ಉಡುಪಿ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಬಿ.ಎಲ್.ಓ ಹಾಗೂ ಬಿ.ಎಲ್.ಎ ಗಳು ಅತ್ಯಂತ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಜಾಗರೂಕತೆಯಿಂದ ನಿರ್ವಹಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು.




ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ, ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ – 2026 ಕ್ಕೆ ಸಂಬಂಧಿಸಿದಂತೆ, ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಬಿ.ಎಲ್.ಓ ಮತ್ತು ಬಿ.ಎಲ್.ಎ ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವದ ಯಶಸ್ಸು ಪಾರದರ್ಶಕ ಮತದಾರರ ಪಟ್ಟಿಯ ಮೇಲೆ ಅವಲಂಬಿತವಾಗಿರುತ್ತದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಬಿ.ಎಲ್.ಓ ಹಾಗೂ ಬಿ.ಎಲ್.ಎ ಗಳು ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಹಾಗೂ ನೈಜ ಮತದಾರರು ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆಯಿಂದ ವಂಚಿತರಾಗದಂತೆ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.
ಸಂಪೂರ್ಣ ಪರಿಷ್ಕ್ರತವಾದ ಹೊಸ ಮತದಾರರ ಪಟ್ಟಿಯನ್ನು ತಯಾರಿಸುವುದರೊಂದಿಗೆ ನ್ಯೂನ್ಯತೆಗಳನ್ನು ಸರಿಪಡಿಸಿ, ಯಾವುದೇ ಅರ್ಹ ಮತದಾರ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಉದ್ದೇಶವಾಗಿದೆ ಎಂದ ಅವರು, ತರಬೇತಿಯಲ್ಲಿನ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಅರ್ಥೈಸಿಕೊಂಡು ಬಿ.ಎಲ್.ಓ ಹಾಗೂ ಬಿ.ಎಲ್.ಎ ಗಳು ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಭಾರತ ಚುನಾವಣಾ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆಗೆ ಅರ್ಹತಾ ದಿನಾಂಕ ಅಕ್ಟೋಬರ್ 1 ನ್ನು ಘೋಷಿಸಿದೆ. ಜೂನ್ 20 ರಿಂದ 29 ರ ವರೆಗೆ ಪೂರ್ವತಯಾರಿ, ತರಬೇತಿ ಮತ್ತು ಮುದ್ರಣಕ್ಕೆ ಅವಕಾಶ ಕಲ್ಪಿಸಿದೆ. ಜೂನ್ 30 ರಿಂದ ಜುಲೈ 29 ರ ವರೆಗೆ ಮತಗಟ್ಟೆ ಅಧಿಕಾರಿಯಿಂದ ಮನೆಮನೆ ಭೇಟಿ ಹಾಗೂ ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ ನಡೆಯಲಿದ್ದು, ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದರು.
ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಬಿ.ಎಲ್.ಒ.ಗಳು ಜೂ. 30 ರಿಂದ ಜು. 29 ರ ವರೆಗೆ ಪೂರ್ವ ಮುದ್ರಿತ ನಮೂನೆಗಳನ್ನು ಪ್ರತಿ ಮನೆಗೆ ಭೇಟಿ ನೀಡಿ, ಪೂರ್ವ ಮಾಹಿತಿಯುಳ್ಳ ಗಣತಿ ನಮೂನೆಯನ್ನು ದ್ವಿಪ್ರತಿಯಲ್ಲಿ ವಿತರಿಸಿ, ಅವುಗಳನ್ನು ಭರ್ತಿ ಮಾಡಲು ಮಾರ್ಗದರ್ಶನ ನೀಡಲಿದ್ದಾರೆ. ಒಂದೊಮ್ಮೆ ಗಣತಿ ಸಮಯದಲ್ಲಿ ಮತದಾರರ ಮನೆಗೆ ಬೀಗ ಹಾಕಿದ್ದರೆ, ಅಧಿಕಾರಿಗಳು ಕನಿಷ್ಠ ಮೂರು ಬಾರಿ ಆ ಮನೆಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಲು ಪ್ರಯತ್ನಿಸಬೇಕು. ಎರಡನೇ ಭೇಟಿಯಲ್ಲಿ ಬಿ.ಎಲ್.ಒಗಳು ಮತದಾರರು ಭರ್ತಿ ಮಾಡಿದ ಫಾರಂ ಅನ್ನು ಸಂಗ್ರಹಿಸಿ ಸ್ವೀಕೃತಿ ನೀಡುತ್ತಾರೆ. ನಮೂನೆಯಲ್ಲಿ ಮತದಾರರ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿರಬೇಕು ಜೊತೆಗೆ ಭರ್ತಿ ಮಾಡಿದ ಫಾರಂಗಳ ಮೇಲೆ ಮತದಾರರ ಸಹಿ ಅಥವಾ ಹೆಬ್ಬೆರಳ ಗುರುತು ಕಡ್ಡಾಯವಾಗಿರಬೇಕು ಎಂದರು.
