ಮಂಗಳೂರು: ಸಮಾಜದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ನಾಯಕತ್ವ ಗುಣಗಳ ವಿಕಸನ ಹಾಗೂ ಜೀವನ ಕೌಶಲ್ಯಗಳ ಅಭಿವೃದ್ಧಿಯನ್ನು ಉದ್ದೇಶವಾಗಿಟ್ಟುಕೊಂಡು, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರದ ಸಹಯೋಗದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ.) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ವಸತಿ ಸಹಿತ ಚಟುವಟಿಕೆ ಆಧಾರಿತ ‘ಪ್ರಗತಿ ಸ್ಪೂರ್ತಿ ಮತ್ತು ಉನ್ನತಿ–2026’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರಕ್ಕೆ ಗುರುವಾರ ಭವ್ಯ ಚಾಲನೆ ದೊರೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ. ನಂದಗೋಪಾಲ ಶೆಣೈ ಅವರು, “ಶಿಕ್ಷಣವೆಂದರೆ ಕೇವಲ ಪಠ್ಯಾಧಾರಿತ ಜ್ಞಾನವಲ್ಲ, ಅದು ವ್ಯಕ್ತಿಯ ಸರ್ವತೋಮುಖ ವ್ಯಕ್ತಿತ್ವ ರೂಪುಗೊಳಿಸುವ ಪ್ರಕ್ರಿಯೆ. ಜ್ಞಾನಕ್ಕೆ ಕೌಶಲ್ಯ, ಮೌಲ್ಯಗಳು ಮತ್ತು ಸೇವಾ ಮನೋಭಾವಗಳು ಸೇರಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಮಾತೃ ಭಾಷೆ ಕೊಂಕಣಿ ನಮ್ಮ ಅಸ್ತಿತ್ವದ ಪ್ರತೀಕವಾಗಿದ್ದು, ಯುವಜನತೆಯಲ್ಲಿ ಆತ್ಮವಿಶ್ವಾಸ ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸುತ್ತದೆ” ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಡಿ. ರಮೇಶ ನಾಯಕ್ ಮೈರಾ ಅವರು, “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯಜ್ಞಾನದ ಜೊತೆಗೆ ಸಂವಹನ ಕೌಶಲ್ಯ, ನಾಯಕತ್ವ ಗುಣ, ಸಮಯ ನಿರ್ವಹಣೆ, ತಂತ್ರಜ್ಞಾನ ಜ್ಞಾನ ಹಾಗೂ ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ನೈಜ ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತವೆ” ಎಂದರು. ಸುಮಾರು 75 ವಿದ್ಯಾರ್ಥಿಗಳು ಮೂರು ಹಂತಗಳಲ್ಲಿ ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ವಿಶ್ವ ಕೊಂಕಣಿ ಕೇಂದ್ರದ ಹಿರಿಯ ಉಪಾಧ್ಯಕ್ಷ ವಿಲಿಯಂ ಡಿಸೋಜಾ ಮಾತನಾಡಿ, “ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಮಾನತೆ, ಸ್ನೇಹ, ಪರಸ್ಪರ ಸಹಕಾರ ಮತ್ತು ಸಮಾಜದೊಂದಿಗೆ ಬಾಂಧವ್ಯವನ್ನು ಬೆಳೆಸುತ್ತವೆ. ಭಾಷೆ, ಸಂಸ್ಕೃತಿ ಹಾಗೂ ನಾಯಕತ್ವ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ್ ಪೈ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಪ್ರಭು ವಗ್ಗ, ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷ ದಯಾನಂದ ನಾಯಕ್ ಪುಂಜಾಲಕಟ್ಟೆ, ಕಾರ್ಯದರ್ಶಿ ಸುಧಾಕರ ಪ್ರಭು ಪೆರ್ಮರೋಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸುರೇಂದ್ರ ಸಾಮಂತ್, ಮೋಹನ್ ನಾಯಕ್ ಒಡ್ಡೂರು, ರವೀಂದ್ರ ನಾಯಕ್ ಕುಂಟಲ್ಪಾಡಿ, ಸಂಜೀವ ಸಾಮಂತ್ ಮರೋಳಿ, ದಿವಾಕರ ಶೆಣೈ ಮರೋಳಿ, ನಿಕಟಪೂರ್ವ ಅಧ್ಯಕ್ಷ ವಿಜಯ ಶೆಣೈ ಕೊಡಂಗೆ ಹಾಗೂ ಸಂಘದ ಪದಾಧಿಕಾರಿಗಳಾದ ಉಪೇಂದ್ರ ನಾಯಕ್ ಮೇರಿಹಿಲ್, ಪ್ರಭಾಕರ ಶೆಣೈ ಗುರುನಗರ, ಅನಂತ ಪ್ರಭು ಮರೋಳಿ, ಶ್ರೀಮತಿ ಸುಚಿತ್ರ ರಮೇಶ ನಾಯಕ್, ಗಣೇಶ ಪ್ರಭು ಓಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಾಗಾರದ ಮುಖ್ಯ ತರಬೇತುದಾರರಾದ ಕುಡ್ಪಿ ವಿದ್ಯಾಶೆಣೈ ಅವರು ಶಿಬಿರದ ಉದ್ದೇಶ, ಚಟುವಟಿಕೆಗಳು ಹಾಗೂ ನಿರೀಕ್ಷಿತ ಫಲಿತಾಂಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಡಾ. ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಾಲ್ಕು ದಿನಗಳ ಈ ಕಾರ್ಯಾಗಾರದಲ್ಲಿ ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ನಾಯಕತ್ವ ತರಬೇತಿ, ತಂಡ ಕಾರ್ಯಪದ್ಧತಿ, ಸಾಂಸ್ಕೃತಿಕ ಅರಿವು, ಜೀವನ ಮೌಲ್ಯಗಳು ಹಾಗೂ ಉದ್ಯೋಗಾಭಿಮುಖ ಕೌಶಲ್ಯಗಳ ಕುರಿತು ವಿಶೇಷ ತರಬೇತಿ ನೀಡಲಾಗುತ್ತಿದೆ. ಸಮಾಜದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಮಹತ್ವದ ಹೆಜ್ಜೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
