ಮಂಗಳೂರು: ಶ್ರೀ ಕಟೀಲು ಮೇಳದಲ್ಲಿ 19 ತಿರುಗಾಟ ಪೂರೈಸಿರುವ ತೆಂಕು ತಿಟ್ಟಿನ ಪ್ರಾತಿನಿಧಿಕ ಯಕ್ಷಗಾನ ಹಾಸ್ಯಗಾರ ಚಾರ್ಮಾಡಿ ಬಾಬು ಗೌಡ ಅವರಿಗೆ ಕದ್ರಿ ಯಕ್ಷ ಬಳಗವು “ಕದ್ರಿ ವಿಷ್ಣು ಪ್ರಶಸ್ತಿ -2026” ನೀಡಿ ಗೌರವಿಸಲಿದೆ.

ಬಾಬು ಗೌಡ ಅವರು ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಕಾರ್ಗಲ್ಲು ವಿಶ್ವೇಶ್ವರ ಭಟ್, ಕೆ ಗೋವಿಂದ ಭಟ್ ಅವರಿಂದ ಯಕ್ಷ ಶಿಕ್ಷಣ ಪಡೆದು ಸುಂಕದಕಟ್ಟೆ ಮೇಳದಲ್ಲಿ 16 ತಿರುಗಾಟ ನಡೆಸಿ ಮುಂದೆ ಕಟೀಲು ಮೇಳದಲ್ಲಿ ಹಾಸ್ಯ ಗಾರರಾಗಿ ಮುನ್ನಡೆದವರು.
ಬಾಹುಕ, ಪಾಪಣ್ಣ, ಮಾಲಿನಿ ದೂತ, ನಾರದ, ಬೃಹಸ್ಪತಿ ಮೊದಲಾದ ಪಾತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದವರು.
ಕದ್ರಿ ವಿಷ್ಣು ಸಂಸ್ಮರಣೆ
ಇಚ್ಲಂಪಾಡಿ, ಕೂಡ್ಲು, ಕೊರಕೋಡು, ಅಡೂರು, ಕುಂಡಾವು, ಕದ್ರಿ, ಧರ್ಮಸ್ಥಳ, ಕಟೀಲು ಮೇಳಗಳಲ್ಲಿ ತೆಂಕು ತಿಟ್ಟಿನ ರಾಜಕಿರೀಟ ವೇಷದಲ್ಲಿ ಅಪೂರ್ವ ಸಾಧನೆ ಗೈದಿದ್ದ, ಅರ್ಜುನ, ಋತುಪರ್ಣ, ಇಂದ್ರಜಿತು, ಹಿರಣ್ಯಾಕ್ಷ ಮೊದಲಾದ ಪಾತ್ರಗಳಲ್ಲಿ ಮೆರದಿದ್ದ ಮೇರು ಕಲಾವಿದ ಕದ್ರಿ ವಿಷ್ಣು ಅವರ ಸಂಸ್ಮರಣೆಯು ನಡೆಯಲಿದೆ.
ಡಿ. 4 ಶುಕ್ರವಾರ ಶ್ರೀ ಕ್ಷೇತ್ರ ಕದ್ರಿಯಲ್ಲಿ ಶ್ರೀ ಕಟೀಲು ಮೇಳದವರಿಂದ ಕದ್ರಿ ಯಕ್ಷ ಬಳಗದ ದಶಮ ಸಂಭ್ರಮ, “ಛಾಯಾ ನಂದನ” ಸೇವೆ ಬಯಲಾಟದಂದು “ಕದ್ರಿ ವಿಷ್ಣು ಪ್ರಶಸ್ತಿ-2026 ‘ಪ್ರದಾನ ಮಾಡಲಾಗುವುದು ಎಂದು ಕದ್ರಿ ಯಕ್ಷ ಬಳಗದ ಕದ್ರಿ ನವನೀತ ಶೆಟ್ಟಿ, ಪುರುಷೋತ್ತಮ ಭಂಡಾರಿ ಅಡ್ಯಾರ್, ಪ್ರದೀಪ್ ಆಳ್ವ ಕದ್ರಿ, ಶಿವ ಪ್ರಸಾದ್ ಪ್ರಭು ತಿಳಿಸಿದ್ದಾರೆ.
