
✍️ ಅಂಜಲಿ ಶ್ರೀನಿವಾಸ ಖಟವಟೆ
ಹುಬ್ಬಳ್ಳಿ
ಇತ್ತೀಚೆಗೆ ಒಬ್ಬ ಆತ್ಮೀಯ ಸ್ನೇಹಿತೆಯಿಂದ ಬಂದ ದೂರವಾಣಿ ಕರೆ ಮನಸ್ಸನ್ನು ತೀವ್ರವಾಗಿ ಕಲಕಿತು. ಸಂತೋಷದಿಂದ ಆಕೆಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಲು ಕರೆ ಮಾಡಿದರೆ, ಇತ್ತ ಕಡೆಯಿಂದ ತೇಲಿಬಂದದ್ದು ಮೆತ್ತನೆಯ ದನಿಯಲ್ಲಿ “ನನ್ನ ವಿಚ್ಛೇದನವಾಗಿದೆ” ಎಂಬ ಮಾತು. ಕ್ಷಣಕಾಲ ದಿಗ್ಭ್ರಾಂತಳಾದೆ. ಪರಸ್ಪರ ಪ್ರೀತಿಸಿ, ಹಿರಿಯರ ಸಮ್ಮತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಅವರಿಬ್ಬರು, ಹೊರನೋಟಕ್ಕೆ ಸುಖಿ ಸಂಸಾರದ ಪ್ರತೀಕರಾಗಿದ್ದರು. ಹಾಗಿದ್ದರೂ ಈ ದುರಂತ ಏಕೆ ಸಂಭವಿಸಿತು ಎಂಬ ಪ್ರಶ್ನೆ ಮನವನ್ನು ಕೊರೆಯಲಾರಂಭಿಸಿತು.
ತನ್ನ ಅನುಭವವನ್ನು ಬಿಚ್ಚಿಡುತ್ತಾ ಆಕೆ ಹೇಳಿದಳು: “ನಮ್ಮ ಮನೆಯಲ್ಲಿ ನಾನು ಸ್ವೇಚ್ಛೆಯಿಂದಿದ್ದೆ. ಇಷ್ಟ ಬಂದಂತೆ ಶಾಪಿಂಗ್ ಮಾಡುತ್ತಿದ್ದೆ. ಆದರೆ ವಿವಾಹದ ನಂತರ, ಸಣ್ಣ ಖರ್ಚಿಗೂ ಕೈಚಾಚಬೇಕಾದ ಪರಿಸ್ಥಿತಿ. ‘ನಾನು ಉದ್ಯೋಗಕ್ಕೆ ಹೋಗುತ್ತೇನೆ’ ಎಂದರೆ, ‘ಮನೆ, ಮಕ್ಕಳನ್ನು ಯಾರು ನೋಡಿಕೊಳ್ಳುವರು?’ ಎಂಬ ಪ್ರಶ್ನೆ. ನನ್ನದೇ ಆದ ವ್ಯಕ್ತಿತ್ವ, ಅಸ್ತಿತ್ವ ಇಲ್ಲವೇ? ನಾನೇಕೆ ಪರಾವಲಂಬಿಯಂತೆ ಬದುಕಬೇಕು? ವಿವಾಹವೆಂಬ ಬಂಧನದಲ್ಲಿ ನನ್ನ ಸ್ವಾತಂತ್ರ್ಯ ಸಂಪೂರ್ಣವಾಗಿ ಮರೆಯಾಯಿತು. ಯಾವಾಗ ಈ ಸಂಕೋಲೆಯಿಂದ ಬಿಡುಗಡೆ ದೊರೆಯುವುದೋ ಎಂದು ಪ್ರತಿಕ್ಷಣವೂ ಹಂಬಲಿಸುತ್ತಿದ್ದೆ.”
ಈ ಮಾತುಗಳನ್ನು ಆಲಿಸುತ್ತಾ ಮನಸ್ಸು ವಿಷಾದದಿಂದ ತುಂಬಿಹೋಯಿತು. ಸಂಭಾಷಣೆಯ ಕೊನೆಯಲ್ಲಿ “Don’t worry, I’m ok. ಹಿಂದೆಂದಿಗಿಂತಲೂ ಈಗಲೇ ಹೆಚ್ಚು ಸಂತೋಷವಾಗಿದ್ದೇನೆ. ಬಂಧನದಿಂದ ಮುಕ್ತವಾದ ಹಕ್ಕಿಯಂತೆ ಭಾಸವಾಗುತ್ತಿದೆ” ಎಂದು ಹೇಳಿ ಆಕೆ ಕರೆ ಸ್ಥಗಿತಗೊಳಿಸಿದಳು.
