ಬೆಂಗಳೂರು, ಮೇ 19: ದೇಶಾದ್ಯಂತ ಜನರಿಗೆ ಬೆಳ್ಳಂ-ಬೆಳಗ್ಗೆಯೇ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಮತ್ತೆ 90 ಪೈಸೆ ಹೆಚ್ಚಿಸಲಾಗಿದೆ.ಕಳೆದ ಶುಕ್ರವಾರವಷ್ಟೇ 3 ರೂಪಾಯಿ ಏರಿಕೆಯಾದಲ್ಲಿ, ಎರಡನೇ ಏರಿಕೆಯಾಗಿದ್ದು, ವಾಹನ ಸವಾರರಿಗೆ ಇದು ಬಿಗ್ ಶಾಕ್ ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಇಂಧನ ಬೆಲೆ ಮತ್ತಷ್ಟು ಏರಿಕೆಯಾಗಿದ್ದು, ಸಾರ್ವಜನಿಕರಿಗೆ ಮತ್ತು ಸಾರಿಗೆ ವಲಯಕ್ಕೆ ಆರ್ಥಿಕ ಹೊರೆ ಹೆಚ್ಚಿಸಿದೆ.
ಹೆಚ್ಚಿದ ಸಾರಿಗೆ ವೆಚ್ಚಗಳಿಂದಾಗಿ, ದಿನನಿತ್ಯದ ವಸ್ತುಗಳ ಬೆಲೆಗಳು ಸಹ ಏರಿಕೆಯಾಗುವ ಭೀತಿಯಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಕಚ್ಚಾ ತೈಲ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಿದೆ. ಪೂರೈಕೆಯಲ್ಲಿನ ಸಮಸ್ಯೆಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ ₹100 ಮೀರಿದೆ.
ಇದರಿಂದ 4 ದಿನಗಳ ಹಿಂದೆ 106.17 ರೂ. ಇದ್ದ ರೂಪೆಟ್ರೋಲ್ ಬೆಲೆ 107.16 ರೂ. ಹಾಗೂ 94.10 ರೂ. ಇದ್ದ ಡೀಸೆಲ್ 95.03 ರೂ. ಗೆ ತಲುಪಿದೆ. ಪದೇ ಪದೇ ಆಗುತ್ತಿರುವ ಈ ದರ ಏರಿಕೆಯಿಂದ ತೀವ್ರ ಕಂಗಾಲಾಗಿರುವ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಜಾಗತಿಕ ಪರಿಸ್ಥಿತಿ ಅರ್ಥವಾದರೂ, ಸರ್ಕಾರ ಸಾಮಾನ್ಯ ಜನರ ಹಿತದೃಷ್ಟಿಯಿಂದ ಇಂಧನ ದರ ನಿಯಂತ್ರಣಕ್ಕೆ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 97.77 ರೂ.ನಿಂದ 98.64 ರೂ.ಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ದರ 90.67ರೂ.ನಿಂದ 91.58 ರೂ.ಗೆ ತಲುಪಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 91 ಪೈಸೆ ಹೆಚ್ಚಳವಾಗುವುದರೊಂದಿಗೆ 107.59ರೂ.ಗೆ ತಲುಪಿದ್ದರೆ, ಡೀಸೆಲ್ ದರ 94 ಪೈಸೆ ಏರಿಕೆಯಾಗಿ 94.08 ರೂ. ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರದಲ್ಲಿ ಗರಿಷ್ಠ 96 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಬೆಲೆ 109.70 ರೂ. ಮುಟ್ಟಿದೆ. ಇನ್ನು ಡೀಸೆಲ್ ದರ 94 ಪೈಸೆ ಹೆಚ್ಚಳದೊಂದಿಗೆ 96.07 ರೂ.ಗೆ ಜಿಗಿದಿದೆ. ತಮಿಳುನಾಡಿನ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 82 ಪೈಸೆ ಹೆಚ್ಚಳವಾಗಿ 104.49 ರೂ. ಹಾಗೂ ಡೀಸೆಲ್ ಬೆಲೆ 86 ಪೈಸೆ ಏರಿಕೆಯಾಗಿ 96.11 ರೂ.ಗೆ ತಲುಪಿದೆ.
ಇದು ದೇಶದಲ್ಲಿ ಬೆಲೆ ಏರಿಕೆ ಮತ್ತಷ್ಟು ಹೆಚ್ಚಾಗುವ ಆತಂಕವನ್ನು ಮೂಡಿಸಿದೆ.
