“ಕೊಂಕಣಿ ನಮ್ಮ ಹೃದಯದ ಭಾಷೆ” – ಡಾ. ಉದಯ್‌ ರಾಯ್ಕರ್‌

ಕಾರವಾರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಕಲಾ ಸಾಹಿತ್ಯ ಸಾಂಸ್ಕೃತಿಕ ಸಂಘಟನೆ, ಕಾರವಾರ ಇದರ ಸಹಯೋಗದಲ್ಲಿ ಶಿವಾಜಿ ಶಿಕ್ಷಣ ಸಂಸ್ಥೆಯ ಶಂಕರ ಬಾಬಿ ಸಾಮಂತ ಸಭಾಭವನ, ಬಾಡ, ಕಾರವಾರದಲ್ಲಿ ಉತ್ತರ ಕನ್ನಡ ಜಿಲ್ಲಾಮಟ್ಟದ ʼಕೊಂಕ್ಣಿ ಸಂಭ್ರಮ್‌ʼ ಕೊಂಕಣಿ ಸಮ್ಮೇಳನವು ವಿಜೃಂಭಣೆಯಿಂದ ನಡೆಯಿತು.

ಸಮ್ಮೇಳನಾಧ್ಯಕ್ಷರಾಗಿ ಡಾ. ಉದಯ್‌ ರಾಯ್ಕರ್‌ರವರು ಉಪಸ್ಥಿತರಿದ್ದು, ಸಭೆಯನ್ನು ಉದ್ದೇಶಿಸಿ ಮಾತನಾಡಿ “ಕೊಂಕಣಿ ನಮ್ಮ ಹೃದಯದ ಭಾಷೆ, ಆದರೆ ನಮ್ಮ ಈ ಮಾತೃಭಾಷೆಯ ಮೇಲೆ ಇತರ ಆಡುಭಾಷೆಗಳ ಪ್ರಭಾವ ಹೆಚ್ಚಿದೆ. ಹೀಗಾಗಿ ಕೊಂಕಣಿ ಭಾಷೆಯ ಶ್ರೀಮಂತಿಕೆ ದಿನದಿನವೂ ಕ್ಷೀಣಿಸುತ್ತಿದೆ. ಇದಕ್ಕೆ ಆಸ್ಪದ ಕೊಡದೆ ಕೊಂಕಣಿಯನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡಲು ನಾವೆಲ್ಲರೂ ಬದ್ಧರಾಗಬೇಕು” ಎಂದು ಹೇಳಿದರು. ಕಾರ್ಯಕ್ರಮದ ಸಂಘಟಕರಾದ ಡಾ. ವಸಂತ್‌ ಬಾಂದೇಕರ್‌ರವರು ಸರ್ವರನ್ನು ಸ್ವಾಗತಿಸಿದರು. ಅಕಾಡೆಮಿಯ ಅಧ್ಯಕ್ಷರ ಅನುಪಸ್ಥಿತಿಯಲ್ಲಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಕಾಡೆಮಿ ಸದಸ್ಯರಾದ ಸುನಿಲ್‌ ಸಿದ್ಧಿ ಇವರು ಅಕಾಡೆಮಿಯ ಈವರೆಗಿನ ಕೆಲಸ ಕಾರ್ಯಗಳ ಪಕ್ಷಿನೋಟವನ್ನು ಸಭೆಯ ಮುಂದೆ ಮಂಡಿಸಿದರು. ಮುಖ್ಯ ಅತಿಥಿಗಳಾದ ಫಾ. ಥಾಮಸ್‌ ಫೆರ್ನಾಂಡಿಸ್‌ರವರು ಮಾತನಾಡಿ “ನಾವು ಕೊಂಕಣಿಗರು, ನಮ್ಮ ಮಾತೃಭಾಷೆ ಕೊಂಕಣಿ ಎಂದು ನಮಗೆಲ್ಲರಿಗೂ ಹೆಮ್ಮೆಯಿರಬೇಕು. ಕೊಂಕಣಿಗರು ಉಪ್ಪು ಇದ್ದ ಹಾಗೆ. ನಮ್ಮ ಜನಸಂಖ್ಯೆ ಕಡಿಮೆಯಿರಬಹುದು. ಆದರೆ ನಾವು ನಮ್ಮ ದೇಶಕ್ಕೆ, ಸಮಾಜಕ್ಕೆ ರುಚಿ ಕೊಡಲು ಅಗತ್ಯವಾಗಿದ್ದೇವೆ.” ಎಂದು ಹೇಳಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಖ್ಯಾತ ಸಂಗೀತ ಗುರುಗಳಾದ ಪಂಡಿತ್‌ ಚಂದ್ರಕಾಂತ ವಿಶ್ವನಾಥ ಗಡ್ಕರ್‌ ಹಾಗೂ ಸೈಂಟ್‌ ಮಿಲಾಗ್ರಿಸ್‌ ಕ್ರೆಡಿಟ್‌ ಕೊ-ಅಪರೇಟಿವ್‌ ಸೊಸೈಟಿಯ ಅಧ್ಯಕ್ಷರಾದ ಜೋರ್ಜ್‌ ಎಸ್‌. ಫೆರ್ನಾಂಡಿಸ್‌ರವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ʼಕೊಂಕಣಿ ನಿನ್ನೆ, ಇಂದು ಮತ್ತು ನಾಳೆ ಎಂಬ ವಿಷಯದ ಮೇಲೆ ಡಾ. ಅರವಿಂದ ಶಾನಭಾಗ ಮತ್ತು ಸ್ಟೀವನ್‌ ಕ್ವಾಡ್ರಸ್‌ ಇವರಿಂದ ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮದ ಕೊನೆಗೆ ಸಿದ್ಧಿ ದಮಾಮಿ ನೃತ್ಯ, ಕೊಂಕಣಿ ಖಾರ್ವಿ ನೃತ್ಯ, ಕೊಂಕಣಿ ಬಾವಲ್ಯಾ ಖೇಳ (ಗೊಂಬೆಯಾಟ) ಹಾಗೂ ಕೊಂಕಣಿ ಮಿಮಿಕ್ರಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಾ. ವಸಂತ್‌ ಬಾಂದೇಕರ್‌ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಗೈದರು.

Leave a Reply

Your email address will not be published. Required fields are marked *