ಈ ಘಟನೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸಂಬಂಧಗಳು ಇಂದು ಏಕೆ ಇಷ್ಟು ಕ್ಷೀಣವಾಗುತ್ತಿವೆ? ತಾಳ್ಮೆ, ಸಹನೆ, ಪರಸ್ಪರ ಹೊಂದಾಣಿಕೆ ಎಂಬ ಶಬ್ದಗಳೇ ನಮ್ಮ ನಿಘಂಟಿನಿಂದ ಅಳಿಸಿಹೋಗುತ್ತಿವೆಯೇ?
ನಮ್ಮ ಅಜ್ಜಿ, ತಾಯಿ, ಅತ್ತೆ, ಚಿಕ್ಕಮ್ಮಂದಿರ ಕಾಲಘಟ್ಟವನ್ನು ಸ್ಮರಿಸಿದರೆ, ವೈವಾಹಿಕ ಜೀವನದಲ್ಲಿ ಅವರು ತೋರುತ್ತಿದ್ದ ಅಸೀಮ ತಾಳ್ಮೆ, ಪರಸ್ಪರ ಗೌರವ ಮತ್ತು ತ್ಯಾಗ ಮನೋಭಾವನೆಗಳು ಎದ್ದು ಕಾಣುತ್ತವೆ. ಕಷ್ಟ-ಸುಖಗಳನ್ನು ಸಮಾನವಾಗಿ ಹಂಚಿಕೊಂಡು, ಹೊಂದಾಣಿಕೆಯಿಂದ ಬಾಳಿದ ಆ ಪೀಳಿಗೆಯನ್ನು ಕಂಡು ಬೆಳೆದ ನಮಗೆ, ಇಂದಿನ ವಿಚ್ಛೇದನದ ಪ್ರಕರಣಗಳು ಅತ್ಯಂತ ಅನ್ಯವಾಗಿ ಕಾಣುತ್ತವೆ. ವರ್ತಮಾನ ಕಾಲದಲ್ಲಿ ದಾಂಪತ್ಯವು ಕ್ಷುಲ್ಲಕ ಕಾರಣಗಳಿಗಾಗಿ, ಕ್ಷಣಮಾತ್ರದಲ್ಲಿ ಛಿದ್ರವಾಗುತ್ತಿರುವುದು ವಿಷಾದನೀಯ.
ಇಲ್ಲಿ ಯಾರೂ ಪರಿಪೂರ್ಣರಲ್ಲ ಎಂಬ ಸತ್ಯವನ್ನು ನಾವು ಮರೆಯಬಾರದು. ನಮ್ಮಲ್ಲಿರುವ ಸದ್ಗುಣಗಳಿಗಿಂತ ಅಧಿಕವಾದ ಗುಣಗಳನ್ನು ಇತರರಲ್ಲಿ ಅನ್ವೇಷಿಸುವುದು ಅವಿವೇಕ. “ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ” ಎಂಬಂತೆ ಕಾಲವು ನಿಶ್ಚಯವಾಗಿಯೂ ಬದಲಾಗಿದೆ. ಆಧುನಿಕ ಅತ್ತೆಯಂದಿರು ತಮ್ಮ ಸೊಸೆಯರನ್ನು ಸ್ವಂತ ಪುತ್ರಿಯಂತೆ ಕಾಣುತ್ತಾರೆ. ತಾವು ಅನುಭವಿಸಿದ ಕಷ್ಟ-ಕಾರ್ಪಣ್ಯಗಳನ್ನು ಸೊಸೆಗೆ ನೀಡಬಾರದು ಎಂದು ಅವರು ಮನಃಪೂರ್ವಕವಾಗಿ ಬಯಸುತ್ತಾರೆ. ಮಗ ಮತ್ತು ಸೊಸೆಯ ಖಾಸಗಿ ವಿಷಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡದೆ, ಅವರಿಗೆ ಸ್ವಾತಂತ್ರ್ಯವನ್ನು ನೀಡಿ, ಎಲ್ಲರೂ ಒಗ್ಗೂಡಿ ನೆಮ್ಮದಿಯ ಜೀವನ ನಡೆಸಬೇಕೆಂಬುದೇ ಅವರ ಆಶಯ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ, ವಿದ್ಯಾವಂತ ಸೊಸೆಯರಲ್ಲಿ “ನಮಗೆ ಏಕಾಂತ ಬೇಕು, ಪತಿ ಮಾತ್ರ ಸಾಕು, ಅವರ ಕುಟುಂಬದವರು ಬೇಡ” ಎಂಬ ಮನೋಧರ್ಮ ಬೆಳೆಯುತ್ತಿರುವುದು ಕಂಡುಬರುತ್ತದೆ. ಕ್ಷುಲ್ಲಕ ಕಾರಣಗಳಿಗೆ ದಾಂಪತ್ಯವನ್ನು ಧ್ವಂಸಗೊಳಿಸುವುದು ವಿವೇಕಹೀನತೆಯ ಪರಮಾವಧಿ. ತಾಳ್ಮೆಯೆಂಬುದು ಯಾವ ಸಾಗರದಲ್ಲಿ ಮುಳುಗಿಹೋಯಿತೋ ತಿಳಿಯದು. ಮನುಷ್ಯನು ತನ್ನ ಅಹಂ ಮತ್ತು ಕ್ರೋಧಾಗ್ನಿಯಲ್ಲಿ ತನ್ನನ್ನೂ, ತನ್ನ ಸುತ್ತಲಿನವರನ್ನೂ ದಹಿಸಿಬಿಡುತ್ತಾನೆ. ಪ್ರತಿಯೊಬ್ಬರಲ್ಲೂ ದೋಷಗಳನ್ನು ಹುಡುಕುತ್ತಾ ಹೋದರೆ, ಅಂತಿಮವಾಗಿ ನಮ್ಮ ಮನಸ್ಸೇ ಮಲಿನವಾಗುತ್ತದೆ.
