯ ಬಗ್ಗೆ ಸಮಗ್ರ ಮಾಹಿತಿ ನೀಡಲು ಪ್ರವಾಸೋದ್ಯಮ ಅನುಭವ ಕೇಂದ್ರವನ್ನು ಸ್ಥಾಪಿಸಲಾಗಿದೆ. ಜಿಲ್ಲೆಗೆ ಭೇಟಿ ನೀಡುವ ದೇಶ-ವಿದೇಶದ ಪ್ರವಾಸಿಗರಿಗೆ ಇದರಿಂದ ಅನುಕೂಲವಾಗಲಿದೆ. ಜಿಲ್ಲೆಯು ಪ್ರವಾಸೋದ್ಯಮದಲ್ಲಿ ದೇಶಕ್ಕೆ ಮಾದರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.







ಅವರು ಮಂಗಳವಾರ ಬನ್ನಂಜೆ ಡಾ.ವಿ.ಎಸ್ ಆಚಾರ್ಯ ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿದ ಉಡುಪಿ ಪ್ರವಾಸೋದ್ಯಮ ಅನುಭವ ಕೇಂದ್ರವನ್ನು ಉದ್ಘಾಟಿಸಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ನೀಡುವ ವೆಬ್ಸೈಟ್ಗೆ ಚಾಲನೆ ನೀಡಿ, ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಅನುಭವ ಕೇಂದ್ರದಲ್ಲಿ ಜಿಲ್ಲೆಗೆ ಬರುವಂತಹ ಎಲ್ಲಾ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಿ ಅವರುಗಳು ಜಿಲ್ಲೆಯ ಪ್ರಾಕೃತಿಕ ಸುಂದರತೆಯನ್ನು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡುವಂತಹ ಒಂದು ಸುಲಭವಾದ ತಂತ್ರಜ್ಞಾನ ಬಳಸಿಕೊಂಡು ಮಾಹಿತಿಗಳನ್ನು ಕ್ರೋಢೀಕರಿಸಿ ಜಿಲ್ಲೆಯ ಪ್ರವಾಸಿ ತಾಣಗಳ ಎಲ್ಲ ಮಾಹಿತಿಯು ಒಂದೇ ಕಡೆ ದೊರೆಯುವಂತೆ ತಂತ್ರಜ್ಞಾನ ಆಧಾರಿತ ವೆಬ್ ಸೈಟ್ ರೂಪಿಸಲಾಗಿದೆ. ಇದನ್ನು ಮೊಬೈಲ್ನಲ್ಲಿಯೂ ವೀಕ್ಷಿಸಬಹುದು. ಜೊತೆಗೆ ಕಾಫಿ ಟೇಬಲ್ ಪುಸ್ತಕವೂ ದೊರೆಯಲಿದೆ. ಇದರಲ್ಲಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ದೊರೆಯಲಿದೆ. ಅನುಭವ ಕೇಂದ್ರವನ್ನು ನಿರ್ಮಿಸಿದ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು.
ಕರಾವಳಿ ಹಾಗೂ ಮಲೆನಾಡು ಭಾಗದ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರತ್ಯೇಕ ವಿಶೇಷ ಪ್ರವಾಸೋದ್ಯಮ ನೀತಿ ರೂಪಿಸಿದ್ದೇವೆ. ಇದರ ಭಾಗವಾಗಿ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅನುಭವ ಕೇಂದ್ರ, ಜಿಲ್ಲೆಯ ಪ್ರವಾಸೋದ್ಯಮ ಇಡೀ ವಿಶ್ವದ ಪ್ರವಾಸಿಗರನ್ನು ಆಕರ್ಷಿಸುವಂತಾಗಬೇಕು. ಇದು ದಕ್ಷಿಣ ಭಾರತದಲ್ಲಿಯೇ ಪ್ರಥಮವೆನಿಸುವಂತಾಗಿರಬೇಕು ಎಂದರು.
