ಮಂಗಳೂರು: MACCO ಸಂಘದ ವಾರ್ಷಿಕ ಮಹಾಸಭೆ

ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ MACCO
ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ನಿಯಮಿತದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ನಗರದ ಸೆಂಟ್ ಜೋಸೆಫ್ ಸೆಂಟಿನರಿ ಮೆಮೊರಿಯಲ್‌ ಹಾಲ್‌ ಜೆಪ್ಪು ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ’ಸೋಜಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಸಂಘದ ಬಲವರ್ಧನೆ ಹಾಗೂ ಮುಂದಿನ ದಿನಗಳಲ್ಲಿ ಸದಸ್ಯರು ಮತ್ತು ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೌಲಭ್ಯಗಳನ್ನು ಒದಗಿಸುವ ಕುರಿತು ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಸಂಘದ ವತಿಯಿಂದ ಈಗಾಗಲೇ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಮತ್ತಷ್ಟು ವಿಸ್ತರಿಸುವುದು ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಪೆಟ್ರೋಲ್ ಪಂಪ್‌ಗಳನ್ನು ಸ್ಥಾಪಿಸುವ ಸಾಧ್ಯತೆಗಳ ಕುರಿತು ಸಂಘದ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಉತ್ತಮ ಸಾಧನೆ ಮಾಡಿದ ಒಂಬತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಂಘದ ಅಭಿವೃದ್ಧಿಗೆ ಹಾಗೂ ಸದಸ್ಯರ ಸೇವೆಗೆ ಕೊಡುಗೆ ನೀಡಿದವರನ್ನೂ ಗೌರವಿಸಲಾಯಿತು. ಸಂಘವು ಐವತ್ತು ವರ್ಷಗಳ ಸೇವೆಯನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಇಷ್ಟು ವರ್ಷಗಳ ಕಾಲ ಸಂಘದ ಬೆಳವಣಿಗೆಗೆ ಸಹಕರಿಸಿದ ಎಲ್ಲಾ ಸದಸ್ಯರು, ಪದಾಧಿಕಾರಿಗಳು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ವತಿಯಿಂದ ಸಂಘವು ಐವತ್ತು ವರ್ಷಗಳ ಕಾಲ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನೀಡಲಾದ ಪುರಸ್ಕಾರದ ಬಗ್ಗೆಯೂ ಸಭೆಯಲ್ಲಿ ತಿಳಿಸಲಾಯಿತು.

ಸಭೆಯ ಆರಂಭದಲ್ಲಿ ಕಾರ್ಯದರ್ಶಿ ನಿಶಿತಾ ಅವರು ಲೆಕ್ಕಪತ್ರಗಳನ್ನು ಮಂಡಿಸಿ, ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಬಳಿಕ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ, ಅಗತ್ಯ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಉಪಾಧ್ಯಕ್ಷರಾದ ಸಿರಿಲ್ ಡಿಸೋಜಾ, ನಿರ್ದೇಶಕರಾದ ಬಬಿತಾ ಡಿಸೋಜಾ, ವಿದ್ಯಾ ಟೋರಸ್, ಜೇಮ್ಸ್ ಮಾಡ್ತಾ, ಪಿ.ಪಿ. ವರ್ಗೀಸ್, ಅನಿಲ್ ಡಿಸೋಜಾ, ವಸಂತ್ ಶೆಟ್ಟಿ, ರಾಜೇಶ್, ಭಾಸ್ಕರ್ ರಾವ್, ಚಂದ್ರಶೇಖರ್, ಆಲ್ವಿನ್ ಗಾಡ್ವಿನ್ ಪಿಂಟೋ, ಚಂದ್ರಶೇಖರ್ ಕೆ., ಎಡ್ವರ್ಡ್ ಆಲ್ವಿನ್ ಫರ್ನಾಂಡಿಸ್, ಸೌವಾದ್ ಎಂ., ವಿಶ್ವನಾಥ್, ಜಮಾಲುದ್ದೀನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *