ಉಜಿರೆ: ನಮ್ಮ ಮನ ಮತ್ತು ಮನೆ ಪರಿಶುದ್ಧವಾಗಿ, ಸ್ವಚ್ಛ ಇದ್ದರೆ ಲಕ್ಷ್ಮೀ ಚಂಚಲೆ ಆಗುವುದಿಲ್ಲ ಎಂದು ಬೆಂಗಳೂರಿನ ಕ್ಷೇಮವನದ ಸಿ.ಇ.ಒ. ಶ್ರದ್ಧಾಅಮಿತ್ ಹೇಳಿದರು.

ಅವರು ಶುಕ್ರವಾರ ಕೊಲ್ಲಿ ದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಹಿಳಾ ವಿಭಾಗದ ಆಶ್ರಯದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಲಕ್ಷ್ಮೀಚಂಚಲೆ ಎಂಬ ನಂಬಿಕೆ ಇದೆ. ಲಕ್ಷ್ಮೀ ಚಂಚಲೆ ಆಗುವುದಿಲ್ಲ. ಅಷ್ಟಲಕ್ಷ್ಮೀಯರ ಆರಾಧನೆಯಿಂದ ವಿಜಯಲಕ್ಷ್ಮೀ ಒಲಿಯಲು ಸಾಧ್ಯವಾಗುತ್ತದೆ. ಸಂಪತ್ತಿನ ರಕ್ಷಣೆಗೆ ಸಜ್ಜನರ ಸಂಗ ಅಗತ್ಯ ಎಂದು ಶ್ರದ್ಧಾಅಮಿತ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಶುಭಾಶಂಸನೆ ಮಾಡಿದರು.
ಧಾರ್ಮಿಕ ಉಪನ್ಯಾಸ ನೀಡಿದ ಮುಂಡಾಜೆಯ ಅಶ್ವಿನಿಅರವಿಂದ ಹೆಬ್ಬಾರ್, ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವುದರಿಂದ ಸಮಾಜದ ಸಂಘಟನೆಯೊಂದಿಗೆ ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಗೌರವ ಹೆಚ್ಚಾಗುತ್ತದೆ ಎಂದರು.
ಜ್ಯೋತಿಲಕ್ಷ್ಮೀ ಸ್ವಾಗತಿಸಿದರು. ವನಿತಾ ಉಮೇಶ್ ಧನ್ಯವಾದವಿತ್ತರು. ಮೀನಾಕ್ಷಿ ಮಹಾಬಲ ಗೌಡ ಕಾರ್ಯಕ್ರಮ ನಿರ್ವಹಿಸಿದರು.