ಪ್ರವಾಸೋದ್ಯಮ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಹೊಂದಿದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯೋಗ ಹೆಚ್ಚು ಜನರಿಗೆ ದೊರೆತರೆ ಕುಟುಂಬಗಳು ಸುಖ ಶಾಂತಿ ನೆಮ್ಮದಿಯ ಜೊತೆಗೆ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಇಲ್ಲಿನ ಯುವಜನರು ಉದ್ಯೋಗವನ್ನರಸಿ ಇತರೆ ಜಿಲ್ಲೆ, ರಾಜ್ಯ ಅಥವಾ ವಿದೇಶಗಳಿಗೆ ಹೋಗುವುದು ತಪ್ಪುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಮುಖಂಡರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಕಿಶನ್ ಕುಮಾರ್ ಹೆಗ್ಡೆ ಕೊಳ್ಕೆಬೈಲು ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಪ್ರವಾಸೋದ್ಯಮ ಅನುಭವ ಕೇಂದ್ರದಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಸಾರಿಗೆ ಸಂಪರ್ಕ ಮತ್ತು ವಸತಿ ಸೌಲಭ್ಯಗಳ ಮಾಹಿತಿ ಲಭ್ಯವಾಗಲಿದ್ದು ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಆಯದ್ ಪ್ರವಾಸಿ ಅನುಭವಗಳನ್ನೂ ಪರಿಚಯಿಸಲಾಗುವುದು.
ಉಡುಪಿ ಜಿಲ್ಲಾ ಪ್ರವಾಸೋದ್ಯಮ ಕಾಫಿ ಟೇಬಲ್ ಪುಸ್ತಕದಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಐತಿಹಾಸಿಕ ಮತ್ತು ಸಾಂಸ್ಕøತಿಕ ಪರಂಪರೆ, ಧಾರ್ಮಿಕ ಕ್ಷೇತ್ರಗಳು, ನೈಸರ್ಗಿಕ ಸೌಂದರ್ಯ ಹಾಗೂ ಸ್ಥಳೀಯ ಕಲೆಯನ್ನು ಉತ್ತಮ ಗುಣಮಟ್ಟದ ಛಾಯಾಚಿತ್ರಗಳು ಮತ್ತು ಮಾಹಿತಿಯೊಂದಿಗೆ ಈ ಪುಸ್ತಕ ಪರಿಚಯಿಸಲಿದೆ.
ಉಡುಪಿ ಪ್ರವಾಸೋದ್ಯಮ ವೆಬ್ ಆಪ್ ನಲ್ಲಿ ಉಡುಪಿ ಪ್ರವಾಸೋದ್ಯಮದ ಅಧಿಕೃತ ವೆಬ್ಸೈಟ್ ಅನ್ನು ವೆಬ್ ಆಪ್ ರೂಪದಲ್ಲಿ ಅಭಿವೃದ್ಧಿಪಡಿಸಲಾಗುವುದು. ಪ್ರವಾಸಿ ತಾಣಗಳು, ಪ್ರವಾಸೋದ್ಯಮ ಚಟುವಟಿಕೆಗಳು, ವಸತಿ ಸೌಲಭ್ಯಗಳು ಹಾಗೂ ಪ್ರವಾಸ ಯೋಜನೆಗೆ ಅಗತ್ಯವಾದ ಇತರ ಮಾಹಿತಿಯನ್ನು ಪ್ರವಾಸಿಗರು ಒಂದೇ ವೇದಿಕೆಯಲ್ಲಿ ಪಡೆಯಬಹುದು.
ಪಂಚತತ್ವ’ ಕಿರುಚಿತ್ರಗಳು ಮತ್ತು ಪರಿಸರ ಪ್ರವಾಸ ಪಥಗಳ ವಿಡಿಯೋಗಳಲ್ಲಿ ‘ಪಂಚತತ್ವ’ ಪರಿಕಲ್ಪನೆಯಡಿ ವಾಯು, ಜಲ ಮತ್ತು ಪೃಥ್ವಿ ವಿಷಯಗಳನ್ನು ಆಧರಿಸಿ ಉಡುಪಿಯ ಪ್ರವಾಸಿ ತಾಣಗಳು, ಪರಂಪರೆ ಹಾಗೂ ಸ್ಥಳೀಯ ಕಲೆಯನ್ನು ಬಿಂಬಿಸುವ ಕಿರುಚಿತ್ರಗಳನ್ನು ನಿರ್ಮಿಸಲಾಗುವುದು. ಜಿಲ್ಲೆಯ ಐದು ಪರಿಸರ ಪ್ರವಾಸ ಪಥಗಳನ್ನು (ಇಕೋ ಟ್ರೈಲ್ಸ್) ಪರಿಚಯಿಸಲಿದೆ.
