ಮಂಗಳೂರು: ವಿಶಿಷ್ಟ ತಂತ್ರಜ್ಞಾನದ ಮೂಲಕ ಪರಿಸರ ಸ್ನೇಹಿ ತೂಗುಸೇತುವೆಗಳನ್ನು ನಿರ್ಮಿಸಿ ದೇಶದ ಗ್ರಾಮೀಣ ಭಾಗಗಳಲ್ಲಿ ಸಂಪರ್ಕ ಕ್ರಾಂತಿಗೆ ಕಾರಣರಾಗಿದ್ದ, ‘ತೂಗುಸೇತುವೆಗಳ ಸರದಾರ’ ಎಂದೇ ಖ್ಯಾತರಾಗಿದ್ದ ತುಳುನಾಡಿನ ಮಹಾನ್ ಸಾಧಕ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದ. ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ತಮ್ಮಶೋಕ ಸಂದೇಶದಲ್ಲಿ, “ಸಾಮಾನ್ಯ ಹಳ್ಳಿಗಳ ಜನಸಾಮಾನ್ಯರ ಹಾಗೂ ಶಾಲಾ ಮಕ್ಕಳ ಕಷ್ಟಗಳಿಗೆ ಸ್ಪಂದಿಸಿ, ತಮ್ಮ ಇಂಜಿನಿಯರಿಂಗ್ ಕೌಶಲ್ಯವನ್ನು ಗ್ರಾಮೀಣ ಜನರ ಸೇವೆಗೆಧಾರೆ ಎರೆದ ಮಹಾನ್ ಚೇತನ ಡಾ. ಗಿರೀಶ್ ಭಾರದ್ವಾಜ್ ಅವರು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದ ನೂರಾರು ಹಳ್ಳಿ ಗಾಡಿನಲ್ಲಿ ಅವರು ನಿರ್ಮಿಸಿಕೊಟ್ಟ 150ಕ್ಕೂ ಹೆಚ್ಚು ತೂಗುಸೇತುವೆಗಳು ಕೇವಲ ನದಿ-ಹೊಳೆಯ ಎರಡು ದಂಡೆಗಳನ್ನು ಜೋಡಿಸಲಿಲ್ಲ; ಬದಲಿಗೆ ಸಾವಿರಾರು ಗ್ರಾಮೀಣ ಜನರ ಬದುಕಿಗೆ ಹೊಸ ಭರವಸೆಯ ದಾರಿಯನ್ನು ತೋರಿಸಿವೆ. ಅವರ ಈ ತಂತ್ರಜ್ಞಾನ ಸೇವೆಗೆ ಮನಸೋತ ಗ್ರಾಮಸ್ಥರು ಅವರನ್ನು ಪ್ರೀತಿಯಿಂದ ‘ಸುಳ್ಯದ ವಿಶ್ವೇಶ್ವರಯ್ಯ’ ಎಂದೇ ಕರೆಯುತ್ತಿದ್ದರು ಎನ್ನುವುದು ತಳುನಾಡಿಗೆ ಹೆಮ್ಮೆಯ ವಿಚಾರ ಎಂದು ಕ್ಯಾ. ಚೌಟ ಅವರು ಭಾರದ್ವಾಜ್ ಅವರ ಗಮನಾರ್ಹ ಸೇವೆಯನ್ನು ಸ್ಮರಿಸಿದ್ದಾರೆ.
“ಭಾರದ್ವಾಜ್ ಅವರ ಸೇವೆಗಾಗಿ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರವು ದೇಶದ ಅತ್ಯುನ್ನತ ‘ಪದ್ಮಶ್ರೀʼ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಹೀಗಿರುವಾಗ, ಅವರ ಅಗಲುವಿಕೆಯಿಂದಾಗಿ ದೇಶವು ಒಬ್ಬ ಅಪರೂಪದ ತಾಂತ್ರಿಕ ತಪಸ್ವಿಯನ್ನು ಕಳೆದುಕೊಂಡಂತಾಗಿದೆ. ಈ ಅಗಲಿಕೆಯ ನೋವನ್ನು ಭರಿಸುವಂಥ ಶಕ್ತಿಯನ್ನು ಅವರ ಕುಟುಂಬಸ್ಥರು ಹಾಗೂ ಬಂಧು-ಬಳಗಕ್ಕೆ ಭಗವಂತನು ನೀಡಲಿ” ಎಂದು ಕ್ಯಾ. ಬ್ರಿಜೇಶ್ ಚೌಟ ಅವರು ತಮ್ಮ ನುಡಿನಮನದಲ್ಲಿ ಕಂಬನಿ ಮಿಡಿದಿದ್ದಾರೆ.
