ಮೂಡುಬಿದಿರೆ ತಾಲೂಕಿನ ಜ್ಞಾನವಿಕಾಸ ಯೋಜನೆಯ ಅಂತರ್ಗತವಾಗಿ ವಾಲ್ಪಾಡಿ ಗ್ರಾಮದ ಪೆರಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 15ರಂದು ಶಿಕ್ಷಣದಲ್ಲಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾತ್ರದ ಕುರಿತು ಸಂವಾದ ಚರ್ಚೆ ನಡೆಯಿತು. ಸಂವಾದ ಚರ್ಚೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಗ್ರಾಹಕ ಸಂಘಟನೆಯ ಸಂಪನ್ಮೂಲ ವ್ಯಕ್ತಿ, ಕಾರ್ಯನಿರತ ಪತ್ರಕರ್ತ ರಾಯಿ ರಾಜ ಕುಮಾರ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅವರು ತಮ್ಮ ಭಾಷಣದಲ್ಲಿ ಶಿಕ್ಷಕರ ಹಾಗೂ ಪೋಷಕರಿಂದ ನಿರೀಕ್ಷಿಸುವ ವಿವಿಧ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಣಕ್ಕೆ ಪೂರಕವಾಗಿ ಪೋಷಕರು ಹಾಗೂ ಶಿಕ್ಷಕರು ವಹಿಸಬೇಕಾದ ಜವಾಬ್ದಾರಿಗಳ ಕುರಿತಾಗಿಯೂ ತಿಳಿ ಹೇಳಿದರು. ಅಲ್ಲದೆ ಶಿಕ್ಷಣ ಸಂಸ್ಥೆಯ ರೂಪುರೇಷೆ, ಕಾರ್ಯಗಳು, ಜವಾಬ್ದಾರಿಯನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸರಕಾರಿ ಶಾಲೆಗಳು ಎಷ್ಟು ಪ್ರಯೋಜನಕಾರಿ, ಪರಿಸರ ರಕ್ಷಣೆಯ ವಿಷಯದಲ್ಲಿಯೂ ಎಷ್ಟು ಜವಾಬ್ದಾರಿಗಳನ್ನು ಹೊಂದಿವೆ ಎನ್ನುವುದನ್ನು ಹಲವಾರು ಉದಾಹರಣೆಗಳ ಮೂಲಕ ಮನವರಿಕೆ ನಡೆಸಿಕೊಟ್ಟರು.



ಧರ್ಮಸ್ಥಳ ಜ್ಞಾನ ವಿಕಾಸ ಯೋಜನೆಯ ಅಧಿಕಾರಿ ಮಲ್ಲಿಕಾ ಸ್ವಾಗತಿಸಿ, ವಂದಿಸಿದರು. ಯೋಜನೆಯ ಜಿಲ್ಲಾ ಮಟ್ಟದ ಅಧಿಕಾರಿ ಅಮೃತಾ ಶೆಟ್ಟಿ ಪ್ರಾಸ್ತಾವಿಕ ಮಾತುಗಳಲ್ಲಿ ಯೋಜನೆಯ ಮುಖ್ಯ ಕಾರ್ಯಾನುಕೂಲತೆಯ ಅಂಶಗಳನ್ನು ತಿಳಿಸಿದರು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು.
