ಕಾರ್ಕಳ: ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಏ. 26 ರಂದು ಜೋಡುರಸ್ತೆಯಲ್ಲಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ ಸಹಕಾರ ಸಿಂಧೂರ ಲೋಕಾರ್ಪಣೆ ಮತ್ತು ಸೊಸೈಟಿಯ ತ್ರಿಂಶಂತಿ ಸಂಭ್ರಮ ಉದ್ಘಾಟನೆಯಾಗಲಿದೆ ಎಂದು ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ ಗುರುವಾರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆ ಜನಸಾಮಾನ್ಯರಿಗೆ ಗಗನ ಕುಸುಮವಾಗಿದ್ದ ಕಾಲದಲ್ಲಿ ಕಾರ್ಕಳದಲ್ಲಿ ಸಹಕಾರಿ ಕ್ಷೇತ್ರವನ್ನು ಕಟ್ಟಿ ಬೆಳೆಸಬೇಕು ಎನ್ನುವ ಮಹದಾಸೆಯಿಂದ 1996ರಲ್ಲಿ ಜೋಡುರಸ್ತೆಯ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಇಂದು ಮೂರು ದಶಕಗಳನ್ನು ಪೂರೈಸಿ ಇಂದು ತ್ರಿಂಶತಿ ಸಂಭ್ರಮದ ಹೊಸ್ತಿಲಿನಲ್ಲಿದೆ ಎಂದು ಹೇಳಿದರು.
ಏ. 26 ರಂದು ಭಾನುವಾರ ಬೆಳಗ್ಗೆ 10:30 ಕ್ಕೆ ಸೊಸೈಟಿಯ ಲೋಕಾರ್ಪಣೆ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದರು.
ಉದ್ಘಾಟನೆಯನ್ನು ಕೈವಲ್ಯ ಮಠದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ, ಪೇಜಾವರ ಅದೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಸುನಿಲ್ ಕುಮಾರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, IAS ಅಧಿಕಾರಿ ಸದಾಶಿವ ಪ್ರಭು, ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನೀರೆ ರವೀಂದ್ರ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಂದ್ರ ನಾಯಕ್, ನಿರ್ದೇಶಕರಾದ ಹರೀಶ್ಚಂದ್ರ ತೆಂಡುಲ್ಕರ್ ಮಾಳ, ಹರೀಶ್ ನಾಯಕ್ ಅಜೆಕಾರು, ಸುನೀಲ್ ನಾಯಕ್ ಮಟ್ಟಾರು, ಸಚ್ಚಿದಾನಂದ ಪ್ರಭು ಕಣಂಜಾರು, ರಾಮಕೃಷ್ಣ ತೆಂಡುಲ್ಕರ್ ಹಿರ್ಗಾನ, ದಿನೇಶ್ ನಾಯಕ್ ಹೆರ್ಮುಂಡೆ ಹಾಗೂ ಇತರರು ಉಪಸ್ಥಿತರಿದ್ದರು.
