ಕಾರ್ಕಳ: ಕುಡಿದ ಮತ್ತಿನಲ್ಲಿ ನಡೆದ ಸಣ್ಣ ಗಲಾಟೆ ವಿಕೋಪಕ್ಕೆ ತಿರುಗಿ, ಒಡಹುಟ್ಟಿದ ತಮ್ಮನೇ ಅಣ್ಣನನ್ನು ಮರದ ರೀಪಿನಿಂದ ಹೊಡೆದು ಹತ್ಯೆಗೈದ ಘಟನೆ ಕಾರ್ಕಳದಲ್ಲಿ ಮೇ 2ರ ತಡರಾತ್ರಿ ನಡೆದಿದೆ. ರಿಚರ್ಡ್ ಡಿಸೋಜಾ (65) ಹತ್ಯೆಗೀಡಾದ ವ್ಯಕ್ತಿ.

ಇವರು ತನ್ನ ಅಣ್ಣ ಹೆರಾಲ್ಡ್ ಡಿಸೋಜಾ ಅವರ ಮನೆಯಲ್ಲೇ ವಾಸವಾಗಿದ್ದರು. ಶನಿವಾರ ರಾತ್ರಿ ರಿಚರ್ಡ್ ಡಿಸೋಜಾ ಅವರು ಮದ್ಯಪಾನ ಮಾಡಿ ಮನೆಯಲ್ಲಿ ಗಲಾಟೆ ಮಾಡಿದ್ದರೆನ್ನಲಾಗಿದೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಸಿಟ್ಟಾದ ಹೆರಾಲ್ಡ್ ಮನೆಯಲ್ಲಿದ್ದ ಮರದ ರೀಪಿನಿಂದ ತಮ್ಮನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ತೀವ್ರತೆಗೆ ರಿಚರ್ಡ್ ಅವರ ದೇಹದ ಮೇಲೆ ಗಂಭೀರ ಗಾಯಗಳಾಗಿದ್ದು, ವಿಪರೀತ ರಕ್ತಸ್ರಾವ ಉಂಟಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭ್ಯವಾಗದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ರಿಚರ್ಡ್ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದು, ಅವರು ಶಿರ್ವ ಸಮೀಪದ ಮಂಚಕಲ್ಲಿನಲ್ಲಿ ವಾಸವಾಗಿದ್ದಾರೆ. ರಿಚರ್ಡ್ ಅವರು ಆಗೊಮ್ಮೆ ಈಗೊಮ್ಮೆ ಮಂಚಕಲ್ಲಿನ ಮನೆಗೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ.
ಸದ್ಯಕ್ಕೆ ಮದ್ಯಪಾನದ ಅಮಲಿನಲ್ಲಿ ನಡೆದ ಗಲಾಟೆ ಎ೦ದು ಮೇಲ್ನೋಟಕ್ಕೆ ಕಂಡುಬಂದರೂ, ಈ ಹತ್ಯೆಯ ಹಿಂದೆ ಆಸ್ತಿ ಹ೦ಚಿಕೆಯ ವಿವಾದವೂ ಇರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಹೆರಾಲ್ಡ್ ಡಿಸೋಜಾರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