ಯಾವುದೇ ಸಂಬಂಧವು ವಿಕಸನಗೊಳ್ಳಲು ಕಾಲಾವಕಾಶ ಅತ್ಯಗತ್ಯ. ಹೊಂದಾಣಿಕೆಯೇ ಬದುಕಿನ ಜೀವಾಳ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮಹಾ ಸಮಸ್ಯೆಗಳೆಂದು ಪರಿಗಣಿಸಿದರೆ, ಸಂಬಂಧಗಳ ಸಂಹಾರ ನಿಶ್ಚಿತ. ಪತಿ-ಪತ್ನಿಯರ ನಡುವೆ ಪರಸ್ಪರ ತಿಳುವಳಿಕೆ ಮತ್ತು ಅಚಲವಾದ ನಂಬಿಕೆ ಅತ್ಯಂತ ಅವಶ್ಯಕ. ಯಾವುದೇ ಬಂಧವು ದೃಢವಾಗಿ ಉಳಿಯಬೇಕಾದರೆ, ಅದರಲ್ಲಿ ಕಾಲ, ನಂಬಿಕೆ ಮತ್ತು ಪ್ರೀತಿಯ ಸಮ್ಮಿಲನವಾಗಿರಬೇಕು. ಮುಷ್ಟಿಯಲ್ಲಿ ಮರಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದಷ್ಟೂ ಅದು ಕೈಜಾರಿ ಹೋಗುತ್ತದೆ. ಸ್ವಾತಂತ್ರ್ಯವು ಅತಿಯಾದರೂ ಅಪಾಯ, ನಿಯಂತ್ರಣವು ಅತಿಯಾದರೂ ಅಪಾಯ. ಪ್ರತಿಯೊಂದಕ್ಕೂ ಒಂದು ಮಿತಿ ಇದ್ದೇ ಇರುತ್ತದೆ.
ವೈಯಕ್ತಿಕವಾಗಿ, ಸ್ನೇಹಿತೆಯ ವಿಚಾರದಲ್ಲಿ ಮನಸ್ಸು ತೀವ್ರವಾಗಿ ಘಾಸಿಗೊಂಡಿದ್ದು ಸತ್ಯ. ಆದರೆ “ಬಂಧನದಿಂದ ಮುಕ್ತಳಾಗಿದ್ದೇನೆ” ಎಂದು ಆಕೆ ಹೇಳುವಾಗ, ಸ್ವಾತಂತ್ರ್ಯ ಮತ್ತು ವಿವಾಹ ಎಂಬ ಎರಡು ಪರಿಕಲ್ಪನೆಗಳನ್ನು ಸರಿಯಾಗಿ ಗ್ರಹಿಸದೆ, ತನ್ನ ಬದುಕನ್ನೇ ಆಕೆ ಅಗ್ನಿಗೆ ಆಹುತಿ ಮಾಡಿಕೊಂಡಳೇನೋ ಎಂಬ ಭಾವನೆ ಮೂಡುತ್ತದೆ.
ಅಂತಿಮವಾಗಿ, ಪ್ರತಿಯೊಬ್ಬರ ಬದುಕು ಅವರವರ ಕೈಯಲ್ಲಿದೆ. ಹೊಂದಾಣಿಕೆಯ ಮನೋಭಾವವೇ ಇಲ್ಲದಿದ್ದಾಗ, ಕ್ಷಮಾಗುಣವೇ ನಮ್ಮಲ್ಲಿ ಮರೆಯಾದಾಗ, ಕೊನೆಗೆ ನಮಗಾಗಿ ಯಾವ ಸಂಬಂಧವೂ ಉಳಿಯುವುದಿಲ್ಲ ಎಂಬುದು ಕಟು ಸತ್ಯ.
