ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಶ್ರೀ ಜೈನ ಮಠ, ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಯೋಗ ಶಿಬಿರವು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳ ದಿವ್ಯ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಿತು.
ಜೂನ್ 20ರಂದು ಸ್ವಸ್ತಿಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಆಯೋಜಿಸಲಾದ ಯೋಗ ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳ ಅಭ್ಯಾಸ ನಡೆಸಿದರು.





ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಯಾತ್ರಾರ್ಥಿಗಳು ಶ್ರೀಗಳೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸ್ವಾಮೀಜಿಗಳು ಯೋಗದ ಮಹತ್ವವನ್ನು ವಿವರಿಸುತ್ತಾ ಪದ್ಮಾಸನ, ಪರ್ವತಾಸನ, ಅನುಲೋಮ-ವಿಲೋಮ ಮೊದಲಾದ ಆಸನಗಳ ಬಗ್ಗೆ ಮಾಹಿತಿ ನೀಡಿದರು.
ಅಲ್ಲದೆ ಮಯೂರಾಸನ, ಗೋರಕ್ಷಾಸನ, ಗರುಡಾಸನ, ಬ್ರಹ್ಮಚರ್ಯಾಸನ, ಶೀರ್ಷಾಸನ ಹಾಗೂ ಸರ್ವಾಂಗಾಸನಗಳಂತಹ ಉನ್ನತ ಮಟ್ಟದ ಆಸನಗಳನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿ, ಅವುಗಳ ಆರೋಗ್ಯಕರ ಪ್ರಯೋಜನಗಳನ್ನು ವಿವರಿಸಿದರು.
ಯೋಗವು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಿ ಶಾಂತಿ, ಆರೋಗ್ಯ ಹಾಗೂ ಆತ್ಮವಿಕಾಸಕ್ಕೆ ನೆರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ಹತ್ತು ನಿಮಿಷಗಳಾದರೂ ಯೋಗಾಭ್ಯಾಸವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿಗಳು ಕರೆ ನೀಡಿದರು.
