ಆಡಂಬರದ ಮದುವೆ ಎಷ್ಟು ಸರಿ ? – ಒಂದು ವಿಶ್ಲೇಷಣೆ – Artilce by Naveen Habib

ನನ್ನೆಲ್ಲಾ ಓದುಗ ಮಿತ್ರರಿಗೂ ನನ್ನ ಹೃದಯಪೂರ್ವಕ ನಮಸ್ಕಾರಗಳು. ಇಂದು ಸಮಾಜದಲ್ಲಿ ಅತಿ ಹೆಚ್ಚು ಚರ್ಚೆಯಾಗಬೇಕಾದ ವಿಷಯವೆಂದರೆ “ಆಡಂಬರದ ಮದುವೆಗಳು”. ಈ ಲೇಖನ ಪಾಲಕರಿಗಿಂತ ಹೆಚ್ಚಾಗಿ ಇಂದಿನ ಯುವ ಪೀಳಿಗೆಗೆ ತಲುಪಬೇಕಿದೆ ಎಂಬುದು ನನ್ನ ಬಲವಾದ ನಂಬಿಕೆ.

ಮದುವೆಯ ನೈಜ ಅರ್ಥವೇನು?

ನನ್ನ ದೃಷ್ಟಿಯಲ್ಲಿ ಮತ್ತು ಹಿರಿಯರು ಕಲಿಸಿಕೊಟ್ಟ ಸಂಸ್ಕಾರದ ಪ್ರಕಾರ, ಮದುವೆ ಎಂದರೆ ಕೇವಲ ಎರಡು ವ್ಯಕ್ತಿಗಳ ಮಿಲನವಲ್ಲ; ಅದು ಎರಡು ಸುಂದರ ಮನಸ್ಸುಗಳ ಹಾಗೂ ಎರಡು ಕುಟುಂಬಗಳ ಭಾವನಾತ್ಮಕ ಬೆಸುಗೆ. ನೆಂಟರಿಷ್ಟರು, ಸ್ನೇಹಿತರೆಲ್ಲರೂ ಒಟ್ಟಾಗಿ ಸೇರಿ, ದಾಂಪತ್ಯ ಜೀವನದ ಮಹತ್ವವನ್ನು ತಿಳಿಸುತ್ತಾ, ಹೊಸ ಜೋಡಿಗೆ ಜೀವನದ ದಾರಿ ತೋರುವ ಒಂದು ಮಂಗಳಕರ ಸಮಾರಂಭವೇ ಮದುವೆ.

ಆದರೆ ಇಂದಿನ ದಿನಗಳಲ್ಲಿ ಮದುವೆಯೆಂದರೆ ಕೇವಲ ‘ಶ್ರೀಮಂತಿಕೆಯ ಪ್ರದರ್ಶನ’ವಾಗಿ ಮಾರ್ಪಟ್ಟಿದೆ. ಅಲ್ಲಿ ಕುಟುಂಬದ ಮೌಲ್ಯಗಳಿಗಿಂತ ಹೆಚ್ಚಾಗಿ ಆರ್ಥಿಕ ಸ್ಥಿತಿವಂತಿಕೆಯನ್ನು ತೋರಿಸಿಕೊಳ್ಳುವ ಹಪಾಹಪಿ ಎದ್ದು ಕಾಣುತ್ತಿದೆ.

ಆಹಾರದ ಪೋಲು ಮತ್ತು ಅನಗತ್ಯ ವೆಚ್ಚ

ಹಿಂದೆ ಮದುವೆಗಳಲ್ಲಿ ಸರಳವಾದ ಊಟವಿರುತ್ತಿತ್ತು—ಅನ್ನ, ಸಾಂಬಾರ್, ರೊಟ್ಟಿ, ಪಲ್ಯ ಮತ್ತು ಒಂದು ಹಪ್ಪಳ. ಅಷ್ಟರಲ್ಲೇ ಜನ ತೃಪ್ತಿ ಪಡುತ್ತಿದ್ದರು. ಆದರೆ ಇಂದಿನ ‘ಗ್ರ್ಯಾಂಡ್’ ಮದುವೆಗಳಲ್ಲಿ 30ಕ್ಕೂ ಹೆಚ್ಚು ತಿನಿಸುಗಳಿರುತ್ತವೆ. ವಿಪರ್ಯಾಸವೆಂದರೆ, ಜನರು ಎಲ್ಲವನ್ನೂ ಸವಿಯುವ ಬದಲು ತಟ್ಟೆಯಲ್ಲಿ ಕಾಲು ಭಾಗ ತಿಂದು ಉಳಿದ 70% ಆಹಾರವನ್ನು ವ್ಯರ್ಥ ಮಾಡುತ್ತಾರೆ. ಕಷ್ಟಪಟ್ಟು ದುಡಿದ ಹಣ ಮತ್ತು ಅನ್ನ ಎರಡೂ ಇಲ್ಲಿ ನೀರಿನಂತೆ ಪೋಲಾಗುತ್ತಿವೆ.

