ನನ್ನವಳು: ನಿಸ್ವಾರ್ಥ ಪ್ರೇಮದ ಸಾಕಾರ ಮೂರ್ತಿ

✍️ ನವೀನ್ ಹಬೀಬ್

ಪೃಥ್ವಿಯ ಸೌರಭ ಕರಗಿಸಿ ತಂದ ಸಹನೆಯ ಗಣಿಯೇ ಇವಳು,
ಹೆಜ್ಜೆ ಇಟ್ಟ ಕಡೆಯೆಲ್ಲ ಸಂತಸದ ಸುಧೆಯ ಹರಿಸುವವಳು!
ಹೇಳದ ಮುನ್ನವೇ ಎದೆಯ ದನಿಯನ್ನು ಅರಿಯುವ ಚತುರೆ ಇವಳು,
ಭಾವನೆಗೆ ಸ್ಪಂದಿಸಿ ಕೊನೆವರಗೆ ಜೊತೆಯಾಗಿ ನಡೆಯುವವಳು!

ಮನೆಯ ಮಂದಿರ ಬೆಳಗುವ ಸಾಕ್ಷಾತ್ ದೇವತೆಯು ಇವಳು,
ಕುಟುಂಬದ ಉಸಿರಾಗಿ ಕಾಯುವ ಹೃದಯದ ಭಾಗ ಇವಳು!
ನಾ ಬರುವ ದಾರಿಗೆ ಕಾದು ಕುಳಿತು ಹಸಿವ ನೀಗಿಸುವವಳು,
ನೂರೆಂಟು ಪಾತ್ರಗಳಲಿ ನರಸಿಯಾಗಿ ನಗುನಗುತಾ ಮಿನುಗುವವಳು!

ತನ್ನ ಕನಸುಗಳ ಮೂಟೆ ಕಟ್ಟಿ, ಮನೆಯವರ ಕನಸಿಗೆ ರೆಕ್ಕೆ ಕಟ್ಟಿದವಳು,
ಇಷ್ಟ-ಕಷ್ಟಗಳ ಬದಿಗೊತ್ತಿ ನನ್ನ ಇಷ್ಟವನ್ನೇ ತನ್ನದಾಗಿಸಿಕೊಂಡವಳು!
ಹುಟ್ಟಿದ ಮನೆಗೆ ಅತಿಥಿಯಾಗಿ, ಬಂದ ಮನೆಗೆ ಆಧಾರವಾದವಳು,
ತನ್ನ ಹಸಿವ ಮರೆತು, ಎಲ್ಲರ ಒಡಲ ಹಸಿವ ತಣಿಸುವ ಅನ್ನಪೂರ್ಣ ಇವಳು!

ನೋಯಿಸಿದ ಮನಸ್ಸಿಗೂ ನಗುವನ್ನೇ ಉಡುಗೊರೆ ಕೊಡುವ ಕರುಣಾಮಯಿ,
ಅಸಹನೆಯ ಜಗತ್ತಿನಲಿ ಪ್ರೀತಿಯ ಸಿಂಚನಗೈಯುವ ಶಾಂತಿಪ್ರಿಯೆ!
ಯಾವ ಫಲಾಪೇಕ್ಷೆಯೂ ಇಲ್ಲದೆ ನಿಸ್ವಾರ್ಥದಿ ಬದುಕುವ ದಿವ್ಯ ಚೇತನ,
ಜಗದ ಪ್ರತಿಯೊಂದು ಗೌರವಕ್ಕೂ ಅರ್ಹಳಾದ ಪೂಜನೀಯ ನೂತನ!

ಮಕ್ಕಳಿಗೆ ಅಕ್ಷರ ಕಲಿಸುವ ಜ್ಞಾನ ಸರಸ್ವತಿಯು ಇವಳು,
ಮನೆಯ ತುಂಬ ಸುಖ ತರುವ ಭಾಗ್ಯಲಕ್ಷ್ಮಿಯು ಇವಳು!
ಉಣಬಡಿಸಿ ಹರಸುವ ಸದಾ ಕರುಣೆಯ ಅನ್ನಪೂರ್ಣೆಯು ಇವಳು,
ಕಷ್ಟದ ಕಾರ್ಮೋಡ ಸರಿಸಿ ಕಾಯುವ ದುರ್ಗೆಯೂ ಇವಳು!

ನೀರಿನಂತೆ ನಿರ್ಮಲವಾಗಿ ಹರಿವ ಕ್ಷಮೆಯ ರೂಪ ಇವಳು,
ತನ್ನೊಳಗಿನ ದುರ್ಗೆಯ ಶಕ್ತಿ ಅರಿಯದೇ ಕುಳಿತ ಶಾಂತ ಮೂರ್ತಿ ಇವಳು!
ಇವಳಿಲ್ಲದ ಸೃಷ್ಟಿಯ ಕಲ್ಪನೆಯೇ ಶೂನ್ಯ, ಬರೀ ಮರುಭೂಮಿ,
ತನ್ನ ನಿಸ್ವಾರ್ಥ ಪ್ರೀತಿಯಿಂದಲೇ ಜಗವ ಗೆದ್ದ ಚೈತನ್ಯ ಭೂಮಿ ಇವಳು!

Leave a Reply

Your email address will not be published. Required fields are marked *