ಉಡುಪಿ: ಸಾಮಾಜಿಕ ನ್ಯಾಯದ ಹರಿಕಾರ ದಿವಂಗತ ಡಿ. ದೇವರಾಜ ಅರಸು ರವರು ತಮ್ಮ ಆಡಳಿತದ ಅವಧಿಯಲ್ಲಿ ಸಮಸಮಾಜ ನಿರ್ಮಾಣದ ರೂವಾರಿಯಾಗಿ, ಹಿಂದುಳಿದ ವರ್ಗದವರ ಹಾಗೂ ದೀನ ದಲಿತರ ಏಳಿಗೆಗೆ ಧ್ವನಿಯಾಗಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯೊಂದಿಗೆ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.



ಅವರು ನಗರದ ಮಿಷನ್ ಕಂಪೌಂಡ್ನ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಉಡುಪಿ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಪರಿವರ್ತನೆಯ ಹರಿಕಾರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ರವರ 111 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ದೇವರಾಜ ಅರಸು ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
12 ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದರು. ದೇವರಾಜ ಅರಸುರವರು ಅದನ್ನು ಮುಂದುವರೆಸಿಕೊಂಡು ಹೋಗುವುದರೊಂದಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಇಂದಿನ ಯುವಜನತೆ ದೇವರಾಜ ಅರಸುರವರನ್ನು ನೋಡಿಲ್ಲವಾದದೂ ಸಹ ಅವರು ಜಾರಿಗೆ ತಂದಿರುವ ಸಾಮಾಜಿಕ ಕಾರ್ಯಕ್ರಮಗಳು ನಮ್ಮ ಕಣ್ಣ ಮುಂದೆ ಇದೆ ಎಂದರು.
ಕರ್ನಾಟಕ ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ ಡಿ. ದೇವರಾಜ ಅರಸು ಅವರು. ದಮನಿತರ ಅಭಿವೃದ್ಧಿಗೆ ಶ್ರಮಿಸಿದ ಶ್ರೀಮಂತ ವ್ಯಕ್ತಿತ್ವ ಅರಸು ಅವರದ್ದು. ರಾಜ್ಯದಲ್ಲಿ ಒಂದಿಂಚು ನೆತ್ತರು ಹರಿಸದೇ ಉಳುವವನನ್ನೇ ಭೂಮಿಯ ಒಡೆಯನ್ನಾಗಿ ಮಾಡಿದ ಧೀಮಂತ ನಾಯಕ ಅರಸುರವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿರುವ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.
ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಡಿ. ದೇವರಾಜ ಅರಸು ರವರು ರೈತರ ಹಾಗೂ ಬಡಜನರ ಬದುಕಿಗೆ ಆಶಾಕಿರಣವಾಗಿದ್ದರು. ಅಸ್ಪೃಶ್ಯತೆ, ಜೀತಪದ್ಧತಿ ಸೇರಿದಂತೆ ಮತ್ತಿತರ ಸಾಮಾಜಿಕ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಅಡಿಪಾಯ ಹಾಕಿದ್ದರು. ಯಾವುದೇ ವ್ಯಕ್ತಿ ಜನಪರ ಕೆಲಸಗಳನ್ನು ಮಾಡಿದಾಗ ಅವರು ಎಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಜೀವಂತ ಉಳಿಯಲಿದ್ದಾರೆ ಎನ್ನುವುದಕ್ಕೆ ಡಿ. ದೇವರಾಜ ಅರಸು ರವರು ಜಾರಿಗೆ ತಂದ ಕಾರ್ಯಕ್ರಮಗಳೇ ಸೂಕ್ತ ನಿದರ್ಶನ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ದೀರ್ಘಕಾಲ ಆಡಳಿತ ನಡೆಸಿ, ಹಿಂದುಳಿದ ವರ್ಗಗಳು ಮತ್ತು ದೀನದಲಿತರ ಪರವಾಗಿ ಅನೇಕ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟ ದಿಟ್ಟ ಮನುಷ್ಯ ದೇವರಾಜ ಅರಸು ರವರು. ವಿದ್ಯಾರ್ಥಿಗಳು ಇಂತಹ ಮಹನೀಯರುಗಳ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಂಡು
ಶಿಕ್ಷಣವಂತರಾಗುವುದರೊಂದಿಗೆ ನಾಡು, ದೇಶ – ರಾಷ್ಟ್ರಗಳಿಗೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುವಂತಾಗಲಿ ಎಂದು ಆಶಿಸಿದರು.
ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಸಮಾಜದಲ್ಲಿ ಸಮಾನತೆಯನ್ನು ಸಾರಿರುವ ದೇವರಾಜ ಅರಸುರವರು ಶೋಷತರಿಗೆ ಶಕ್ತಿ ತುಂಬಿ ಮೇಲೆತ್ತಿದವರು. ಡಿ.ದೇವರಾಜ್ ಅರಸು ಅವರು ಕರ್ನಾಟಕದ ರಾಜಕೀಯದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತದ ನಿಜವಾದ ಪ್ರತಿರೂಪವಾಗಿದ್ದರು ಎಂದರು
ಉಡುಪಿ ತಾಲೂಕು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗರಾಜ್ ಅವರು ಡಿ. ದೇವರಾಜ ಅರಸು ರವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಾ, 1915 ರ ಆಗಸ್ಟ್ 20 ರಂದು ಕಲ್ಲಳ್ಳಿಯಲ್ಲಿ ಜನಿಸಿದ ಡಿ. ದೇವರಾಜ ಅರಸರು ಜೀವನದುದ್ದಕ್ಕೂ ಸರಳತೆಯಿಂದಲೇ ಜೀವನ ನಡೆಸಿದ್ದರು. ಅಧಿಕಾರಕ್ಕೆ ಬಂದ 6 ತಿಂಗಳಲ್ಲೆ ಹಿಂದುಳಿದ ವರ್ಗಗಳಿಗೆ ಹೊಸ ಶಕ್ತಿ, ಚೈತನ್ಯ ತುಂಬಿದ್ದರು. ಅವರು ಜಾರಿಗೆ ತಂದಿರುವ ಸಾಮಾಜಿಕ ಸುಧಾರಣೆಗಳು ಇಂದಿಗೂ ಹಲವರ ಬಾಳಿಗೆ ಬೆಳಕಾಗಿದೆ ಎಂದರು.
ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿದ್ದ ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆ ದೇಶದಲ್ಲಿಯೇ ಮಾದರಿಯಾಗಿತ್ತು. ರಾಜ್ಯದಲ್ಲಿ ಜಮೀನ್ದಾರಿ ಪದ್ಧತಿ, ಜೀತ ಪದ್ಧತಿ ಮತ್ತು ತಲೆಮೇಲೆ ಮಲ ಹೊರುವ ಅನಿಷ್ಟ ಪದ್ಧತಿಗಳ ನಿರ್ಮೂಲನೆ, ವಿದ್ಯಾರ್ಥಿಗಳಿಗೆ ಸಹಾಯಧನ, ನಿರುದ್ಯೋಗಿಗಳಿಗೆ ಸ್ಟೈಫಂಡ್, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯ ಸ್ಥಾಪನೆ, ಹಂಚಿ ಹೋಗಿದ್ದ ಕನ್ನಡ ನಾಡನ್ನು “ಕರ್ನಾಟಕ ರಾಜ್ಯ” ಎಂದು ನಾಮಕರಣ ಮಾಡುವುದು ಸೇರಿದಂತೆ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಅವರು ಕೈಗೊಂಡ ಕಲ್ಯಾಣಕಾರಿ ಕ್ರಮಗಳು ಇಂದಿಗೂ ಮಾದರಿಯಾಗಿದೆ. ಪಾರದರ್ಶಕತೆ, ಸರಳತೆ ಹಾಗೂ ನೈತಿಕತೆಗೆ ಹೆಸರಾಗಿದ್ದ ಅವರ ಆಡಳಿತ ಶೈಲಿ ಇಂದಿಗೂ ಸಹ ಜೀವಂತಿಕೆಯಿಂದ ಕೂಡಿದೆ ಎಂದರು.
ಅರಸು ಅವರ ಜೀವನವೇ ಒಂದು ಪಾಠಶಾಲೆಯಿದ್ದಂತೆ. ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಅವರು ಬದ್ಧರಾಗಿ ದುಡಿಯುವುದರ ಮೂಲಕವೇ ನಿಜವಾದ ನಾಯಕತ್ವ ಎಂದರೇನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇಂದಿನ ಪೀಳಿಗೆ ದೇವರಾಜ ಅರಸು ಅವರ ಜೀವನ ಸಾಧನೆ ತಿಳಿದುಕೊಳ್ಳಬೇಕು. ಅವರ ಜೀವನಾದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿಧ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಿ, ಅರಸುರವರ ಮಾತಿನಂತೆ ನಾವೆಲ್ಲರೂ ತಲೆಎತ್ತಿ ನಿಲ್ಲಬಹುದಾದ ಚೇತನರು ಎಂದು ನಿರೂಪಿಸಿದಾಗ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ 2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇಲಾಖಾ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎ.ಎಸ್.ಪಿ ಸುಧಾಕರ್ ನಾಯಕ್, ನಗರಾಭೀವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ಐ.ಟಿ.ಡಿ.ಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಂಕರ್, ವಿದ್ಯಾರ್ಥಿಗಳು, ಹಿಂದುಳಿದ ವರ್ಗಗಳ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ನಿಲಯದ ವಿದ್ಯಾರ್ಥಿನಿಯರಾದ ಚೈತ್ರಾ ಕೆ.ಸಿ ಹಾಗೂ ಗಾನವಿ ನಿರೂಪಿಸಿ, ಉಡುಪಿ ತಾಲೂಕು ಕಲ್ಯಾಣ ಅಧಿಕಾರಿ ಶ್ರೀಕಾಂತ್ ವಂದಿಸಿದರು.