ಆ. 5 ರಿಂದ ಸೆ.4 ರ ವರೆಗೆ ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ. ಜೊತೆಗೆ ಆ. 5 ರಿಂದ ಅ. 3 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ನೈಜತೆಯನ್ನು ಪರಿಶೀಲಿಸುವ ಕಾರ್ಯ ನಡೆಯಲಿದೆ. ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದ ಅವರು, ಮನೆ ಭೇಟಿ ಸಂದರ್ಭ ಮತದಾರರು ಯಾವುದೇ ಪ್ರತಿಕ್ರಿಯೆ ನೀಡದಿದ್ದಲ್ಲಿ ಅಥವಾ ಫಾರಂಗಳನ್ನು ಸ್ವೀಕರಿಸದೇ ಇದ್ದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇರುವುದಿಲ್ಲ ಎಂದರು.
ಎನುಮರೇಷನ್ ಫಾಮ್ಗಳನ್ನು ಬಿ.ಎಲ್.ಓ ಗಳೇ ವಿತರಿಸಬೇಕು. ಬಿ.ಎಲ್.ಎ ಗಳು ವಿತರಿಸಲು ಅವಕಾಶವಿರುವುದಿಲ್ಲ. ಭರ್ತಿ ಮಾಡಿದ ನಮೂನೆಯನ್ನು ಮತದಾರರು ಕಡ್ಡಾಯವಾಗಿ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬೇಕು. ಅಧಿಕಾರಿಗಳು ಭರ್ತಿ ಮಾಡಿದ ನಮೂನೆ ಮತ್ತು ಅಗತ್ಯ ದಾಖಲೆಗಳನ್ನು ಪಡೆದು, ಒಂದು ಪ್ರತಿಗೆ ಸ್ವೀಕೃತಿ ನೀಡಬೇಕು. ಮತದಾರರು ದಾಖಲೆಗಳೊಂದಿಗೆ ಭರ್ತಿ ಮಾಡಿದ ನಮೂನೆಯನ್ನು ಆನ್ಲೈನ್ ಮೂಲಕವೂ ಅಪ್ಲೋಡ್ ಮಾಡಬಹುದು ಎಂದು ತಿಳಿಸಿದರು.
ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರು ಹಾಗೂ ಜಿಲ್ಲಾ ಮಾಸ್ಟರ್ ಟ್ರೈನರ್ ಆದ ಗಂಗಾಧರ್ ವಿ.ಎ, ಎಸ್.ಐ.ಆರ್ ಪ್ರಕ್ರಿಯೆಯ ವಿವಿಧ ಹಂತಗಳಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡುವುದು, ಅಗತ್ಯ ನಮೂನೆಗಳು ಹಾಗೂ ದಾಖಲೆಗಳ ಮುದ್ರಣ, ಮತಗಟ್ಟೆಗಳ ಮರುಹೊಂದಿಕೆ, ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯ ಸಂಗ್ರಹ ಮತ್ತು ಪರಿಶೀಲನೆ, ಕರಡು ಮತದಾರರ ಪಟ್ಟಿಯ ಪ್ರಕಟಣೆ, ಹಕ್ಕು ಮತ್ತು ಆಕ್ಷೇಪಣೆಗಳ ಸ್ವೀಕಾರ, ಅರ್ಜಿಗಳ ಪರಿಶೀಲನೆ ಹಾಗೂ ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ ಸೇರಿದಂತೆ ಎಸ್ಐಆರ್ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಬಿ.ಎಲ್.ಎ ಗಳು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ ಪ್ರಕ್ರಿಯೆ ಕುರಿತ ಸಂದೇಹಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಪ್ರಶ್ನಿಸಿ, ತಮ್ಮ ಸಂದೇಹಗಳಿಗೆ ಉತ್ತರ ಪಡೆದುಕೊಂಡರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಕಾಪು ತಹಶೀಲ್ದಾರ್ ಅನಂತ ಶಂಕರ ಬಿ, ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿ.ಎಲ್.ಓ, ಬಿ.ಎಲ್.ಎ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
