ದೆಹಲಿ ಕುಂದಕುಂದ ಭಾರತಿ ಜೈನ ಕೇಂದ್ರದ ಸ್ವರ್ಗೀಯ ಶ್ವೇತಪಿಂಚಾಚಾರ್ಯ 108 ವಿದ್ಯಾನಂದ ಮುನಿ ಮಹಾರಾಜರ 101ನೇ ಜನ್ಮ ಜಯಂತಿ ಪ್ರಯುಕ್ತ ಮೂಡುಬಿದಿರೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾಸ್ವಾಮೀಜಿಗಳು 26 ಏಪ್ರಿಲ್ 2026 ರಂದು ಭಾಗವಹಿಸಿ ಆಶೀರ್ವಚನ ನೀಡಿದರು. ತಮ್ಮ ಸಂದೇಶದಲ್ಲಿ ಆಚಾರ್ಯರು ಉತ್ತರ ಮತ್ತು ದಕ್ಷಿಣ ಭಾರತದ ಅನೇಕ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಪ್ರೇರಣೆ ನೀಡಿದವರಾಗಿದ್ದು, ಹಲವು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಿ ರಾಷ್ಟ್ರಸಂತರಾಗಿ ಖ್ಯಾತಿ ಪಡೆದಿದ್ದರು ಎಂದು ಹೇಳಿದರು. ಅವರ ಪ್ರವಚನಗಳು ಜನಮನ ಗೆದ್ದಿವೆ ಎಂದು ಅವರು ಅಭಿಪ್ರಾಯಪಟ್ಟರು.




ಈ ಸಂದರ್ಭದಲ್ಲಿ ಆಚಾರ್ಯ ಶ್ರುತ ಸಾಗರ ಮುನಿ ಮಹಾರಾಜರು ಪ್ರಾಕೃತ ವಿದ್ವಾಂಸರಾದ ಪ್ರೊ. ಅನೇಕಾಂತ ಜೈನ್ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಂಸ್ಕೃತ ಕಾಲೇಜು, ಪ್ರಾಕೃತ ವಿಭಾಗ) ಅವರಿಗೆ ‘ಆಚಾರ್ಯ ವಿದ್ಯಾನಂದ ಪುರಸ್ಕಾರ’ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಹಸ್ತಿನಾಪುರದ ರವೀಂದ್ರ ಕೀರ್ತಿ ಸ್ವಾಮೀಜಿ, ತಿಜಾರ ಸೌರಭ್ ಸೇನ್ ಸ್ವಾಮೀಜಿ, ಟ್ರಸ್ಟಿ ಅಧ್ಯಕ್ಷ ಸತೀಶ್ ಜೈನ್, ಮಹಾಮಂತ್ರಿ ಅನಿಲ್ ಜೈನ್, ಅರ್ಜುನ್ ಜೈನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಡಾ. ವೀರ ಸಾಗರ ಜೈನ್ ಮಂಗಳಾಚರಣೆ ನೆರವೇರಿಸಿದರು.
ಬಳಿಕ ಮೂಡುಬಿದಿರೆಯ ಶ್ರೀಗಳು 27 ಮತ್ತು 28 ಏಪ್ರಿಲ್ 2026 ರಂದು ಝಾರ್ಖಂಡ್ ರಾಜ್ಯದ ಜೈನ ಸಿದ್ಧಕ್ಷೇತ್ರ ಸಮ್ಮೆದ ಶಿಖರ್ಜಿಯಲ್ಲಿ ಸಿದ್ಧಕೂಟಗಳಿಗೆ ವಂದನೆ ಸಲ್ಲಿಸಿ, ಆಚಾರ್ಯ ವಸು ನಂದಿ ಮಹಾರಾಜರ ಪಂಚಕಲ್ಯಾಣ ಹಾಗೂ ಆಚಾರ್ಯ ಪ್ರಮಾಣ ಸಾಗರ ಮಹಾರಾಜರ ಶಂಕಾ ಸಮಾಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ಷೇತ್ರಕ್ಕೆ ಹಿಂತಿರುಗಿದರು.
