ಶಾಸ್ತ್ರೀಯ ಶಿಸ್ತು ಜಾನಪದ ಸ್ವಾತಂತ್ರ್ಯದಿಂದ ಯಕ್ಷಗಾನಕ್ಕೆ ಜನಮನ್ನಣೆ: ಪ್ರೋ. ಸಾಮಗ

ಉಡುಪಿ ನ. 20: ಸಾಂಸ್ಕೃತಿಕ ವಿಶ್ವ ಮನ್ನಣೆ ಪಡೆಯಲು ರಾಜ್ಯದ ಎಲ್ಲಾ ಭಾಗವು ತನ್ನದೇ ಆದ ಕೊಡುಗೆಯನ್ನು ನೀಡಿದೆ. ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನವು ಶಾಸ್ತ್ರೀಯ ಶಿಸ್ತು ಮತ್ತು ಜಾನಪದ ಸ್ವಾತಂತ್ರ್ಯದಿಂದ ಜನಮನ್ನಣೆಯನ್ನು ಪಡೆದಿದೆ. ಚೌಕಟ್ಟು ಮೀರಿದರೂ ಸರಿ ತಪ್ಪು ಹೇಳುವ ಕೋರ್ಟು ಸೃಷ್ಟಿಯಾಗಿಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೋ.ಎಂ.ಎಲ್. ಸಾಮಗ ಹೇಳಿದ್ದಾರೆ.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಹಾಗೂ ಉಡುಪಿ ಜಿಲ್ಲೆ ವತಿಯಿಂದ ಕುಂಜಿಬೆಟ್ಟು ಶಾರದಾ ರೆಸಿಡೆನ್ಸಿಯಲ್ ಸ್ಕೂಲಿನ ಸಭಾಂಗಣದಲ್ಲಿ ಬುಧವಾರ ನಡೆದ ಸಾಧಕರೊಂದಿಗೆ ಸಂವಾದದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಾಸ್ತ್ರೀಯ ಕಲಾವಿದರಿಗೆ ಪಂಚ ತಾರಾ ಆತಿಥ್ಯ, ಯಕ್ಷಗಾನ/ಜನಪದ ಕಲಾವಿದರಿಗೆ ಕಲ್ಯಾಣ ಮಂಟಪದಲ್ಲಿ ಉಳಿದುಕೊಳ್ಳಬಹುದಾದ ವ್ಯವಸ್ಥೆಯ ತಾರತಮ್ಯ ಸಲ್ಲದು. ಯಕ್ಷಗಾನ ಗಂಡಸರಿಗೆ ಸೀಮಿತವಾದ ಕಲೆಯಲ್ಲ, ಎಲ್ಲರಿಗೂ ಸೇರಿದ ಕಲೆ. ಸಾಹಿತ್ಯ ಕಾರ್ಯಕ್ರಮದಲ್ಲಿ ತೊಡಗುವಿಕೆ ಸಂತೋಷ ನೀಡುತ್ತದೆ. ಬದುಕಿನಲ್ಲಿ ಉತ್ತಮ ಕಲಾವಿದರಾಗಲು ಅನುಭವ ವಿಸ್ತಾರ, ವೀಕ್ಷಣೆಯ ಕುತೂಹಲ ಬಹುಮುಖ್ಯ ಎಂದರು.

ತಮ್ಮ ಸುದೀರ್ಘ ಅರವತ್ತು ವರ್ಷದ ಯಕ್ಷ ಪಯಣದ ಬಗ್ಗೆ ತಿಳಿಸಿದ ಅವರು, ಕಲಿಕೆ ನಿರಂತರವಾಗಿರುತ್ತದೆ. ಅನಾರೋಗ್ಯದ ಸಂದರ್ಭದಲ್ಲಿಯೂ ಸಹ ವೇಷ ಹಾಕಿ ರಂಗಕ್ಕೆ ಹೋಗಿ ಬಂದರೆ ಎಲ್ಲವೂ ಮಾಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ, ಒಂದು ದೇಶದ ಸಾಂಸ್ಕೃತಿಕ ಶ್ರೀಮಂತಿಕ ದೇಶದ ಅಭಿವೃದ್ಧಿಯ ಮಾನದಂಡ. ಕಲೆ ಸಂಪ್ರದಾಯ ನಮ್ಮ ನಿಜವಾದ ಆಸ್ತಿ ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಸಾಮಗರವರು ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ ಎಂದರು.

ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ವಿದ್ಯಾವಂತ ಆಚಾರ್ಯ ಉದ್ಘಾಟಿಸಿದರು. ಈ ಸಂದರ್ಭ ಪ್ರೋ.ಎಂ.ಎಲ್. ಸಾಮಗ ಅವರನ್ನು ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *