ಪದ್ಮನಗರ, ಅಜೆಕಾರು: ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಅಣ್ಣ-ತಂಗಿಯರ ಪವಿತ್ರ ಬಾಂಧವ್ಯ ಹಾಗೂ ಸಹೋದರತ್ವದ ಸಂಕೇತವಾದ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಲಾಯಿತು.


ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ತಮ್ಮ ಕೈಯಾರೆ ಬಣ್ಣಬಣ್ಣದ ರಾಖಿಗಳನ್ನು ತಯಾರಿಸಿ, ಪರಸ್ಪರ ರಾಖಿ ಕಟ್ಟಿಕೊಂಡು, ಆರತಿ ಬೆಳಗಿ ಸಿಹಿ ಹಂಚಿಕೊಂಡರು. ಈ ಮೂಲಕ ಪ್ರೀತಿ, ವಿಶ್ವಾಸ, ಕಾಳಜಿ ಮತ್ತು ಸಹೋದರತ್ವದ ಭಾವನೆಯನ್ನು ವ್ಯಕ್ತಪಡಿಸಿದರು.
ರಕ್ಷಾಬಂಧನದ ಮಹತ್ವವನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಾಮಚಂದ್ರ ನೆಲ್ಲಿಕಾರ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಶ್ರೀರಕ್ಷ ಅವರು ಪ್ರಾರ್ಥನೆ ನೆರವೇರಿಸಿದರು. ವಿದ್ಯಾರ್ಥಿನಿಯರು ಮನೋಜ್ಞವಾದ ನೃತ್ಯ ಪ್ರದರ್ಶನ ನೀಡಿದರು.
ವಿದ್ಯಾರ್ಥಿ ಲಿಸ್ಟನ್ ಮಿನೇಜಸ್ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಉಪಪ್ರಾಂಶುಪಾಲರಾದ ಆರತಿ, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
“ರಕ್ಷೆಯ ದಾರದಲ್ಲಿ ಬೆಸೆದ ಬಾಂಧವ್ಯ, ಪ್ರೀತಿ–ವಿಶ್ವಾಸದ ಬಂಧವನ್ನು ಸದಾ ಗಟ್ಟಿಗೊಳಿಸಲಿ.” ಎಂಬ ಆಶಯದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