ಪ್ರಿ-ವೆಡ್ಡಿಂಗ್ ಫೋಟೋಶೂಟ್ ಎಂಬ ಗೀಳು

ಕಳೆದ ಕೆಲವು ವರ್ಷಗಳಿಂದ ಮದುವೆಗಿಂತ ಹೆಚ್ಚಾಗಿ ‘ಪ್ರಿ-ವೆಡ್ಡಿಂಗ್ ಶೂಟ್’ (Pre-wedding shoot) ಎಂಬ ವ್ಯರ್ಥ ಪ್ರದರ್ಶನಕ್ಕೆ ಲಕ್ಷಾಂತರ ರೂಪಾಯಿ ಸುರಿಯಲಾಗುತ್ತಿದೆ. ಇದನ್ನು ಹಾಸ್ಯದ ಮಾತಿನಲ್ಲಿ ಹೇಳುವುದಾದರೆ “ಮದುವೆ ಮುಂಚಿನ ಹನಿಮೂನ್” ಎಂದರೂ ತಪ್ಪಾಗಲಾರದು.

ಕೇವಲ ನಾಲ್ಕು ದಿನ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕುವುದಕ್ಕೆ ಮತ್ತು ಜನರಿಗೆ ತೋರಿಸುವುದಕ್ಕೆ ಅಂತ ವಿಚಿತ್ರ ಅವತಾರಗಳಲ್ಲಿ ಶೂಟಿಂಗ್ ಮಾಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಕೇರಳ, ಗೋವಾ ಅಥವಾ ಅಪಾಯಕಾರಿ ಬೆಟ್ಟ-ಗುಡ್ಡಗಳಿಗೆ ಹೋಗುವ ಹಪಾಹಪಿಯಲ್ಲಿ ಕೆಲವರು ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳು ನಮ್ಮ ಮುಂದಿವೆ. ಇಷ್ಟೆಲ್ಲಾ ಬೇಕೆ? ನಿಮ್ಮೂರಿನಲ್ಲಿ, ನಿಮ್ಮ ಕುಟುಂಬದ ಮಧ್ಯೆ ಸರಳವಾಗಿ ನೆನಪುಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲವೇ?

ಯುವಜನತೆಗೆ ನನ್ನದೊಂದು ಕಿವಿಮಾತು

ಪಾಲಕರು ತಮ್ಮ ಮಕ್ಕಳ ಮೇಲಿನ ಅತಿಯಾದ ಪ್ರೀತಿಯಿಂದ ಲಾಭ-ನಷ್ಟಗಳನ್ನು ಯೋಚಿಸದೆ, ಸಾಲ ಮಾಡಿಯಾದರೂ ಆಡಂಬರದ ಮದುವೆ ಮಾಡುತ್ತಾರೆ. ಆದರೆ ಆ ಸಾಲದ ಹೊರೆ ಅಂತಿಮವಾಗಿ ಕುಟುಂಬದ ನೆಮ್ಮದಿಯನ್ನೇ ಕಸಿದುಕೊಳ್ಳುತ್ತದೆ.

ಸರಳತೆಗೆ ಆದ್ಯತೆ ನೀಡಿ: ಮದುವೆಯನ್ನು ಸಂಭ್ರಮದಿಂದ ಮಾಡಿ, ಆದರೆ ಆಡಂಬರದಿಂದಲ್ಲ.

ಆಹಾರದ ಮಹತ್ವ ತಿಳಿಯಿರಿ: ನಿಮ್ಮ ಭಾಗದ ಜನರಿಗೆ ಇಷ್ಟವಾಗುವ ಮಿತವಾದ ಹಾಗೂ ರುಚಿಕರವಾದ ಪದಾರ್ಥಗಳನ್ನು ಉಣಬಡಿಸಿ.

ಅನಗತ್ಯ ಸಾಲ ಮಾಡಬೇಡಿ: ಮದುವೆಯ ಒಂದು ದಿನದ ಆಡಂಬರಕ್ಕಿಂತ, ಮದುವೆಯ ನಂತರದ ಸುದೀರ್ಘ ಜೀವನದ ಭದ್ರತೆ ಮುಖ್ಯ.

ಕೊನೆಯ ಮಾತು:

ಮದುವೆ ಎನ್ನುವುದು ಸಂಸ್ಕಾರವೇ ಹೊರತು ವ್ಯಾಪಾರವಲ್ಲ. ಸಾಧ್ಯವಾದಷ್ಟು ಸರಳವಾಗಿ ಮದುವೆಯಾಗಿ, ಆ ಹಣವನ್ನು ನಿಮ್ಮ ಅಥವಾ ಸಮಾಜದ ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಿ. ಆಡಂಬರ ಕ್ಷಣಿಕ, ಆದರೆ ನೆಮ್ಮದಿಯ ಜೀವನ ಶಾಶ್ವತ.

ನವೀನ ಹಬೀಬ 

ಉಪನ್ಯಾಸಕರು ಖ್ಯಾತ ಚಿಂತಕರು, ಪ್ರೇರಕ ಭಾಷಣಕರಾರು.

Leave a Reply

Your email address will not be published. Required fields are marked *