ಮಂಗಳೂರು: ಮಳೆಗಾಲ-ನೆರೆ ಸಂಭಾವ್ಯ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಿ – ದಿನೇಶ್ ಗುಂಡೂರಾವ್

ಮಂಗಳೂರು: ಮುಂಬರುವ ಮಳೆಗಾಲದಲ್ಲಿ ನೆರೆ ಮತ್ತು ನೀರು ನಿಲ್ಲಬಹುದಾದ ಪ್ರದೇಶಗಳನ್ನು  ಮೊದಲೇ ಗುರುತಿಸಿ  ಅಗತ್ಯ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲ ಪೂರ್ವ ಸಿದ್ಧತೆ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ವರ್ಷ ನೆರೆ ಬಂದ ಪ್ರದೇಶಗಳು ಹಾಗೂ ಭೂಕುಸಿತವಾದ ಜನವಸತಿ ಪ್ರದೇಶಗಳಿಗೆ  ಅಧಿಕಾರಿಗಳು  ತಕ್ಷಣವೇ ಭೇಟಿ ನೀಡಿ ದುರಂತ ಅಪಾಯ ತಡೆಯಲು ಈಗಿಂದಲೇ ಕ್ರಮವಹಿಸಬೇಕು. ಚರಂಡಿ ರಾಜಕಾಲುವೆಗಳ ಹೂಳೆತ್ತುವ ಕಾರ್ಯವನ್ನು ತ್ವರಿತಗೊಳಿಸಬೇಕು. ಈ ಸಂಬಂಧ ಇಲಾಖೆಗಳು ಪರಸ್ಪರ  ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ಮಾತನಾಡಿ,  ಚರಂಡಿ ಮತ್ತು ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ.  ಸಮುದ್ರ ಕೊರೆತ ಉಂಟಾಗಬಹುದಾದ 8 ಪ್ರದೇಶಗಳನ್ನು ಗುರುತಿಸಿ ಅಪಾಯದ ಪ್ರಮಾಣವನ್ನು ತಗ್ಗಿಸಲು ಕ್ರಮವಹಿಸಲಾಗಿದೆ.  ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ವಿಪತ್ತು ನಿರ್ವಹಣೆಗೆ  ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಎಸ್.ಡಿ.ಆರ್.ಎಫ್ ತಂಡ  ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್.ಡಿ.ಆರ್.ಎಫ್) ಮೇ ಅಂತ್ಯಕ್ಕೆ ಆಗಮಿಸುವ  ಸಾಧ್ಯತೆ ಇದೆ ಎಂದು ಅವರು ಹೇಳಿದರು. ಸಂಭವನೀಯ  ಪ್ರವಾಹ ಪೀಡಿತ  92 ಪ್ರದೇಶಗಳನ್ನು ಹಾಗೂ ಭೂ ಕುಸಿತ ಉಂಟಾಗಬಹುದಾದ  88 ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ  ನೀಡಲಾಗುತ್ತಿದೆ ಎಂದು ಹೇಳಿದರು.  
ಮಂಗಳೂರು ನಗರದಲ್ಲಿ ರಾಜಕಾಲುವೆಗಳ ಬೃಹತ್ ಚರಂಡಿಗಳ ಹೂಳನ್ನು  ಜೆಸಿಬಿ ಮೂಲಕ ತೆಗೆಯಲಾಗುತ್ತಿದ್ದು, ಈಗಾಗಲೇ ಬಹುತೇಕ ರಾಜಕಾಲುವೆಗಳ ಹೂಳು ತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ನರ್ವಾಡೆ ವಿನಾಯಕ್ ಕಾರ್ಬಾರಿ, ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಡಿ.ಸಿ.ಎಫ್ ರವಿಶಂಕರ್, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮತ್ತಿತರರು  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *